ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಅವತ್ತೊಂದು ದಿನ ಉದ್ಯಾನವನದಲ್ಲಿ ಪ್ರವಾದಿ ಶೆರಿಯಾನ ಎದುರಿಗೆ ಮಗುವೊಂದು ಬಂದಿತ್ತು. ಮಗು ಗುಡ್ ಮಾರ್ನಿಂಗ್ ಹೇಳಿತು. ಪ್ರವಾದಿ ಕೂಡ ಗುಡ್ ಮಾರ್ನಿಂಗ್ ಅಂದ. ಆಮೇಲೆ, ʻಮಗೂ ಒಬ್ಬನೇ ಇದ್ದೀಯಲ್ಲಾ!ʼ ಅಂತ ಆಶ್ಚರ್ಯಪಟ್ಟ.
ಮಗು ಖುಷಿಯಾಗಿ ನಗುತ್ತಾ, ʻದಾದಿ ಕೈಯಿಂದ ತಪ್ಪಿಸಿಕೊಳ್ಳಕ್ಕೆ ಬಹಳ ಕಷ್ಟ ಆಯಿತು, ತುಂಬ ಹೊತ್ತು ಹಿಡೀತು. ನಾನು ಆ ಪೊದೆ ಹಿಂದೆ ಇದೇನೆ ಅಂದುಕೊಂಡಿದಾಳೆ. ನಾನು ಇಲ್ಲಿ ನಿಮ್ಮ ಜೊತೆ ಇದೀನಿ ಅಲ್ಲವಾ!ʼ ಅಂದಿತು.
ʻನನ್ನ ಕತೆ ಬೇರೆ. ನಾನು ಏನು ಮಾಡಿದರೂ ದಾದಿ ಇದಾಳಲ್ಲ ಅವಳಿಂದ ತಪ್ಪಿಸಿಕೊಳ್ಳಕಾಗಲ್ಲ. ಈಗ ನಾನು ಉದ್ಯಾನಕ್ಕೆ ಬಂದಿದೀನಿ, ಅವಳು ಅಲ್ಲಿ ಪೊದೆ ಹಿಂದೆ ಹುಡುಕುತಾ ಇದಾಳೆ,ʼ ಅಂದ ಪ್ರವಾದಿ.
ಮಗು ಚಪ್ಪಾಳೆ ತಟ್ಟಿತು. ʻನೀವೂ ನನ್ನ ಥರಾನೇ. ತಪ್ಪಿಸಿಕೊಳ್ಳೋದು ಮಜಾ ಅಲ್ಲವಾ! ಅಂದ ಹಾಗೆ ನೀವು ಯಾರು?ʼ ಅಂತ ಕೇಳಿತು.
ʻನನ್ನನ್ನ ಪ್ರವಾದಿ ಶೆರಿಯಾ ಅಂತ ಕರೀತಾರೆ. ನೀನು ಯಾರು, ಮಗೂ?ʼ
ʻನಾನು…ನಾನು ಅಷ್ಟೇ. ದಾದಿ ನನ್ನನ್ನ ಹುಡುಕುತ್ತಾ ಇದಾಳೆ. ನಾನೆಲ್ಲಿದೀನಿ ಅಂತ ಅವಳಿಗೆ ಗೊತ್ತೇ ಇಲ್ಲ,ʼ ಅಂದಿತು ಮಗು.
ಪ್ರವಾದಿ ಆಕಾಶ ನೋಡುತ್ತಾ, ʻನನ್ನ ದಾದಿಯಿಂದ ತಪ್ಪಿಸಿಕೊಂಡು ಸ್ವಲ್ಪ ಹೊತ್ತಾಯಿತು. ಬಿಡಲ್ಲ ನನ್ನ ಹುಡುಕುತಾಳೆ,ʼ ಅಂದ.
ʻಹೂಂ. ನನ್ನ ದಾದೀನು ನನ್ನ ಹುಡುಕಿಬಿಡತಾಳೆ,ʼ ಅಂದಿತು ಮಗು.
ಅಷ್ಟು ಹೊತ್ತಿಗೆ ಮಗುವಿನ ಹೆಸರು ಕೂಗುತ್ತಿರುವ ಹೆಂಗಸಿನ ದನಿ ಕೇಳಿಸಿತು. ʻನೋಡಿದಿರಾ! ನಾನು ಹೇಳಲಿಲ್ಲವಾ? ಹುಡುಕಿಬಿಟ್ಟಳು ನನ್ನ!ʼ ಅಂದಿತು ಮಗು.
ಅದೇ ಹೊತ್ತಿಗೆ ʻಎಲ್ಲಿದ್ದೀಯಾ ಪ್ರವಾದಿ ಶೆರಿಯಾ?ʼ ಅನ್ನುವ ಇನ್ನೊಂದು ದನಿ ಕೇಳಿಸಿತು.
ʼನೋಡಿದೆಯಾ ಮಗೂ, ನನ್ನನ್ನೂ ಹುಡುಕಿಬಿಟ್ಟರು,ʼ ಅನ್ನುತ್ತಾ ಪ್ರವಾದಿ ತಲೆ ಎತ್ತಿ-ಇಗೋ ಇಲ್ಲಿದೇನೆ!ʼ ಅಂದ.

