
ಚಿದಂಬರ ನರೇಂದ್ರ ಅವರು ಅರಳಿಮರದ ತಮ್ಮ ಬರಹದಲ್ಲಿ ವಿಶ್ವಕರ್ಮರು ವಿಗ್ರಹದ ಕಣ್ಣನ್ನು ರೂಪಿಸುವಾಗ ಸ್ಪಟಿಕದ ಶಲಾಕೆಯನ್ನು ಬಳಸುತ್ತಾರೆ ಎಂಬ ಮಾತು ಕೇಳಿ ಅರಾ ಮಿತ್ರರು ಅನುಭವಿಸಿದ ಆಶ್ಚರ್ಯಾಘಾತಗಳನ್ನು ಉಲ್ಲೇಖಿಸಿ ʻನುಡಿದರೆ ಮುತ್ತಿರನ ಹಾರದಂತಿರಬೇಕುʼ ಎಂಬ ಬಸವ ವಾಕ್ಕಿಗೆ ಹೊಸ ಅರ್ಥ ಹೊಳೆಯುವಂತೆ ಮಾಡಿದ್ದರು (ಲೇಖನದ ಕೊಂಡಿ: https://aralimara.com/2025/01/14/coffee-38/). ಅದನ್ನು ಓದಿ ಕ್ಷಣಾರ್ಧದಲ್ಲಿ ನನ್ನ ಮನಸು ಮುಂದಿನ ಸಂಗತಿಗಳನ್ನು ಹೊಳೆಯಿಸಿತು… । ಓ.ಎಲ್.ನಾಗಭೂಷಣ ಸ್ವಾಮಿ
ಮಾತು ಮತ್ತು ಅರಿವಿನ ಸಂಬಂಧ ಮನುಷ್ಯರ ಮನಸನ್ನು ಕಾಡಿದೆ. ಬಸವ ವಚನವನ್ನು ಓದಿದಾಗ, ʻ ನುಡಿಯಬಾರದು, ನುಡಿದರೆ ಮುತ್ತಿರನ ಹಾರದ ಹೊರ ಹೊಳಪು, ನುಡಿದರೆ ಮಾಣಿಕ್ಯದ ಒಳ ಬೆಳಕು, ನುಡಿದರೆ ಸ್ಪಟಿಕದ ಶಲಾಕೆಯ ಹಾಗೆ ಹೊರಗು ಒಳಗು ಭೇದವಿರದೆ ನುಡಿ ಇರುವುದೇ ತಿಳಿಯದ ಹಾಗೆ ಇರಬೇಕು. ಆಗ ಲಿಂಗ ಅಥವಾ ಇಡೀ ಸೃಷ್ಟಿ ಅಹುದು ಅನ್ನುತ್ತದೆ,ʼ ಅನ್ನುವ ಭಾವ ಮೂಡುತ್ತದೆ.
ಇರುವ ಹದಿನಾಲ್ಕು ಲೋಕಗಳೂ ಕಂಗಳಾಲಿಯ ಕರಿನಾಳದೊಳಗಿವೆ ಅಂತ ಹೇಳಿದವನು ಅಲ್ಲಮ. ನಮ್ಮ ಎಲ್ಲರೊಳಗೂ ಇರುವ ವಿಶ್ವ ಮೂಡಿಸಿದ ಭಾವವನ್ನೋ ಅರ್ಥವನ್ನೋ ವಿಚಾರವನ್ನೋ ನಮ್ಮ ದೇಹದ ತಾಳು (ಬಾಯಿಯ ಅಂಗಳ) ಓಷ್ಠ (ತುಟಿ)ಗಳಿರುವ ಸಂಪುಟದ ಮೂಲಕ ಹೊಮ್ಮುವ ಮಾತಿನಲ್ಲಿ ಸಮರ್ಪಕವಾಗಿ ಹೇಳಿದರೆ ಆ ಮಾತು ಜ್ಯೋತಿರ್ಲಿಂಗವೆಂದು ಇನ್ನೊಂದು ವಚನದಲ್ಲಿ ಹೇಳಿದ್ದಾನೆ. .
ಮಾತು ಮನುಷ್ಯನ ದೇಹದ ಸೃಷ್ಟಿ. ಮನುಷ್ಯನ ಪ್ರಾಣ ಅಥವಾ ಉಸಿರನ್ನು ಘಾತಿಸಿ ಅರ್ಥಪೂರ್ಣವಾಗಿ ಹೊಮ್ಮುತ್ತದೆ ಅನ್ನುವ ಭೌತಿಕ ವರ್ಣನೆ ಅಲ್ಲಮನ ಮಾತಿನಲ್ಲಿರುವಂತೆ ತೋರುತ್ತದೆ. ಅಷ್ಟೇ ಅಲ್ಲ, ಪ್ರಾಣ ಇರುವವರೆಗೂ ಇರುವ ಅಹಂಕಾರವನ್ನು ಘಾತಿಸಿ ಅಂದರೆ ನಾನು ಅನ್ನುವ ಪರಿಮಿತಿಯನ್ನು ಮೀರಿ ನನ್ನೊಳಗಿರುವ ವಿಶ್ವದ ಸತ್ಯವನ್ನು ಮಾತಿನಲ್ಲಿ ಮೊಮ್ಮಿಸಿದಾಗ ಅದು ಬೆಳಕಿನ ಲಿಂಗ ಅನ್ನುವ ಭಾವ ಮೂಡುತ್ತದೆ.
