ಯಾರು ತಮ್ಮ ಅಸುರಕ್ಷತೆಯಲ್ಲಿ ಅಬ್ಬರವನ್ನು ಮುಖವಾಡವಾಗಿ ಧರಿಸಿರುತ್ತಾರೋ ಅವರಿಗೆ, ಉದ್ದೇಶಪೂರ್ವಕವಾಗಿ ಅಳವಡಿಸಿಕೊಂಡ ಮೌನ ಆತಂಕಕಾರಿಯಾಗಿರುತ್ತದೆ… । ಸಂಗ್ರಹಾನುವಾದ : ಚಿದಂಬರ ನರೇಂದ್ರ
ಅಬ್ಬರದ ದನಿ ಸಾಮರ್ಥ್ಯಕ್ಕೆ ಮತ್ತು ಸಣ್ಣ ದನಿ ದೌರ್ಬಲ್ಯದ ಪ್ರತೀಕ ಎಂದು ಎಂದೂ ತಿಳಿದುಕೊಳ್ಳಬೇಡಿ. ಸಿಂಹದ ಮೌನ ಅಪಾಯದ ಮುನ್ಸೂಚನೆಯೇ ಹೊರತು ಅದರ ಗರ್ಜನೆ ಅಲ್ಲ.
ಗಟ್ಟಿಯಾದ ಜೋರು ದನಿ ಯಾವಾಗಲೂ ಶಕ್ತಿಯ ಗುರುತು ಆಗಿರಲಾರದು ಹಾಗೆಯೇ ಮೌನವನ್ನು ಯಾವಾಗಲೂ ದುರ್ಬಲತೆ ಎಂದು ತಿಳಿದುಕೊಳ್ಳಬಾರದು. ನಿಜವಾದ ಸಾಮರ್ಥ್ಯ ಯಾವಾಗಲೂ ಶಾಂತತೆಯ ಒಳಗೆ ಅಡಗಿಕೊಂಡಿರುತ್ತದೆ, ಸಂಯೋಜಿತ ಪ್ರಶಾಂತತೆ ಯಾವಾಗಲೂ ಮಾತಿಗಿಂತ ಹೆಚ್ಚಿನದನ್ನು ಹೇಳುತ್ತಿರುತ್ತದೆ.
ಸದ್ದನ್ನು ಪ್ರಾಬಲ್ಯಕ್ಕೆ ಮತ್ತು ಏರುದನಿಯನ್ನು ಪ್ರಭಾವಕ್ಕೆ ಗುರುತು ಮಾಡಿಕೊಂಡಿರುವ ಜಗತ್ತಿನಲ್ಲಿ, ಶಾಂತತೆಯ ಸಾಮರ್ಥ್ಯವನ್ನು ಯಾವಾಗಲೂ ತಪ್ಪಾಗಿ ಗ್ರಹಿಸಲಾಗುತ್ತದೆ. ಅಬ್ಬರ ಇನ್ನೊಬ್ಬರ ಗಮನ ಸೆಳೆಯಬಲ್ಲದು ಆದರೆ ಶಾಂತ ಆತ್ಮವಿಶ್ವಾಸ ಮಾತ್ರ ಅವರನ್ನು ಹಿಡಿದಿಟ್ಟುಕೊಳ್ಳಬಲ್ಲದು. ಯಾರು ಶಾಂತ ಭರವಸೆಯನ್ನು ಧರಿಸಿರುತ್ತಾರೋ ಅವರಿಗೆ ಇನ್ನೊಬ್ಬರ ವ್ಯಾಲಿಡೇಶನ್ ನ ಅವಶ್ಯಕತೆ ಇರುವುದಿಲ್ಲ. ಅವರ ಪ್ರಶಾಂತತೆ, ಅವರ ತಿಳುವಳಿಕೆಯನ್ನ, ಅವರ ಆಳವನ್ನ, ಅವರ ಸಹನಶೀಲತೆಯನ್ನ ಪ್ರತಿಬಿಂಬಿಸುತ್ತಿರುತ್ತದೆ.
ಯಾರು ತಮ್ಮ ಅಸುರಕ್ಷತೆಯಲ್ಲಿ ಅಬ್ಬರವನ್ನು ಮುಖವಾಡವಾಗಿ ಧರಿಸಿರುತ್ತಾರೋ ಅವರಿಗೆ, ಉದ್ದೇಶಪೂರ್ವಕವಾಗಿ ಅಳವಡಿಸಿಕೊಂಡ ಮೌನ ಆತಂಕಕಾರಿಯಾಗಿರುತ್ತದೆ. ಅದು ಅವರ ಒಳಗನ್ನು ವಿಮರ್ಶೆಗೆ ಒಳಪಡಿಸುತ್ತ, ಅವರೊಳಗಿನ ಸತ್ಯವನ್ನು ಅನಾವರಣಗೊಳಿಸುತ್ತದೆ, ಇದು ಅಬ್ಬರಕ್ಕೆ ಸಾಧ್ಯವಿಲ್ಲದ ಮಾತು. ಮೌನ, ಪ್ರತಿಕ್ರಿಯೆಯ ಗೈರುಹಾಜರಿ ಅಲ್ಲ ಅದು ಆಲೋಚನಾಪೂರ್ವಕ ಪ್ರತಿಕ್ರಿಯೆ.
ಶಾಂತತೆ ಎನ್ನುವುದು ಸಿಂಹ ನೆರಳಲ್ಲಿ ಕಾಯುತ್ತ ಕುಳಿತಿರುವ ಹಾಗೆ. ಎಲ್ಲಿಯವರೆಗೆ ಕಾಯಬೇಕು, ಯಾವಾಗ ಆಕ್ರಮಣ ಮಾಡಬೇಕು ಎನ್ನುವುದು ಒಂದು ಲೆಕ್ಕಾಚಾರ. ಅವಸರದಲ್ಲಿ ಆವೇಶಕ್ಕೆ ಒಳಗಾಗಿ ಸಿಂಹ ಕೆಲಸ ಕೆಡಿಸಿಕೊಳ್ಳುವುದಿಲ್ಲ. ಈ ರೀತಿಯಲ್ಲಿ ಮೌನ ಅದರ ಸಾಮರ್ಥ್ಯದ ಆಯುಧವಾಗಿರುತ್ತದೆ.
ಕೊನೆಯಲ್ಲಿ ಸಾಮರ್ಥ್ಯ ಎನ್ನುವುದು ನೀವು ಎಷ್ಟು ಜೋರಾಗಿ ಸದ್ದು ಮಾಡುತ್ತಿರಿ ಎನ್ನುವುದರ ಪ್ರತೀಕವಲ್ಲ ಬದಲಾಗಿ ನೀವು ಎಷ್ಟು ಆಳವಾಗಿ ಇನ್ನೊಬ್ಬರೊಡನೆ ಅನುರಣಿಸುತ್ತೀರಿ (resonate) ಎನ್ನುವುದರ ಗುರುತು. ಬಹಳಷ್ಟು ಬಾರಿ ಮೌನದಷ್ಚು ಪ್ರತಿಧ್ವನಿಗಳನ್ನು ಸದ್ದು ಹೊರಡಿಸಲಾರದು.

