ಮನುಷ್ಯ ಸ್ವಭಾವವನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾರೆ ಕವಿ ಜಾವೇದ್ ಅಖ್ತರ್ ಬಿಡಿಸಿಡುವುದು ಹೀಗೆ… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ನಾವು ಇಂಥದನ್ನೆಲ್ಲ ಅನುಭವಿಸಬೇಕಾಯಿತು, ಇಷ್ಟೆಲ್ಲ ಕಷ್ಟ ನೋಡಬೇಕಾಯಿತು ಅಂತ ನಾವೇನು ಹೇಳುತ್ತೇವೆಯಲ್ಲ ಇದು ಅಂಥ ವಿಶೇಷ ಸಂಗತಿಯೇನಲ್ಲ. ಈ ಥರದ್ದನ್ನೆಲ್ಲ ಹೇಳುವಾಗ ನಾವು ನಮ್ಮ ಕಷ್ಟಗಳನ್ನಷ್ಟೇ ಹೇಳಿಕೊಳ್ಳುತ್ತಿಲ್ಲ, ನಾವು ಎಲ್ಲಿಂದ ಎಲ್ಲಿಗೆ ಬಂದಿದ್ದೇವೆ ನೋಡಿ ಎಂದು ಹೇಳುತ್ತಿದ್ದೇವೆ ಕೂಡ.
ಇದು ಒಂದು ವಿಷಯವಾದರೆ ಇನ್ನೊಂದು, ಹೇಗೆ ನಾವು ನಮ್ಮ ಯಶಸ್ಸಿನ ಬಗ್ಗೆ, ನಮ್ಮ ಪ್ರಸಿದ್ಧಿಯ ಬಗ್ಗೆ ಸೊಕ್ಕು ಮಾಡಬಾರದೋ ಹಾಗೆಯೇ ನಾವು ನಮ್ಮ ನೋವಿನ ಬಗ್ಗೆ ನಮ್ಮ ಸೋಲಿನ ಬಗ್ಗೆಯೂ ಸೊಕ್ಕು ಮಾಡಬಾರದು. ನಾನು ಏನು ಮಾಡುತ್ತೇವೆಯೆಂದರೆ, ನಮ್ಮ ದುಃಖಗಳನ್ನ, ನೋವುಗಳನ್ನ, ಸೋಲುಗಳನ್ನ ಮೆಡಲ್ ಮಾಡಿಕೊಂಡು ಎದೆಯ ಮೇಲೆ ಧರಿಸಿಬಿಡುತ್ತೇವೆ.
ನನಗೆ ಫೈಜ್ ಅಹ್ಮದ ಫೈಜ್ ನ ಕವಿತೆಯ ಒಂದು ಸಾಲು ನೆನಪಾಗುತ್ತಿದೆ, ಬಹಳ ಸುಂದರವಾಗಿದೆ ಈ ಸಾಲು …… ಇಸ್ ರಾಹ್ ಪೇ ಜೋ ಸಬ್ ಪೇ ಗುಜರತಿ ಹೈ ವೋ ಗುಜರಿ……. ( ಈ ದಾರಿಯಲ್ಲಿ ಯಾರಿಗೆಲ್ಲ ಏನು ಅನುಭವ ಆಗುತ್ತದೆಯೋ ಅದು ನನಗೂ ಆಗಿದೆ). ಕೋಟಿ ಕೋಟಿ ಜನ ಇದನ್ನೆಲ್ಲ ಅನುಭವಿಸುತ್ತಿದ್ದಾರೆ, ಇದು ನಾವು ಹೆಮ್ಮೆಯಿಂದ ಹೇಳಿಕೊಳ್ಳುವಂಥ ವಿಶೇಷವೇನೂ ಅಲ್ಲ, ಅಂಥ ದೊಡ್ಡ ವಿಷಯವೂ ಅಲ್ಲ .

