ಬ್ರಾಹ್ಮಣ ಪುರೋಹಿತಶಾಹಿಯು ಹೇಗೆ ಎಲ್ಲ ಧರ್ಮಗಳ ಸಂಪ್ರದಾಯಗಳನ್ನು ಆಪೋಷನ ತೆಗೆದುಕೊಳ್ಳುತ್ತದೆ ಎನ್ನುವುದನ್ನ ವಿವರಿಸುತ್ತ ಬಾಬಾಸಾಹೇಬ ಅಂಬೇಡ್ಕರ ಅವರು ಕುತೂಹಲಕಾರಿ ಸಂಗತಿಯೊಂದರ ಬಗ್ಗೆ ನಮ್ಮ ಗಮನ ಸೆಳೆಯುತ್ತಾರೆ……. | ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಬ್ರಾಹ್ಮಣರು ಹಿಂದೂ ನಾಗರೀಕತೆ ಸನಾತನ, ಅಂದರೆ ಬದಲಾಗದೇ ಇರುವುದು ಎಂಬ ಅಭಿಮತವನ್ನು ಹರಡಿದ್ದಾರೆ. ಈ ದೃಷ್ಚಿಯು ಸತ್ಯ ಸಂಗತಿಗಳಿಗೆ ಹೊಂದುವುದಿಲ್ಲ, ಹಿಂದೂ ಸಮಾಜವು ಕಾಲ ಕಾಲಕ್ಕೆ ಬದಲಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ ಅಂಥ ಬದಲಾವಣೆ ತೀವ್ರ ಸ್ವರೂಪದ್ದಾಗಿದೆ. ಹಿಂದೂ ಧರ್ಮವು ಸನಾತನವಲ್ಲವೆಂದು ಜನಸಾಮಾನ್ಯರು ಮನದಟ್ಟು ಮಾಡಿಕೊಳ್ಳಬೇಕೆಂಬುದು ನನ್ನ ಇಚ್ಛೆ.
ಬ್ರಾಹ್ಮಣರು ವೈದಿಕ ದೈವಗಳನ್ನು ಆರಾಧಿಸುತ್ತಿದ್ದ ಕಾಲವೊಂದಿತ್ತು. ಆಮೇಲೆ ಅವರು ತಮ್ಮ ವೈದಿಕ ದೈವಗಳನ್ನು ತ್ಯಜಿಸಿ ಅವೈದಿಕ ದೈವಗಳ ಆರಾಧನೆಯನ್ನು ಪ್ರಾರಂಭಿಸಿದ ಕಾಲ ಬಂತು. ಇಂದ್ರ, ವರುಣ ಎಲ್ಲಿ ಹೋದರು? ಬ್ರಹ್ಮ ಎಲ್ಲಿ ಮಿತ್ರ ಎಲ್ಲಿ, ವೇದೋಕ್ತ ದೈವಗಳೆಲ್ಲ ಎಲ್ಲಿ ಹೋದರು? ಅವರೆಲ್ಲ ಕಾಣೆಯಾಗಿದ್ದಾರೆ ಏಕೆಂದರೆ ಅವರುಗಳ ಆರಾಧನೆ ಇಂದು ಲಾಭದಾಯಕವಲ್ಲ. ಅದಕ್ಕೆ ಬ್ರಾಹ್ಮಣರು ವೈದಿಕ ದೈವಗಳನ್ನು ಕೈಬಿಟ್ಟರಷ್ಟೇ ಅಲ್ಲ ಅವರು ಮುಸ್ಲೀಂ ಪೀರರ ಆರಾಧಕರಾದ ಪ್ರಸಂಗಗಳೂ ಇವೆ. ಈ ಸಂದರ್ಭದಲ್ಲಿ ಎದ್ದು ಕಾಣುವ ಪ್ರಸಂಗವೊಂದನ್ನು ಹೆಸರಿಸಬೇಕಾಗಿದೆ. ಮುಂಬೈ ಹತ್ತಿರ ಕಲ್ಯಾಣ ಗುಡ್ಡದ ತುದಿಯಲ್ಲಿ ಬಾವಾ ಮಲಂಗ್ ಷಾ ಎಂಬ ಪೀರನ ಹೆಸರಾಂತ ದರ್ಗಾ ಇದೆ. ಪ್ರತಿವರ್ಷ ಅಲ್ಲಿ ಉರ್ಸ್ ನಡೆಯುತ್ತದೆ. ಆಗ ಅರ್ಪಣೆಗಳನ್ನು ಮಾಡಲಾಗುತ್ತದೆ. ಆ ದರ್ಗಾದಲ್ಲಿ ಅರ್ಚಕನ ಕೆಲಸಮಾಡುವವನು ಒಬ್ಬ ಬ್ರಾಹ್ಮಣ. ಅವನು ಮುಸ್ಲೀಂರ ಬಟ್ಟೆ ತೊಟ್ಟು ದರ್ಗಾದ ಬಳಿ ಕುಳಿತು ದರ್ಗಾಕ್ಕೆ ಅರ್ಪಿಸಿದ ಕಾಣಿಕೆಗಳನ್ನೆಲ್ಲ ಸ್ವೀಕರಿಸುತ್ತಾನೆ. ಇದನ್ನು ಅವ ಹಣಕ್ಕಾಗಿ ಮಾಡಿದ. ಧರ್ಮವೋ ಅಧರ್ಮವೋ ಬ್ರಾಹ್ಮಣರಿಗೆ ಬೇಕಾದುದು ದಕ್ಷಿಣೆ. ವಾಸ್ತವವಾಗಿ ಬ್ರಾಹ್ಮಣರು ಧರ್ಮವನ್ನು ಒಂದು ರೀತಿಯ ಕಸುಬು ಮತ್ತು ವ್ಯಾಪಾರವನ್ನಾಗಿ ಮಾಡಿದ್ದಾರೆ.

