ನೀವು ಪ್ರಕಾಶಮಾನರಾದ ಕ್ಷಣದಲ್ಲಿಯೇ ಇಡೀ ಅಸ್ತಿತ್ವವೂ ಪ್ರಕಾಶಮಾನವಾಗುತ್ತದೆ. ನಿಮ್ಮೊಳಗೆ ಅಂಧಕಾರ ತುಂಬಿಕೊಂಡಿದ್ದರೆ, ಆಗ ಇಡೀ ಅಸ್ತಿತ್ವವೂ ಅಂಧಕಾರಮಯವಾಗಿರುತ್ತದೆ. ಎಲ್ಲ ನಿರ್ಭರವಾಗಿರುವುದು ನಿಮ್ಮ ಮೇಲೆಯೇ… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಧ್ಯಾನದ ಕುರಿತಾಗಿ ಜಗತ್ತಿನ ತುಂಬೆಲ್ಲ ಸಾವಿರಾರು ಭ್ರಮೆಗಳು ತುಂಬಿಕೊಂಡಿವೆ. ಧ್ಯಾನ ಬಹಳ ಸರಳವಾದದ್ದು : ಧ್ಯಾನ, ಪ್ರಜ್ಞೆಯಲ್ಲದೇ ಬೇರೇನೂ ಅಲ್ಲ. ಧ್ಯಾನ ಮಂತ್ರ ಪಠಣವಲ್ಲ, ಅಥವಾ ಜಪ ಅಲ್ಲ. ಇವು ಸಮ್ಮೋಹಿನಿ (ಹಿಪ್ನಾಟಿಕ್) ವಿಧಾನಗಳು. ಇವುಗಳಿಂದ ಒಂದು ರೀತಿಯ ವಿಶ್ರಾಂತಿ ಸಾಧ್ಯವಾಗಬಹುದು. ಇಂಥ ಪ್ರಶಾಂತತೆ ತಪ್ಪೇನೂ ಅಲ್ಲ. ನೀವು ವಿಶ್ರಾಂತಿಯನ್ನು ಬಯಸುತ್ತಿದ್ದೀರಾದರೆ ಇದು ಬಹಳ ಒಳ್ಳೆಯದು. ಇಂಥ ಯಾವುದೇ ಸಮ್ಮೇಹಿನಿ ವಿಧಾನಗಳು ಪ್ರಶಾಂತತೆಗೆ ಸಹಾಯಕಾರಿಯಾಗಬಲ್ಲವು ಆದರೆ, ನೀವು ಸತ್ಯದ ಬಗ್ಗೆ ತಿಳಿದುಕೊಳ್ಳಬಯಸುವಿರಾದರೆ ಇಷ್ಟೇ ಸಾಕಾಗುವುದಿಲ್ಲ.
ಸರಳವಾಗಿ ಹೇಳುವುದಾದರೆ ಧ್ಯಾನ ಎಂದರೆ, ನಿಮ್ಮ ಅಪ್ರಜ್ಞೆಯ (unconscious) ಸ್ಥಿತಿಯನ್ನ ಪ್ರಜ್ಞೆಯ ಸ್ಥಿತಿಯನ್ನಾಗಿ ಬದಲಾಯಿಸಿಕೊಳ್ಳುವುದು. ಸಾಧಾರಣವಾಗಿ ನಮ್ಮ ಮೈಂಡ್ ನ ಒಂದನೇ ಹತ್ತರಷ್ಟು ಭಾಗ ಮಾತ್ರ ಪ್ರಜ್ಞೆಯ ಸ್ಥಿತಿಯಲ್ಲಿರುತ್ತದೆ. ಬಾಕಿ ಉಳಿದ 9/10 ರಷ್ಟು ಭಾಗ ಯಾವಾಗಲೂ ಅಪ್ರಜ್ಞೆಯ ಸ್ಥಿತಿಯಲ್ಲಿರುತ್ತದೆ. ನಮ್ಮ ಮೈಂಡ್ ನ ಒಂದು ಸಣ್ಣ ಭಾಗ ಮಾತ್ರ, ಒಂದು ತೆಳುವಾದ ಪರದೆ ಮಾತ್ರ ಪ್ರಕಾಶಮಾನವಾಗಿದೆ ; ಮೈಂಡ್ ನ ಬಾಕಿ ಎಲ್ಲ ಜಾಗ ಕತ್ತಲೆಯಿಂದ ತುಂಬಿಕೊಂಡಿದೆ. ಸವಾಲಿನ ಸಂಗತಿಯೆಂದರೆ ಈ ಸಣ್ಣ ಬೆಳಕಿನ ಸಹಾಯದಿಂದ ಇಡೀ ಮೈಂಡ್ ನ ಪ್ರಕಾಶಮಾನವನ್ನಾಗಿ ಮಾಡುವುದು, ಒಂದು ಮೂಲೆಯೂ ಕತ್ತಲೆಯಲ್ಲಿ ಇರದಂತೆ ನೋಡಿಕೊಳ್ಳುವುದು.
