ನಿಮ್ಮ ಪ್ರೇಮಿ ಇನ್ನೊಬ್ಬರನ್ನು ಅಥವಾ ಇನ್ನೊಬ್ಬಳನ್ನು ಪ್ರೀತಿಸುತ್ತಿರುವ ವಿಷಯದ ಬಗ್ಗೆ ನಿಮ್ಮೊಳಗೆ ಅಸೂಯೆ ಇದೆಯೆ? ಅಸೂಯೆ ಇಲ್ಲವಾದರೆ ನಿಮ್ಮ ಪ್ರೀತಿ ನಿಜ ಅಲ್ಲ, ಅಸೂಯೆ ಇದೆಯೆಂದಾರೆ ಮಾತ್ರ ನಿಮ್ಮ ಪ್ರೇಮ ನಿಜ. ಅಷ್ಟರಮಟ್ಟಿಗೆ ಪ್ರೀತಿ ಮತ್ತು ಅಸೂಯೆಯನ್ನು ಒಂದು ಸಂಗತಿ ಎಂದು ಅರ್ಥಮಾಡಿಕೊಳ್ಳಲಾಗಿದೆ… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಅಸೂಯೆ ಎನ್ನುವುದು, ನಮ್ಮ ಕುರಿತಾಗಿ, ಇನ್ನೊಬ್ಬರ ಕುರಿತಾಗಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಂಬಂಧಗಳ ಬಗ್ಗೆ ಇರುವ ಒಂದು ಅತ್ಯಂತ ದೊಡ್ಡ ಮನೋವೈಜ್ಞಾನಿಕ ಅಜ್ಞಾನ.
ಜನರಿಗೆ, ತಮಗೆ ಪ್ರೀತಿಯ ಬಗ್ಗೆ ಗೊತ್ತು ಎಂದು ಅನಿಸುತ್ತದೆಯೆನೋ ನಿಜ ಆದರೆ ಅವರಿಗೆ ಪ್ರೀತಿಯ ಬಗ್ಗೆ ಏನೂ ಗೊತ್ತಿಲ್ಲ. ಮತ್ತು ಅವರ ಪ್ರೀತಿಯ ಕುರಿತಾದ ತಪ್ಪುತಿಳುವಳಿಕೆಯ ಕಾರಣವಾಗಿಯೇ ಅಸೂಯೆ ಹುಟ್ಟಿಕೊಂಡಿರುವುದು. ಬಹುತೇಕ ಜನರಿಗೆ “ಪ್ರೀತಿ” ಎಂದರೆ ಏಕಸ್ವಾಮ್ಯತ್ವ, ಒಂದು ಬಗೆಯ ಪೋಸೆಸಿವ್ ನೆಸ್. ಆದರೆ ಅವರಿಗೆ ಬದುಕಿನ ಒಂದು ಸರಳ ಸತ್ಯ ಗೊತ್ತಿಲ್ಲ : ಒಂದು ಜೀವಂತ ಸಂಗತಿಯ ಮಾಲಿಕತ್ವ ಸಾಧಿಸಿದ ಕ್ಷಣದಲ್ಲಿಯೇ ನೀವು ಅದನ್ನು ನಾಶ ಮಾಡುತ್ತೀರಿ.
ಬದುಕಿನ ಮೇಲೆ ಮಾಲಿಕತ್ವ ಸಾಧಿಸುವುದು ಸಾಧ್ಯವಿಲ್ಲ. ಬದಕನ್ನು ಮುಷ್ಟಿಯಲ್ಲಿ ಹಿಡಿದಿಡುವುದು ಸಾಧ್ಯವಿಲ್ಲ. ಬದುಕು ನಿಮಗೆ ಬೇಕಾಗಿದ್ದರೆ ನೀವು ಮುಷ್ಟಿಯನ್ನು ತೆರೆದಿರಬೇಕಾಗುತ್ತದೆ.
