ಓಶೋ, ತಮ್ಮ ಮತ್ತು ಕೊಳಲು ವಾದಕ ಹರಿಪ್ರಸಾದ ಚೌರಾಸಿಯಾರ ನಡುವಿನ ಸಂಬಂಧವನ್ನು ನೆನೆಸಿಕೊಂಡ ಸಂದರ್ಭ… । ಕನ್ನಡಕ್ಕೆ: ಚಿದಂಬರ ನರೇಂದ್ರ
ಹರಿಪ್ರಸಾದನ ಕೊಳಲು ವಾದನ ಕೇಳುತ್ತಿದ್ದಾಗ ನನ್ನ ನೆನಪುಗಳೆಲ್ಲ ಮರುಕಳಿಸಿದವು.
ಈ ಜಗತ್ತಿನಲ್ಲಿ ಹಲವಾರು ರೀತಿಯ ಕೊಳಲುಗಳಿವೆ. ಅವುಗಳಲ್ಲಿ ಬಹಳ ಮುಖ್ಯವಾದದ್ದು ಅರೇಬಿಕ್ ಕೊಳಲು ಮತ್ತು ಅತ್ಯಂತ ಸುಂದರವಾದದ್ದು ಜಪನೀಸ್ ಕೊಳಲು, ಮತ್ತು ಇನ್ನೂ ಎಷ್ಟೋ ಬಗೆಯ ಕೊಳಲುಗಳಿವೆ ನಿಜ, ಆದರೆ ಭಾರತದ ಸಣ್ಣ ಬಿದಿರಿನ ಕೊಳಲಿನ ಮಾಧುರ್ಯದ ಜೊತೆ ಈ ಯಾವ ಬೇರೆ ಕೊಳಲನ್ನು ಹೋಲಿಸುವುದು ಸಾಧ್ಯವಾಗುವುದಿಲ್ಲ. ಮತ್ತು ಈ ಬಿದಿರು ಕೊಳಲನ್ನು ನುಡಿಸುವುದರಲ್ಲಿ ಹರಿಪ್ರಸಾದ ಖಂಡಿತವಾಗಿಯೂ ಒಬ್ಬ ಮಾಸ್ಟರ್. ನನ್ನ ಎದುರು ಹರಿ ಹಲವಾರು ಬಾರಿ ಕೊಳಲು ನುಡಿಸಿದ್ದಾನೆ. ಕೊಳಲು ನುಡಿಸುವುದು ಅವನ ವೃತ್ತಿಯಾಗಿದ್ದರೂ ಅವನಿಗೆ ನುಡಿಸುವ ಉತ್ಕಟ ಭಾವ ಒಳಗಿನಿಂದ ಹುಟ್ಟಿಕೊಂಡಾಗ ಅವನು ಸಾವಿರಾರು ಮೈಲಿ ಪ್ರಯಾಣ ಮಾಡಿ ನನ್ನ ಬಳಿ ಬಂದು ಒಂದು ಗಂಟೆಯಾದರೂ ಕೊಳಲು ನುಡಿಸುತ್ತಿದ್ದ.
“ ಇಷ್ಟು ದೂರದ ಪ್ರಯಾಣ ಮಾಡಿ ಯಾಕೆ ನನ್ನ ಬಳಿ ಬರುತ್ತೀಯ ಹರಿಪ್ರಸಾದ ?” ಎಂದು ನಾನು ವಿಚಾರಿಸಿದಾಗಲೆಲ್ಲ……..