ಶಲಾಕೆ ಎಂಬ ಮಾತಿಗೆ ಬೆಳಕು ಅನ್ನುವ ಅರ್ಥವೂ ಇದೆ ಅನಿಸುತ್ತದೆ. ಅರುವತ್ತು ಮೂರು ಜನ ಶಲಾಕಾಪುರುಷರು ಒಬ್ಬೊಬ್ಬರೂ ಬೆಳಕಿನ ಪುಂಜಗಳು ಅವರ ಮಾತಿನ ಮೂಲಕ ನಮ್ಮ ನಮ್ಮ ಮಿತಿಗಳನ್ನು ದಾಟಿಕೊಳ್ಳುವ ಹಾಗೆ ಮಾಡಿದವರು, ಮಾತಿನ ತೀರ್ಥ (ನದಿಯನ್ನು ದಾಟುವ ಜಾಗ)ಕ್ಷೇತ್ರಗಳನ್ನು ನಿರ್ಮಿಸಿದವರು ತೀರ್ಥಂಕರರು. ಅವರು ಕೇವಲ-ಜ್ಞಾನವನ್ನು ಪಡೆದಾಗ ಇಡೀ ಸೃಷ್ಟಿಯ ಜೀವರಾಶಿಗಳೆಲ್ಲ ಅವರ ಮಾತನ್ನು ಕೇಳಲು ಸಮವಸರಣದಲ್ಲಿ ನೆರೆಯುತ್ತವೆ, ಅವರ ಮಾತು ಒಂದೊಂದು ಜೀವಕ್ಕೂ ಅದರದರ ಭಾಷೆಯಲ್ಲಿ ಅರ್ಥವಾಗುತ್ತದೆ ಅನ್ನುವ ವರ್ಣನೆ ಜೈನ ಕಾವ್ಯಗಳಲ್ಲಿದೆ. ಅದ್ಭುತವಾದ ಕಲ್ಪನೆ. ಮಾತು ಕನ್ನಡ, ತೆಲುಗು, ಇಂಗ್ಲಿಶು ಇಂಥ ನಿರ್ದಿಷ್ಟ ಭಾಷೆಯ ಕಟ್ಟಳೆಯ ಹಂಗು ನೀಗಿಕೊಂಡು ಒಂದೊಂದು ಜೀವಕ್ಕೂ ಅದರದರ ಒಳನುಡಿಯಾಗಿ ಅರಿವಾಗುವ ಅದ್ಭುತದ ಕಲ್ಪನೆ.
ಭಾಷೆ ಅನ್ನುವುದು ಅರ್ಥವಂತಿಕೆಯ ನಿಯಮಗಳ ಮೊತ್ತ. ಒಂದೊಂದು ನುಡಿಯೂ ತನ್ನದೇ ಆದ ಅರ್ಥದ ಕಟ್ಟುಪಾಡು ಹೊಂದಿರುತ್ತದೆ. ಆದರೆ ಅದರ ಮಿತಿಯಲ್ಲೇ ವ್ಯವಹರಿಸುವುದೆಂದರೆ ಸರಿ/ತಪ್ಪು, ಹೌದು/ಅಲ್ಲಗಳ ವಿರೋಧದ ಬಲೆಯಲ್ಲಿ ಸಿಕ್ಕಿಬೀಳುವ ವಿಧಿ. ಮಾತು ಮುತ್ತಿನ ಹಾರವಾದರೆ ಅದು ಅಲಂಕಾರ, ಚಂದ; ಮಾಣಿಕ್ಯದ ದೀಪ್ತಿಯಾದರೆ ಆಡುವ ಜೀವದ ಒಳಗಿನಿಂದ ಮೂಡಿ ಅರಿಯಬಲ್ಲವರನ್ನೂ ಬೆಳಗಬಲ್ಲ ಬೆಳಕು. ಅತ್ಯುನ್ನತ ಸ್ಥಿತಿ ಎಂದರೆ ಒಳಗಿನ ವಿಶ್ವವನ್ನ ತೆರೆದಿಡುತ್ತ ಕೇಳುಗರ ಒಳಗಿನ ವಿಶ್ವವನ್ನು ತೋರುತ್ತಾ ತಾನು ಇರುವುದೇ ಗೊತ್ತಾಗದಂತೆ ಅತ್ಯಂತ ಪಾರದರ್ಶಕವಾಗಿರುವ ಮಾತಿನ ಸ್ಥಿತಿ. ಅದು ಸ್ಪಟಿಕದ ಶಲಾಕೆ.
