ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಅವತ್ತೊಂದು ದಿನ ಮೊಸಳೇನೂ ಕತ್ತೆಕಿರುಬಾನೂ ನೈಲ್ ನದೀ ದಂಡೇ ಮೇಲೆ ಭೇಟಿ ಆದವು.
ʻಹೇಗಿದ್ದೀರಿ?ʼ ಅಂತ ಕಿರುಬ ಕೇಳಿತು.
ʻಏನು ಹೇಳಲಿ ಸ್ವಾಮೀ. ಒಂದೊಂದು ಸಲ ತುಂಬ ನೋವಾದಾಗ ಕಣ್ಣಲ್ಲಿ ನೀರು ಬರತ್ತೆ. ನೋಡಿದ ಪ್ರಾಣಿಗಳೆಲ್ಲ, ʻಏಯ್, ಮೊಸಳೇ ಕಣ್ಣೀರು!ʼ ಅಂತ ತಮಾಷೆ ಮಾಡಿ ನಗತಾರೆ. ನನ್ನ ಮೈಗೆ ಆದ ನೋವಿಗಿಂತ ಮನಸಿಗೆ ತುಂಬಾ ನೋವಾಗತ್ತೆ. ನನ್ನ ನೋವು ಯಾರಿಗೂ ತಿಳಿಯೋದೇ ಇಲ್ಲ,ʼ ಅಂದಿತು ಮೊಸಳೆ.
ಅದನ್ನು ಕೇಳಿ ʻಅಯ್ಯೋ ನೀವು ನೋವಿನ ವಿಷಯ ಹೇಳತೀರಿ. ನನ್ನ ಕಥೆ ಕೇಳಿ. ಯಾವಾಗಾದರೂ ಒಂದೊಂದು ಸಲ ಈ ಲೋಕದ ಚೆಲುವು ಕಂಡು ಖುಷಿಯಾಗಿ ನಗತೇನೆ. ಆಗ ಕಾಡಿನಲ್ಲಿ ಓಡಾಡೋ ಜನ, ʻಕತ್ತೆಕಿರುಬದ ನಗು ನೋಡಿರೋ!ʼ ಅಂತ ಆಡಿಕೊಂಡು ನಗತಾರೆ ಅಂದಿತು ಕತ್ತೆಕಿರುಬ.

