ಶಿಷ್ಯನಾಗಲು ಬಂದವನೇ ಕಳ್ಳನೊಬ್ಬ ಸೂಫಿ ಸಂತನಾಗಲು, ನಿಜದ ಗುರುವಾಗಲು ಕಾರಣನಾದ ಕತೆ ಇದು… । ಸಂಗ್ರಹಾನುವಾದ: ಚೇತನಾ ತೀರ್ಥಹಳ್ಳಿ
ಸಾಲೀಕ*1ನೊಬ್ಬ ಆಧ್ಯಾತ್ಮಿಕ ಗುರುವನ್ನು ಹುಡುಕುತ್ತಾ ಅಲೆಯುತ್ತಿದ್ದ. ಆದರೆ, ಅವನು ಬಯಸಿದಂತೆ ಆಧ್ಯಾತ್ಮಿಕ ಗುರು ದೊರೆಯೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ತನಗೊಬ್ಬ ಮುರ್ಶೀದ*2 ಸಿಕ್ಕು ತಾನು ಮುರೀದ*3ನಾಗಿ ಬಡ್ತಿ ಪಡೆಯೋದು ಯಾವಾಗ, ಆಧ್ಯಾತ್ಮಿಕ ಪಥದಲ್ಲಿ ಪ್ರಯಾಣ ನಡೆಸೋದು ಯಾವಾಗ ಅನ್ನೋದು ಅವನ ಚಿಂತೆಯಾಗಿತ್ತು.
ಕೊನೆಗೊಮ್ಮೆ ಸಾಕಾಗಿ ತನ್ನ ಹುಡುಕಾಟದ ವಿಧಾನ ಬದಲಿಸಿಕೊಂಡ. ಇಲ್ಲಿಂದ ಮುಂದೆ ತನಗೆ ಯಾರು ಮೊದಲು ಸಿಗ್ತಾರೋ ಅವರನ್ನೇ ನನ್ನ ಗುರು ಮಾಡಿಕೊಳ್ತೀನಿ ಅಂತ ನಿರ್ಧರಿಸಿದ. ಅವನು ನಿಶ್ಚಯಿಸಿದ್ದೇ ತಡ ದುಜ್ದ್ ಅನ್ನುವ ವ್ಯಕ್ತಿ ಎದುರಾದ. ಅವನನ್ನು ಕಂಡಿದ್ದೇ ತಡ ಸಾಲೀಕ್, ಅವನ ಕೈಹಿಡಿದು ಬದಿಗೊಯ್ದು, ಗೌರವ ಅರ್ಪಿಸಿ, ಈ ಕ್ಷಣದಿಂದ ನೀನು ನನ್ನ ಮುರ್ಶೀದ್ ಅಂತ ಘೋಷಿಸಿದ.
ದುಜ್ದ್ ಒಂದು ಕ್ಷಣ ಗಾಬರಿಯಾದ. ಅವನೊಬ್ಬ ಕಳ್ಳ. ತನ್ನದೇ ತನಗಾಗಿರುವಾಗ ಇವನೆಲ್ಲಿ ಗಂಟುಬಿದ್ದ ಅಂದುಕೊಂಡು, ನಾನು ಯಾರಿಗೂ ಮುರ್ಶೀದ್ ಅಲ್ಲ, ಯಾರ ಮುರೀದನೂ ಅಲ್ಲ. ನಾನೊಬ್ಬ ಕಳ್ಳ. ಸುಮ್ಮನೆ ಹೊರಡು ಇಲ್ಲಿಂದ – ಅಂದುಬಿಟ್ಟ.
ಪಟ್ಟುಬಿಡದ ಸಾಲೀಕ್ ದುಜ್ದ್ ಮನವೊಲಿಸಲು ಶುರುವಿಟ್ಟ. ಅವನ ಕಾತ ತಾಳಲಾಗದೆ ದುಜ್ದ್, “ಹಾಗಾದ್ರೆ ಒಂದು ಕೆಲಸ ಮಾಡು. ಅಗೋ ಆ ಬೆಟ್ಟ ಇದೆಯಲ್ಲ, ಅದನ್ನ ಹತ್ತಿ ತುತ್ತ ತುದಿಗೆ ಹೋಗು. ಹೋಗಿ ನಿನ್ನ ತಲೆಯನ್ನ ನೆಲಕ್ಕೂರಿ ಕಾಯ್ತಿರು. ನಿನಗೆ ಸೂಫಿ ಮಾರ್ಗದಲ್ಲಿ ನಡೆಯಲು ಸರಿಯಾದ ಮಾರ್ಗದರ್ಶನ ಸಿಗೋವರೆಗೂ ತಲೆ ಎತ್ಬೇಡ” ಅಂದ.
