ಬೀಳುತ್ತ ಬೀಳುತ್ತ ಮೇಲೆ ಕೂಡ ಹೋಗಬಹುದು ಎನ್ನುವುದು ಗೊತ್ತಿದ್ದರೆ, ಜನ ಇಂಥ ಬೀಳುವಿಕೆಯನ್ನೇ ಆಯ್ಕೆ ಮಾಡಿಕೊಳ್ಳುವರು… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಇದು ಒಂದು ಕಥೆ, ಸೂಫಿ ಕಥೆ. ಇದು ನಿಜವಾಗಿಯೂ ಒಂದು ಕಥೆಯೇ, ನಿಜ ಇರಲಾರದು ಆದರೆ ಈ ಕಥೆಯಲ್ಲಿ ಒಂದಿಷ್ಟು ನಿಜ ಇದೆ.
ಒಬ್ಬ ಸೂಫಿ ಅನುಭಾವಿ ಇದ್ದ . ಅವ ಕೊಂಚ ವಿಲಕ್ಷಣ ವ್ಯಕ್ತಿ , ಸ್ವಲ್ಪ ಹುಚ್ಚ ಎಂದೇ ಸುತ್ತಮುತ್ತೆಲ್ಲ ಹೆಸರಾಗಿದ್ದ. ಒಂದು ದಿನ ಅವನು ತನ್ನ ಶಿಷ್ಯನ ಮನೆಗೆ ಕೆಲ ದಿನ ವಿಶ್ರಾಂತಿಗೆಂದು ಬಂದ. ಈ ಮನುಷ್ಯ ಮಹಾ ತರಲೆ ಏನಾದರೂ ಅನಾವಶ್ಯಕ ಉಪದ್ರವ ಮಾಡುತ್ತಾನೆಂದೂ, ಮತ್ತು ತರಲೆ ಮಾಡುವುದನ್ನ ಅವನು ಆನಂದಿಸುತ್ತಾನೆಂದೂ, ಆ ಮನೆಯವರು ಅವನಿಗೆ ನೆಲಮಹಡಿಯಲ್ಲಿ ತಂಗಲು ವ್ಯವಸ್ಥೆ ಮಾಡಿ, ರಾತ್ರಿಯ ಹೊತ್ತಿನಲ್ಲಿ ಹೊರಗಿನಿಂದ ಲಾಕ್ ಮಾಡಿಕೊಂಡು ಬಿಡುತ್ತಿದ್ದರು. ಕೊನೆಪಕ್ಷ ರಾತ್ರಿಯಾದರೂ ಅವನಿಂದ ಯಾವ ತರಲೆ ಆಗಬಾರದೆಂದು ಈ ವ್ಯವಸ್ಥೆ ಮಾಡಲಾಗಿತ್ತು.
ಒಂದು ದಿನ ರಾತ್ರಿ ಅಚಾನಕ್ ಆಗಿ ಮನೆಯ ಮಾಳಿಗೆ ಮೇಲಿಂದ ಜೋರು ಜೋರಾದ ನಗುವಿನ ಸದ್ದು ಕೇಳಿಸತೊಡಗಿತು. ಮನೆಯವರೆಲ್ಲ ಆಶ್ಚರ್ಯದಿಂದ ಮನೆಯ ಮಾಳಿಗೆಗೆ ಹೋಗಿ ನೋಡುತ್ತಾರೆ ಈ ಸದ್ದು ಏನು ಎಂದು ತಿಳಿದುಕೊಳ್ಳಲು. ಸರಿ ರಾತ್ರಿಯಲ್ಲಿ ಸೂಫಿ ಮನೆಯ ಮಾಳಿಗೆ ಮೇಲೆ ಉರುಳಾಡುತ್ತ ಬಿದ್ದು ಬಿದ್ದು ನಗುತ್ತಿದ್ದಾನೆ. ಯಾಕೆ ಈ ನಗು ಎನ್ನುವುದನ್ನ ಮನೆಯವರಿಗೆ ಹೇಳಲಿಕ್ಕೂ ಬಿಡುವಿಲ್ಲದಂತೆ ಸೂಫಿ ನಗಾಡುತ್ತಿದ್ದ.
ಕೊನೆಗೆ ಮನೆಯವರು ಅವನನ್ನು ತಡೆದು ನಿಲ್ಲಿಸಿ, ಯಾಕೆ ಈ ವಿಚಿತ್ರ ನಗು ಎಂದು ಪ್ರಶ್ನೆ ಮಾಡಿದರು.
“ ಇವತ್ತು ನನ್ನೊಂದಿಗೆ ಒಂದು ವಿಚಿತ್ರ ಸಂಭವಿಸಿತು. ಅಚಾನಕ್ ಆಗಿ ನಾನು ಬೀಳತೊಡಗಿದೆ ಆದರೆ ಕೆಳಗೆಲ್ಲ, ಮೇಲೆ ಮೇಲೆ. ನೀವು ನನ್ನ ನೆಲಮಹಡಿಯಲ್ಲಿ ಕೂಡಿ ಹಾಕಿದ್ದೀರಿ ಆದರೆ ನಾನು ಬೀಳುತ್ತ ಬೀಳುತ್ತ ಮಾಳಿಗೆ ಮೇಲೆ ಬಂದೆ. ಅದಕ್ಕೇ ನನಗೆ ನಗು ಬರುತ್ತಿದೆ. ಇದು ಸಾಮಾನ್ಯ ಬೀಳುವಿಕೆ ಅಲ್ಲ. ಜನ ಬೀಳುವಾಗ ಕೆಳಗೆ ಬೀಳುತ್ತ ಹೋಗುತ್ತಾರೆ ಆದರೆ ನಾನು ಬೀಳುತ್ತ ಬೀಳುತ್ತ ಮೇಲೆ ಬಂದೆ. ಆದರೆ ಇದು ನನ್ನ ಉಪದ್ರವ ಎಂದು ನೀವು ತಿಳಿದುಕೊಳ್ಳುತ್ತೀರಿ”. ಸೂಫಿ ಉತ್ತರಿಸಿದ.
ಜನರಿಗೆ, ಬೀಳುವುದೆಂದರೆ ಕೆಳಗೆ ಮಾತ್ರ ಬೀಳುವುದಲ್ಲ, ಬೀಳುತ್ತ ಬೀಳುತ್ತ ಮೇಲೆ ಕೂಡ ಹೋಗಬಹುದು ಎನ್ನುವುದು ಗೊತ್ತಿದ್ದರೆ, ಅವರು ಕೂಡ ಇಂಥ ಬೀಳುವಿಕೆಯನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಬೀಳುವುದೇ ನಿಜ ಎಂದ ಮೇಲೆ ಕೆಳಗೆ ಯಾಕೆ ಬೀಳಬೇಕು? ಮೇಲೆ ಬೀಳುವುದು ಸಾಧ್ಯವಾಗಿರುವಾಗ?
Source ~ Osho- From Bondage to Freedom

