ನಿಮಗೆ ಸಮಾಜ ಮತ್ತು ಪ್ರಕೃತಿಯ ನಡುವೆ ಬಿಕ್ಕಟು ಕಾಣಿಸಿದಾಗ ಅದೇನೇ ಬೆಲೆ ತೆತ್ತಾದರೂ ನೀವು ಪ್ರಕೃತಿಯನ್ನು ಆಯ್ಕೆ ಮಾಡಿಕೊಳ್ಳಿ. ಪ್ರಕೃತಿಯನ್ನು ಆಯ್ಕೆ ಮಾಡಿಕೊಂಡವರು ಯಾವತ್ತೂ ನಷ್ಟ ಅನುಭವಿಸಿದ್ದಿಲ್ಲ… । ಓಶೋರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಇವತ್ತಿನವರೆಗಿನ ತಿಳುವಳಿಕೆ ಎಂದರೆ, ವ್ಯಕ್ತಿ ಇರುವುದು ಸಮಾಜಕ್ಕಾಗಿ ಮತ್ತು ಸಮಾಜ ಒತ್ತಾಯಿಸುವ ನಿಯಮಗಳನ್ನು ವ್ಯಕ್ತಿ ಪಾಲಿಸಬೇಕು. ವ್ಯಕ್ತಿ, ಸಮಾಜದ ಕಟ್ಟು ಪಾಡುಗಳಿಗೆ ಹೊಂದಿಕೊಳ್ಳಬೇಕು. ಇದು ಸಮಾಜಕ್ಕೆ ಹೊಂದಿಕೊಂಡು ಬದುಕುವ ಸಾಮಾನ್ಯ ವ್ಯಕ್ತಿಯ ವ್ಯಾಖ್ಯಾನ. ಸಮಾಜ ಮೂರ್ಖವಾಗಿದ್ದರೂ ವ್ಯಕ್ತಿ ಅದರೊಂದಿಗೆ ಹೊಂದಿಕೊಂಡು ಹೋಗಬೇಕಾಗಿದೆ, ಆಗ ಮಾತ್ರ ವ್ಯಕ್ತಿ ನಾರ್ಮಲ್.
ಈಗ ವ್ಯಕ್ತಿ ಎದುರಿಸುತ್ತಿರುವ ಸಮಸ್ಯೆ ಎಂದರೆ, ವ್ಯಕ್ತಿಯಿಂದ ಪ್ರಕೃತಿ ಒಂದನ್ನು ಬಯಸುತ್ತಿದ್ದರೆ, ಸಮಾಜ ಸಂಪೂರ್ಣವಾಗಿ ವಿರುದ್ಧವಾದದ್ದನ್ನು ಅಪೇಕ್ಷಿಸುತ್ತಿದೆ. ಪ್ರಕೃತಿ ಬಯಸುತ್ತಿರುವುದನ್ನೇ ಸಮಾಜವೂ ಬಯಸುವಂತಾಗಿದ್ದರೆ ಆಗ ವ್ಯಕ್ತಿಯನ್ನು ಯಾವ ದ್ವಂದ್ವವೂ ಕಾಡುತ್ತಿರಲಿಲ್ಲ. ಆಗ ನಾವು ಈಡನ್ ನ ಗಾರ್ಡನ್ ನಲ್ಲಿಯೇ ಇರಬಹುದಾಗಿತ್ತು.
ಸಮಸ್ಯೆ ಹುಟ್ಟಿಕೊಂಡಿರುವುದು ಏಕೆಂದರೆ ಸಮಾಜಕ್ಕೆ ತನ್ನದೇ ಆದ ವೈಯಕ್ತಿಕ ಹಿತಾಸಕ್ತಿಗಳಿವೆ ಮತ್ತು ಈ ಹಿತಾಸಕ್ತಿಗಳು ವ್ಯಕ್ತಿಯ ಆಸಕ್ತಿಗಳೊಂದಿಗೆ ಹೊಂದಿಕೊಳ್ಳುವುದಿಲ್ಲ. ಸಮಾಜಕ್ಕೆ ತನ್ನದೇ ಆದ ಯೋಜನೆಗಳಿವೆ, ಅದು ತನ್ನ ಈ ಯೋಜನೆಗಳ ಮೇಲೆ ಹೂಡಿಕೆ ಮಾಡಿದೆ, ವ್ಯಕ್ತಿ ಸಮಾಜದ ಈ ಹೊಡಿಕೆಯನ್ನು ಕಾಪಾಡಲು ತನ್ನನ್ನು ತಾನು ಬಲಿ ಕೊಡಬೇಕಾಗಿದೆ. ಇದು ತಿರುಗು ಮುರುಗಾದ ಅಸಮಾನತೆಯ ಜಗತ್ತು. ವಾಸ್ತವದಲ್ಲಿ ಜಗತ್ತು ಇದಕ್ಕೆ ವಿರುದ್ಧವಾಗಿರಬೇಕಿತ್ತು. ವ್ಯಕ್ತಿ ಇರುವುದು ಸಮಾಜಕ್ಕಾಗಿ ಅಲ್ಲ ; ಸಮಾಜ ಇರುವುದು ವ್ಯಕ್ತಿಗಾಗಿ. ಸಮಾಜ ಒಂದು ಸಂಸ್ಥೆಯಾಗಿರುವುದರಿಂದ ಅದಕ್ಕೆ ಆತ್ಮ ಇಲ್ಲ, ಆದರೆ ವ್ಯಕ್ತಿಗೆ ಆತ್ಮ ಇದೆ, ಪ್ರಜ್ಞೆಯ ಕೇಂದ್ರ ಇದೆ.
ನೆನ್ನೆಯದು ಇಲ್ಲಿದೆ: https://aralimara.com/2025/01/20/osho-444/


[…] ನೆನ್ನೆಯ ಕಂತು ಇಲ್ಲಿ ಓದಿ : https://aralimara.com/2025/01/21/osho-445/ […]
LikeLike