“ ನನಗೆ ಸಾವಿರಾರು ಅಭಿಮಾನಿಗಳಿದ್ದಾರಾದರೂ ಯಾರಿಗೂ ನಾನು ಅರ್ಥವಾಗುವುದಿಲ್ಲ, ಅದರಲ್ಲೂ ವಿಶೇಷವಾಗಿ soundless sound. ಯಾರು soundless sound ನ ಆಸ್ವಾದಿಸುವುದಿಲ್ಲವೋ ಅವರು ನನ್ನ ಕೊಳಲು ವಾದನವನ್ನ ಯಾವ ರೀತಿಯಾಗಿ ಆನಂದಿಸಬಲ್ಲರು? ಆದ್ದರಿಂದ ನಾನು ನಿಮ್ಮ ಹತ್ತಿರ ಬರುತ್ತೇನೆ ; ನಿಮ್ಮ ಎದುರು ಕೇವಲ ಒಂದು ಗಂಟೆ ಕೊಳಲು ನುಡಿಸಿದರೆ ಸಾಕು , ನಾನು ತಿಂಗಳುಗಳಷ್ಚು ಕಾಲ ಇತರ ಜನರೆದುರು ಕೊಳಲು ನುಡಿಸುವಷ್ಟು ಸಾಮರ್ಥ್ಯ ಪಡೆಯುತ್ತೇನೆ. ಯಾವಾಗ ನನಗೆ, ನನ್ನೊಳಿಗಿನ ಕೊಳಲು ನುಡಿಸುವ ಸಾಮರ್ಥ್ಯ ಖಾಲಿಯಾದ ಅನುಭವವಾಗುತ್ತದೆಯೋ, ಮತ್ತು ಸಂಗೀತದ ಅನುಭವ ಇಲ್ಲದವರ ಎದುರು ನುಡಿಸಿ ನುಡಿಸಿ ನನಗೆ ದಣಿವಾಗುತ್ತದೆಯೋ ಆಗ ನಾನು ನಿಮ್ಮ ಹತ್ತಿರ ಓಡಿ ಬರುತ್ತೇನೆ ಮತ್ತೆ ನನ್ನನ್ನು ನಾನು ತುಂಬಿಕೊಳ್ಳಲು. ದಯವಿಟ್ಟು ನನ್ನ ಒಂದು ಗಂಟೆಯನ್ನ ನಿರಾಕರಿಸಬೇಡಿ”. ಹರಿಪ್ರಸಾದ ಬೇಡಿಕೊಳ್ಳುತ್ತಿದ್ದ.
“ನನಗೆ ನಿನ್ನ ನೋಡುವುದು, ನಿನ್ನ ಕೊಳಲಿನ ದನಿಯನ್ನು ಕೇಳುವುದು ಬಹಳ ಇಷ್ಟ ನಿಜ ಆದರೆ ನೀನು ಮತ್ತು ನಿನ್ನ ಕೊಳಲು, ನಿನ್ನ ನನಗೆ ಭೇಟಿಮಾಡಿಸಿದ ವ್ಯಕ್ತಿಯೊಬ್ಬನ ನೆನಪನ್ನು ತಾಜಾ ಮಾಡುತ್ತದೆ. ಆ ವ್ಯಕ್ತಿ ನಿನಗೆ ನೆನಪಿದ್ದಾನ?” ನಾನು ಹರಿಪ್ರಸಾದನನ್ನು ಪ್ರಶ್ನೆ ಮಾಡುತ್ತೇನೆ.
ಅವನಿಗೆ ಅವನನ್ನು ನನಗೆ ಪರಿಚಯಿಸಿದ ವ್ಯಕ್ತಿಯ ನೆನಪಿಲ್ಲ, ನಾನು ಇದನ್ನ ಅರ್ಥ ಮಾಡಿಕೊಳ್ಳ ಬಲ್ಲೆ ಇದು ನಲವತ್ತು ವರ್ಷದಷ್ಟು ಹಿಂದಿನ ಮಾತು “ ಅಯ್ಯೋ ನನಗೆ ನೆನಪಾಗುತ್ತಿಲ್ಲ, ನಿಮ್ಮನ್ನು ಪರಿಚಯಿಸಿದ ವ್ಯಕ್ತಿಯ ಹೆಸರನ್ನಾದರೂ ನಾನು ನೆಪಿಟ್ಟುಕೊಳ್ಳಬೇಕಿತ್ತು” ಅವನು ಭಾವುಕನಾದ.
ನಂತರ ನಾನು ಅವನಿಗೆ ಪಾಗಲ್ ಬಾಬಾ ನ ನೆನಪು ಮಾಡಿಕೊಟ್ಟೆ. ಅವನ ಹೆಸರು ಕೇಳುತ್ತಿದ್ದಂತೆಯೇ ಹರಿಪ್ರಸಾದನ ಕಣ್ಣಲ್ಲಿ ನೀರು ತುಂಬಿಕೊಂಡವು.