ಪ್ರೀತಿ ಮತ್ತು ಅಸೂಯೆ ಒಂದೇ ಮತ್ತು ಅವುಗಳನ್ನು ಬೇರ್ಪಡಿಸುವುದು ಸಾಧ್ಯವಿಲ್ಲ ಎನ್ನುವ ತಪ್ಪು ತಿಳುವಳಿಕೆ ಶತಮಾನಗಳಿಂದ ನಮ್ಮೊಳಗೆ ಬೇರೂರಿಬಿಟ್ಟಿದೆ. ಅವು ಬಹುತೇಕ ಒಂದೇ ಎನರ್ಜಿ ಎನ್ನುವ ಮೌಢ್ಯ ನಮ್ಮೊಳಗೆ ತುಂಬಿಕೊಂಡು ಬಿಟ್ಟಿದೆ.
ಉದಾಹರಣೆಗೆ, ನಿಮ್ಮ ಪ್ರೇಮಿ ಇನ್ನೊಬ್ಬರನ್ನು ಅಥವಾ ಇನ್ನೊಬ್ಬಳನ್ನು ಪ್ರೀತಿಸುತ್ತಿರುವ ವಿಷಯದ ಬಗ್ಗೆ ನಿಮ್ಮೊಳಗೆ ಅಸೂಯೆ ಇದೆಯೆ? ಅಸೂಯೆ ಇಲ್ಲವಾದರೆ ನಿಮ್ಮ ಪ್ರೀತಿ ನಿಜ ಅಲ್ಲ, ಅಸೂಯೆ ಇದೆಯೆಂದಾರೆ ಮಾತ್ರ ನಿಮ್ಮ ಪ್ರೇಮ ನಿಜ. ಅಷ್ಟರಮಟ್ಟಿಗೆ ಪ್ರೀತಿ ಮತ್ತು ಅಸೂಯೆಯನ್ನು ಒಂದು ಸಂಗತಿ ಎಂದು ಅರ್ಥಮಾಡಿಕೊಳ್ಳಲಾಗಿದೆ.
ಆದರೆ ವಾಸ್ತವದಲ್ಲಿ ಅವೆರಡೂ ವಿರುದ್ಧಾರ್ಥಕ ಸಂಗತಿಗಳು. ನಿಮ್ಮ ಮನಸ್ಸು ಅಸೂಯೆ ಪಡುತ್ತಿದೆಯಾದರೆ ಅದು ಪ್ರೇಮದಿಂದ ಹೊರತಾಗಿದೆ ಮತ್ತು ಮನಸ್ಸು ಪ್ರೇಮದಲ್ಲಿದೆಯಾದರೆ ಅದು ಅಸೂಯೆಯಿಂದ ಹೊರತಾಗಿದೆ.
ನಸ್ರುದ್ದೀನ್ ತನ್ನ ಪ್ರೇಯಸಿಯೊಡನೆ ಮಾತನಾಡುತ್ತಿದ್ದ.
“ ನೀನು ಇಷ್ಟು ನಿಧಾನ ಮಾಡಿದರೆ ಹೇಗೆ ? ಅಕಸ್ಮಾತ್ ಮನೆಯವರು ನನ್ನ ಮದುವೆ ಬೇರೆ ಹುಡುಗಿಯ ಜೊತೆ ಫಿಕ್ಸ್ ಮಾಡಿದರೆ ಏನಾಗತ್ತೆ ಒಮ್ಮೆಯಾದರೂ ಯೋಚಿಸಿದ್ದೀಯಾ ? “
ನಸ್ರುದ್ದೀನ್ ತನ್ನ ಗರ್ಲಫ್ರೆಂಡ್ ನ ತರಾಟೆಗೆ ತೆಗೆದುಕೊಂಡ.
“ ಇಲ್ಲ, ನಾನು ಇನ್ನೊಬ್ಬರ ಬಗ್ಗೆ ಯಾವತ್ತೂ ಕೆಟ್ಟದನ್ನ ಯೋಚಿಸುವುದಿಲ್ಲ “
ನಸ್ರುದ್ದೀನ್ ನ ಪ್ರೇಯಸಿ ಸಮಾಧಾನದಿಂದ ಉತ್ತರಿಸಿದಳು.