ಇಷ್ಟು ಅನ್ನಿಸುವಾಗ ಲಾಂಜೈನಸ್ ತನ್ನ ಸಬ್ಲೈಮ್ ಕೃತಿಯಲ್ಲಿ ಹೇಳಿದ್ದರು ನೆನಪಾಯಿತು. ಭವ್ಯತೆ ಅನ್ನುವುದು ಮಿಂಚಿನ ಹಾಗೆ, ಕಾವ್ಯದಲ್ಲಿ ಎಲ್ಲೋ ಒಂದೆಡೆ ಜಗ್ಗನೆ ಮಿಂಚಿ ಏನೇನನ್ನೋ ಕಾಣಿಸಿ ಮರೆಯಾಗುತ್ತದೆ ಅನ್ನುತ್ತಾನೆ ಲಾಂಜೈನಸ್. ಭವ್ಯತೆಯಾಗಲೀ ಮಾತಿನ ಹಂಗಿಲ್ಲದೆ ಹೊಳೆಯುವ ಒಳ ಅರಿವಾಗಲೀ ಮಿಂಚಿನ ಹಾಗೆ ಕ್ಷಣಾರ್ಧದಲ್ಲಿ ನಡೆಯುವ ಸಂಭವಗಳು. ಬೇಂದ್ರೆಯವರ ʻಸಣ್ಣ ಸೋಮವಾರʼ ಕವಿತೆಯಲ್ಲಿ ಹುಡುಗ ಗೆಳೆಯರೊಡನೆ ರೈಲು ನಿಲ್ದಾಣ ದಾಟಿ, ಶ್ರಾವಣದ ಮಳೆಯಲ್ಲಿ ನೆನೆದ ಸ್ಥಾವರಲಿಂಗದಂಥ ಗುಡ್ಡ ದಾಟಿ, ಗುಹೆಯಂತ ದೇವಾಲಯದ ಒಳಹೊಕ್ಕು, ದೇವರ ಮುಂದಿನ ದೀಪವನ್ನೋ ಆರತಿಯನ್ನೋ ವಿಗ್ರಹವನ್ನೋ ನೋಡುತ್ತಾ ಕ್ಷಣಾರ್ಧದಲ್ಲಿ ʻಸೋರ್ಯಾವ ಜಂಬಗಿಂಬʼ ಅಂತ ಅಪೂರ್ವ ಅನುಭವ ಪಡೆದು ಮತ್ತೆ ಮೊದಲಿನ ಹುಡುಗನ ಹಾಗೆ ಮನೆಗೆ ಮರಳುವ ಚಿತ್ರ ಇದೆ
ದರ್ಶನ ಕ್ಷಣಮಾತ್ರದ್ದು. ಲಭ್ಯವಿದ್ದರೆ ಹಲವು ಕ್ಷಣಗಳದ್ದು. ಯಾವುದೇ ದೇವಸ್ಥಾನಕ್ಕೆ ಹೋಗುವ ಬರುವ ಕಳೆಯುವ ಸಮಯಕ್ಕೆ ಹೋಲಿಸಿದರೆ ಅಲ್ಲಿರುವ ದೇವರನ್ನು ಕಾಣುವುದು ಕೆಲವೇ ಕ್ಷಣಗಳಷ್ಟೇ. ದರ್ಶನ ಸುದೀರ್ಘವಾದರೆ ತಾಳಿಕೊಳ್ಳಲಾರೆವು. Humankind cannot bear too much of reality ಅಂದವನು ಎಲಿಯಟ್ ಮಾತ್ರ ಅಲ್ಲ ವಿಶ್ವರೂಪವನ್ನು ಕ್ಷಣಾರ್ಧ ಕಂಡ, ಅರ್ಜುನ ಕೂಡ.