ಇಡೀ ಮೈಂಡ್ ಬೆಳಕಿನಿಂದ ತುಂಬಿಕೊಂಡಾಗ ಬದುಕು ಪವಾಡ ಸದೃಶ ; ಆಗ ಅದಕ್ಕೆ ಮಾಂತ್ರಿಕ ಗುಣಧರ್ಮ ಪ್ರಾಪ್ತವಾಗುತ್ತದೆ. ಆಗ ಅದು ಸಾಧಾರಣವಲ್ಲ, ಎಲ್ಲವೂ ಅಸಾಧಾರಣವಾಗಿ ಬದಲಾಗುತ್ತದೆ. ಶುಷ್ಕ ವಾದದ್ದು ಪವಿತ್ರವಾಗಿ, ಲೌಕಿಕವು ಅಲೌಕಿಕವಾಗಿ ಪರಿವರ್ತಿತಗೊಳ್ಳುತ್ತದೆ, ಮತ್ತು ಬದುಕಿನ ಸಣ್ಣ ಸಣ್ಣ ಸಂಗತಿಗಳಿಗೆ ನಾವು ಕಲ್ಪನೆ ಮಾಡಿಕೊಳ್ಳದ ಹಾಗೆ ಮಹತ್ವ ಲಭ್ಯವಾಗುತ್ತ ಹೋಗುತ್ತದೆ. ಸಾಧಾರಣ ಕಲ್ಲುಗಳು ವಜ್ರಗಳಾಗಿ ಬದಲಾಗುತ್ತವೆ, ಇಡೀ ಅಸ್ತಿತ್ವ ಬೆಳಕಿನಿಂದ ತುಂಬಿಕೊಳ್ಳುತ್ತದೆ. ನೀವು ಪ್ರಕಾಶಮಾನರಾದ ಕ್ಷಣದಲ್ಲಿಯೇ ಇಡೀ ಅಸ್ತಿತ್ವವೂ ಪ್ರಕಾಶಮಾನವಾಗುತ್ತದೆ. ನಿಮ್ಮೊಳಗೆ ಅಂಧಕಾರ ತುಂಬಿಕೊಂಡಿದ್ದರೆ, ಆಗ ಇಡೀ ಅಸ್ತಿತ್ವವೂ ಅಂಧಕಾರಮಯವಾಗಿರುತ್ತದೆ. ಎಲ್ಲ ನಿರ್ಭರವಾಗಿರುವುದು ನಿಮ್ಮ ಮೇಲೆಯೇ.
(ಇಂದು ಓಶೋ ರಜನೀಶ್ ತಮ್ಮ ಇಹಲೋಕ ಭೇಟಿ ಮುಗಿಸಿದ ದಿನ. ಇಂದಿನಿಂದ ಆರಂಭವಾಗುತ್ತಿರುವ ಈ ಸರಣಿ ಮುಂದಿನ ವರ್ಷದ ಇದೇ ದಿನದವರೆಗೂ ನಿರಂತರವಾಗಿ ಬರಲಿದೆ…)


[…] ನೆನ್ನೆಯದು ಇಲ್ಲಿದೆ: https://aralimara.com/2025/01/19/osho365/ […]
LikeLike