ಅದರಂತೆ ಸಾಲೀಕ್ ಬೆಟ್ಟ ಹತ್ತಿ, ತುದಿ ತಲುಪಿ, ತಲೆ ನೆಲಕ್ಕೂರಿ ಕಾಯತೊಡಗಿದ. ಒಂದಷ್ಟು ಕಾಲ ಕಳೆದ ಮೇಲೆ ಖಿದ್ರ್*4 ಪ್ರತ್ಯಕ್ಷನಾಗಿ, ಸಲೀಕನಿಗೆ ತಲೆ ಎತ್ತುವಂತೆ ಹೇಳಿದ. ಆದರೆ ಸಾಲೀಕ್ ತಲೆ ಎತ್ತದೇ ಕೇಳಿದ;
“ಯಾರು ನೀನು?”
“ನಾನು ಖಿದ್ರ್, ನಿನ್ನ ಗುರುವಾಗಲು ಬಂದಿದೀನಿ. ನೀನು ಆಯ್ಕೆ ಮಾಡಿಕೊಂಡ ಮುರ್ಶೀದ್ ಕೇವಲ ಒಬ್ಬ ಕಳ್ಳ.”
“ನೀನು ಅವನಿಗಿಂತ ಮೊದಲೇ ಯಾಕೆ ಬರಲಿಲ್ಲ? ಏನಾದರಾಗ್ಲಿ, ಆ ಕಳ್ಳನೇ ನನ್ನ ಗುರು. ಅವನಿಂದಾಗಿ ನೀನಿವತ್ತು ನನ್ನ ಬಳಿ ಬರೋಹಾಗಾಯ್ತು. ಅಂದಮೇಲೆ ಆ ಕಳ್ಳ ಸಾಮಾನ್ಯನಲ್ಲ”
ಸಾಲೀಕನ ಉತ್ತರಕ್ಕೆ ಖಿದ್ರ್ ಬಾಯಿ ಕಟ್ಟಿತು. ಮೌನವಾಗಿ ನಿಂತವನಿಗೆ ದುಜ್ದ್ ಬಳಿ ಹೋಗಿ ಮೊದಲು ಅವನಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಮಾಡುವಂತೆ ದೈವಪ್ರೇರಣೆಯಾಯ್ತು. ಅದರಂತೆ ಖಿದ್ರ್ ಕಳ್ಳ ದುಜ್ದ್ ಬಳಿ ಹೋಗಿ, ಅವನಿಗೆ ಗುರುವಾಗಿ ಆಧ್ಯಾತ್ಮಿಕ ಪಥದಲ್ಲಿ ನಡೆಸಿದ. ಬಹಳ ಬೇಗನೇ ಹೊಸದಾರಿಗೆ ಹೊಂದಿಕೊಂಡ ದುಜ್ದ್, ನಿಜಜ್ಞಾನ ಪಡೆದು ಸಂತನಾದ. ಆಮೇಲೊಂದು ದಿನ ಅವನಿಗೆ ಸಾಲೀಕನ ನೆನಪಾಯ್ತು. ಅವನು ಇನ್ನೂ ಅಲ್ಲೇ ಇದ್ದಾನೋ ಅಂತ ಅಚ್ಚರಿಪಡುತ್ತ ಬೆಟ್ಟದ ಮೇಲೆ ಬಂದರೆ, ಸಾಲೀಕ್ ಇನ್ನೂ ನೆಲಕ್ಕೆ ತಲೆಯೂರಿಕೊಂಡು ಕಾಯುತ್ತಿದ್ದ.
ಅವನನ್ನು ಕಂಡಿದ್ದೇ ದುಜ್ದ್, ಮೇಲಕ್ಕೆಬ್ಬಿಸಿ ತಬ್ಬಿಕೊಂಡು, ತಾನು ಖಿದ್ರ್ ಮೂಲಕ ಪಡೆದಿದ್ದ ಜ್ಞಾನವನ್ನೆಲ್ಲ ಧಾರೆ ಎರೆದ. ನಿಜಾರ್ಥದಲ್ಲಿ ಮುರ್ಶೀದನಾದ.
*1 ಸಾಲೀಕ್ : ಸೂಫೀ ಪಂಥದ ಅನುಯಾಯಿ
*2 ಮುರ್ಶೀದ್ : ಶಿಷ್ಯನನ್ನು ಸ್ವೀಕರಿಸುವ ಗುರು (ಶಿಕ್ಷಕ)
*3 ಮುರೀದ್ : ಗುರುವಿನಿಂದ ಸ್ವೀಕೃತನಾದ ಶಿಷ್ಯ
*4 ಖಿದ್ರ್ : ಕಿನ್ನರ / ಆಧ್ಯಾತ್ಮಿಕ ಜ್ಞಾನ ಪ್ರಸಾರ ಮಾಡುವ ದೇವದೂತ

