ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಹಳ್ಳಿಯ ಹುಡುಗಿ ಜಾತ್ರೆಗೆ ಬಂದಿದ್ದಳು. ಮುದ್ದಾಗಿದ್ದಳು. ಅವಳ ಕೆನ್ನೆಯಲ್ಲಿ ಮಲ್ಲಿಗೆ, ಗುಲಾಬಿಯ ರಂಗು ಒಟ್ಟಿಗೆ ಇದ್ದವು. ತಲೆಗೂದಲಿಗೆ ಇಳಿಸಂಜೆಯ ಬಿಸಿಲ ಬಣ್ಣ, ತುಟಿಯ ಮೇಲೆ ಆಡುತಿದ್ದ ನಗುವಿಗೆ ಬೆಳಗಿನ ಹಸಿಬಿಸಿಲ ಬಣ್ಣ ಇತ್ತು.
ಯಾವ ಹುಡುಗರು ಎದುರಾದರೂ ಅವಳಿಗೆ ಕೇಕು ಕೊಡುತ್ತಿದ್ದರು, ಅವಳ ಜೊತೆ ನರ್ತಿಸುವ ಆಸೆ ಹೇಳುತ್ತಿದ್ದರು, ಕೆನ್ನೆಗೆ ಮುತ್ತಿಡಲು ಬಯಸುತ್ತಿದ್ದರು. ಅವಳು ಮುದ್ದು ಅಲ್ಲವೇ?
ಹುಡುಗಿಗೆ ದಿಗಿಲಾಯಿತು. ಹುಡುಗರ ಬಗ್ಗೆ ಕೆಟ್ಟದಾಗಿ ಅನಿಸಿತು. ಅವರನ್ನು ಬೈದಳು. ಹಂಗಿಸಿದಳು. ಒಂದಿಬ್ಬರ ಕೆನ್ನೆಗೂ ಹೊಡೆದಳು. ಜಾತ್ರೆ ಬಿಟ್ಟು ಓಡಿ ಹೋದಳು.
ಮನೆಗೆ ಹೋಗುತ್ತಾ ದಾರಿಯಲ್ಲಿ, ʻಈ ಹುಡುಗರನ್ನ ಕಂಡರೆ ಅಸಹ್ಯ. ಮಾನವಿಲ್ಲ, ಮರ್ಯಾದೆಯಿಲ್ಲ. ರೇಗಿ ಹೋಗತ್ತೆʼ ಅಂದುಕೊಂಡಳು.
ವರ್ಷ ಕಳೆಯಿತು. ಮತ್ತೆ ಜಾತ್ರೆ ಬಂದಿತ್ತು. ಮುದ್ದಾದ ಹುಡುಗಿಯರೆಲ್ಲ ಜಾತ್ರೆಯ ಬಗ್ಗೆ, ಜಾತ್ರೆಗೆ ಬರುವ ಹುಡುಗರ ಬಗ್ಗೆ ಯೋಚನೆ ಮಾಡುತ್ತಿದ್ದರು. ಕೆನ್ನೆಯಲ್ಲಿ ಮಲ್ಲಿಗೆ, ಗುಲಾಬಿಯ ರಂಗು, ತಲೆಗೂದಲಲ್ಲಿ ಸಂಜೆ ಬಿಸಿಲ ಮಿರುಗು, ತುಟಿಯ ಮೇಲೆ ಎಳೆಬಿಸಿಲ ಹೊಳಪು ಇರುವ ಹುಡುಗಿ ಕೂಡ ಜಾತ್ರೆಗೆ ಬಂದಳು.
ಅವಳು ಕಂಡ ತಕ್ಷಣ ಹುಡುಗರೆಲ್ಲ ಮುಖ ತಿರುಗಿಸಿಕೊಂಡು ಹೋಗುತ್ತಿದ್ದರು. ಇಡೀ ದಿನ ಸಂಜೆವರೆಗೂ ಜಾತೆಯಲ್ಲಿ ಸುತ್ತಿದರೂ ಯಾವ ಹುಡುಗನೂ ಅವಳನ್ನು ಮಾತಾಡಿಸಲಿಲ್ಲ.
ಸಾಯಂಕಾಲ ಮನೆಗೆ ಹೋಗುತ್ತಾ, ʻಈ ಹುಡುಗರನ್ನ ಕಂಡರೆ ಆಗಲ್ಲ. ಮಾನವಿಲ್ಲ, ಮರ್ಯಾದೆಯಿಲ್ಲ. ಹುಡುಗಿ ಕಂಡರೆ ಗೌರವದಿಂದ ಮಾತಾಡಿಸಬೇಕು ಅಂತ ಗೊತ್ತಿಲ್ಲ, ರೇಗಿ ಹೋಗತ್ತೆ,ʼ ಅಂದುಕೊಂಡಳು.