ಮುತ್ತಿನ ಹಾರ, ಮಾಣಿಕ್ಯದ ದೀಪ್ತಿ ತಡೆದುಕೊಳ್ಳಬಹುದು, ಅನುಭವಿಸಬಹುದು. ಆದರೆ ಸ್ಫಟಿಕದ ಶಲಾಕೆ ಶಿಲೆಯ ವಿಗ್ರಹದ ಕಣ್ಣು ಕೆತ್ತುವ ಸೂಕ್ಷ್ಮ ನೋವು ಬಹು ಕಾಲ ತಡೆಯಲಾಗದು. ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಆದ ನಂತರ ಕಣ್ಣು ಇದ್ದಕಿದ್ದ ಹಾಗೆ ಏನೆಲ್ಲ ಸೂಕ್ಷ್ಮಗಳನ್ನು ಛಾಯೆಗಳನ್ನು ಅನುಭವಿಸುತ್ತದೆಂದರೆ ಭಯವಾಗುತ್ತದೆ. ಲೋಕ ಹೀಗೆಲ್ಲ ಇದೆಯೇ ಅಂತ ದಿಗ್ಭ್ರಮೆಯಾಗುತ್ತದೆ. ಒಂದು ದಿನ ಕಳೆಯುವುದರೊಳಗಾಗಿ ನಮ್ಮ ಮಿದುಳು ಮತ್ತೆ ಮಾಮೂಲಿ ನೋಟವನ್ನಷ್ಟೇ ಗ್ರಹಿಸುವ ಸ್ತಿತಿಗೆ ಮರಳುತ್ತದೆ. ದರ್ಶನ ನೆನಹಾಗಿ ಉಳಿದೀತು. ಉಳಿಯದೆ ಇದ್ದೀತು, ಆದ ಅನುಭವ ಮಾತ್ರ ಕಾಪಾಡುತ್ತದೆ.
ಮತ್ತೆ ಅಲ್ಲಮ ನೆನಪಾಗುತ್ತಿದ್ದಾನೆ. ಅರಿವು ಅನ್ನುವುದು ಆಗಬೇಕಾದರೆ ನೆಲವನ್ನು ಬಿಟ್ಟು ಮುಗಿಲಲ್ಲಿ ನಿಂದು ಮಿಂಚಬೇಕು ಅನ್ನುತ್ತಾನೆ. ನಿನ್ನೆ ನಾಳೆಗಳು ಇಲ್ಲವಾಗಬೇಕು ಅನ್ನುತ್ತಾನೆ. ಆ ಮಿಂಚಿನ ಅನುಭವ ದಿನಗಟ್ಟಲೆ ಅಲ್ಲ, ನಿಮಿಷಗಳಷ್ಟೂ ತಾಳಲು ನಮಗೆ ಸಾಧ್ಯವಿಲ್ಲವೇನೋ.
ಆದರೂ ನನಗೆ ಆದ ಅನುಭವ, ನಿಮಗೂ ಆದೀತು ಅನ್ನುವ ಸಾಧ್ಯತೆ ತಿಳಿಸಲು ಮಾತೊಂದೇ ಸಾಧನ. ಆ ಮಾತು ಅಲಂಕಾರ, ದೀಪ್ತಿ ಆಗುವುದಲ್ಲದೆ ತಾನೂ ಇಲ್ಲವಾಗಿ ಅರಿವು ಮಾತ್ರ ಇರುವಂತೆ ಮಾಡುವ ಅಪೂರ್ವ ಕ್ಷಣವೇ ಭವ್ಯತೆಯ ದರ್ಶನ.. ಅರಿವಿನಲ್ಲಿ ವಿರೋಧವಿಲ್ಲ, “ಸರಿತಪ್ಪುಮೇಲುಕೀಳುಒಳಿತುಕೆಡುಕು”…ಇತ್ಯಾದಿಗಳೇನೂ ಇರದ ಮಾತಿರದ ಸ್ಥಿತಿ ಅದು. ವಾಣಿ ಇಲ್ಲವಾಗಿ ನಿರ್-ವಾಣಿಯಾಗಿ ಅನುಭವವೊಂದೇ ಇರುವ ಸ್ಥಿತಿ. ಇದನ್ನೆಲ್ಲ ಮಾತಿನ ಮೂಲಕವೇ ಹೇಳಿಕೊಂಡು ಹೌದೇ ಹೇಗೆ ಅಂತ ಜಗಳವಾಡುತ್ತ ಬೇರೆ ಬೇರೆ ದಾರಿ ಹಿಡಿದು ನಮ್ಮ ದಾರಿಯೇ ಸರಿಯಾದ ಪಥವೆಂದು ಹಠಮಾಡುತ್ತಾ….ಗೊತ್ತಲ್ಲ, ಕಾಲೋ ಗಚ್ಛತಿ.
ಒಬ್ಬಿಬ್ಬರಲ್ಲ ಅರುವತ್ತಮೂವರು ಶಲಕಾಪುರುಷರು ಇರುವುದಾದರೆ ನಾವೂ ಸೇರಿ ಆರುನೂರ ಅರುವತ್ತು ಕೋಟಿಯೂ ಇರಬಹುದು ಅನ್ನುವ ಭರವಸೆ ಕೊಡುವ ಮಾತು ಎಲ್ಲ ಕೆಡುಕುಗಳಿಗೆ ಔಷಧ

