ಎಲ್ಲ ಮಹಾ ಸಂಶೋಧನೆಗಳನ್ನು ಮಾಡಿದ್ದು ಹವ್ಯಾಸಿಗಳೇ (amateur) ಹೊರತು ಎಕ್ಸಪರ್ಟ್ ಗಳಲ್ಲ… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹೊಸ ಕೆಲಸ ಶುರು ಮಾಡಿದಾಗಲೆಲ್ಲ ನೀವು ಸೃಜನಶೀಲರಾಗಿರುತ್ತೀರಿ, ಕೆಲಸದಲ್ಲಿ ಆಳವಾಗಿ ಮುಳುಗಿ ಹೋಗುತ್ತೀರಿ, ಕೆಲಸಕ್ಕೆ ನಿಮ್ಮನ್ನು ನೀವು ಅರ್ಪಿಸಿಕೊಂಡು ಬಿಟ್ಟಿರುತ್ತೀರಿ. ದಿನಗಳು ಕಳೆದಂತೆಲ್ಲ, ನೀವು ಆ ಕೆಲಸಕ್ಕೆ ಒಗ್ಗಿಕೊಂಡು ಬಿಡುತ್ತೀರಿ, ಆಗ ನೀವು ಸೃಜನಶೀಲರಾಗುವುದರ ಹೊರತಾಗಿ, ನಿಮ್ಮ ಸಂಶೋಧಕ ಬುದ್ಧಿಯನ್ನು ಕಳೆದುಕೊಂಡು, ಆ ಕೆಲಸದಲ್ಲಿ ರಿಪೀಟೇಟಿವ್ ಆಗಿಬಿಡುತ್ತೀರಿ. ಇದು ಬಹಳ ಸಹಜ, ಏಕೆಂದರೆ ನೀವು ಕೆಲಸದಲ್ಲಿ ಹೆಚ್ಚು ಎಕ್ಸಪರ್ಟ್ ಆದಂತೆಲ್ಲ ಹೆಚ್ಚು ಹೆಚ್ಚು ರಿಪೀಟೇಟಿವ್ ಆಗಿಬಿಡುತ್ತೀರಿ. ಸ್ಕಿಲ್ (ನೈಪುಣ್ಯತೆ) ಎನ್ನುವುದು ರಿಪೀಟೇಟಿವ್ ಪ್ರಕ್ರಿಯೆ.
ಹಾಗಾಗಿ ಎಲ್ಲ ಮಹಾ ಅವಿಷ್ಕಾರಗಳನ್ನು ಮಾಡಿದ್ದು ಅಮೇಚ್ಯೂರ್ ಗಳು, ಏಕೆಂದರೆ ನೈಪುಣ್ಯತೆಯನ್ನು ಸಾಧಿಸಿದವರಿಗೆ ಬಹಳಷ್ಟು ಕಳೆದುಕೊಳ್ಳುವುದಿರುತ್ತದೆ. ಏನಾದರೂ ಹೊಸತು ಅವಿಷ್ಕಾರವಾದರೆ, ತಮ್ಮ ಹಳೆಯ ನೈಪುಣ್ಯತೆಯ ಗತಿ ಏನು ಎನ್ನುವ ಚಿಂತೆ ಅವರಿಗೆ. ಒಬ್ಬರು ಹಲವಾರು ವರ್ಷ ಸಾಧನೆ ಮಾಡಿ ಒಂದು ಕೆಲಸದಲ್ಲಿ ನೈಪುಣ್ಯತೆಯನ್ನು ಸಾಧಿಸಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ತಮ್ಮ ನೈಪುಣ್ಯತೆಗೆ ಚ್ಯುತಿ ತಂದುಕೊಳ್ಳುವುದು ಇಷ್ಟವಿರುವುದಿಲ್ಲ. ಆದ್ದರಿಂದ ಅವರು ಯಾವ ಹೊಸ ಅವಿಷ್ಕಾರಕ್ಕೂ ಮುಂದಾಗುವುದಿಲ್ಲ. ಅವರು ತಮ್ಮ ನೈಪುಣ್ಯತೆಯ ಮಿತಿಯ ಹೊರಗೆ ಹೋಗುವುದನ್ನು ಬಯಸುವುದಿಲ್ಲ. ಹೆಚ್ಚು ನೈಪುಣ್ಯತೆಯನ್ನು ಸಾಧಿಸಿದಂತೆಲ್ಲ, ಅವರು ಹೆಚ್ಚು ಮಂಕಾಗುತ್ತ ಹೋಗುತ್ತಾರೆ, ಕೆಲಸ ಅವರಿಗೆ ಬೋರಿಂಗ್ ಆಗುತ್ತ ಹೋಗುತ್ತದೆ. ಕೆಲಸದಲ್ಲಿ ಅವರಿಗೆ ಯಾವ ಹೊಸ ಥ್ರಿಲ್ ಇಲ್ಲ, ಈ ಕೆಲಸದ ಫಲಿತಾಂಶ ಏನು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು. ಕೆಲಸದಲ್ಲಿ ಅವರಿಗೆ ಯಾವ ಹೊಸ ಅಚ್ಚರಿಯೂ ಇಲ್ಲ.
ನಮಗೆ ಇಲ್ಲೊಂದು ಪಾಠವಿದೆ. ನೈಪುಣ್ಯತೆಯನ್ನು ಗಳಿಸುವುದು ಒಳ್ಳೆಯದು ನಿಜ ಆದರೆ, ಅಲ್ಲಿಯೇ ಕೊನೆ ತನಕ ನಿಂತು ಬಿಡುವುದು ಒಳ್ಳೆಯದಲ್ಲ. ಯಾವಾಗ ನಿಮಗೆ ಕೆಲಸ ಬೋರ್ ಆಗತೊಡಗುತ್ತದೆಯೋ, ಹಳತು ಅನಿಸತೊಡಗುತ್ತದೆಯೋ, ಆಗ ಕೆಲಸದಲ್ಲಿ ಬದಲಾವಣೆ ತಂದುಕೊಳ್ಳಿ. ಏನೋ ಒಂದು ಹೊಸದನ್ನು ಹುಡುಕಿ, ಏನೋ ಹೊಸದನ್ನು ಸೇರಿಸಿ, ಯಾವುದೋ ಹಳೆಯದನ್ನು ತೆಗೆದು ಹಾಕಿ. ನಿಮ್ಮ ನೈಪುಣ್ಯತೆಗೆ ನೀವೇ ಸವಾಲು ಹಾಕಿಕೊಂಡು ಮತ್ತೆ ಅಮೇಚ್ಯೂರ್ ಆಗಿ. ಹೀಗೆ ಮಾಡುವುದಕ್ಕೆ ಅಪಾರ ಧೈರ್ಯ ಬೇಕು. ಹೀಗೆ ಮಾಡಿದಾಗ ಮಾತ್ರ ನಿಮ್ಮ ಬದುಕು ಸುಂದರವಾಗಬಲ್ಲದು, ಕುತೂಹಲಕಾರಿಯಾಗಬಲ್ಲದು.
ನೆನ್ನೆಯದು ಇಲ್ಲಿದೆ: https://aralimara.com/2025/01/19/osho365/


[…] ನೆನ್ನೆಯದು ಇಲ್ಲಿದೆ: https://aralimara.com/2025/01/20/osho-444/ […]
LikeLike