ಅಸ್ತಿತ್ವದ ಬಗ್ಗೆ ಕೃತಜ್ಞತಾ ಭಾವವನ್ನು ಬೇಳೆಸಿಕೊಳ್ಳಿ, ಮಹಾ ಮಹಾ ಮಹಾ ಸಂಗತಿಗಳ ಬಗ್ಗೆ ಅಷ್ಟೇ ಅಲ್ಲ ಬದುಕಿನ ಚಿಕ್ಕ ಪುಟ್ಟ ಸಂಗತಿಗಳ ಬಗ್ಗೆಯೂ. ಅಸ್ತಿತ್ವದ ಮೇಲೆ ನಮಗೆ ಯಾವ ಹಕ್ಕೂ ಇಲ್ಲ, ಅಸ್ತಿತ್ವ ನಮಗೆ ಕೊಟ್ಟಿರುವುದೆಲ್ಲ ಬಹುಮಾನವೇ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹೆಚ್ಚು ಹೆಚ್ಚು ಕೃತಜ್ಞತೆ ಮತ್ತು ಧನ್ಯತೆಗಳನ್ನು ಬೆಳೆಸಿಕೊಳ್ಳಿ ; ಅವು ನಿಮ್ಮ ಸ್ಟೈಲ್ ಎಂಬಂತೆ ಬಿಂಬಿತವಾಗಲಿ. ಎಲ್ಲರಿಗೂ, ಎಲ್ಲದಕ್ಕೂ ಕೃತಜ್ಞರಾಗಿರಿ. ಒಬ್ಬರಿಗೆ ಕೃತಜ್ಞತೆ ಅರ್ಥ ಆಗುತ್ತದೆಯೆಂದರೆ, ಅವರಿಗೆ ಎಲ್ಲ ಸಕಾರಾತ್ಮಕ ಸಂಗತಿಗಳ ಬಗ್ಗೆ ಧನ್ಯತೆ ಇದ್ದೇ ಇರುತ್ತದೆ. ಮತ್ತು ಆಗಬೇಕಾಗಿದ್ದ ಆದರೆ ಆಗದೇ ಹೋದ ಸಂಗತಿಗಳ ಬಗ್ಗೆ ಕೂಡ ಕೃತಜ್ಞತೆ ಇರುತ್ತದೆ. ಒಬ್ಬರು ನಿಮಗೆ ಸಹಾಯ ಮಾಡಿದರೆಂಬ ಕಾರಣಕ್ಕಾಗಿ ನೀವು ಅವರಿಗೆ ಕೃತಜ್ಞರಾಗಿದ್ದೀರಿ – ಇದು ಕೇವಲ ಶುರುವಾತು. ನಂತರ ಒಬ್ಬರು ನಿಮಗೆ ಹಾನಿ ಮಾಡಲಿಲ್ಲ ಎನ್ನುವ ಕಾರಣಕ್ಕೆ ನೀವು ಅವರ ಬಗ್ಗೆ ಕೃತಜ್ಞತಾ ಭಾವವನ್ನು ಬೆಳೆಸಿಕೊಳ್ಳಲು ಶುರು ಮಾಡುತ್ತೀರಿ, ಅವರು ನಿಮಗೆ ಹಾನಿ ಮಾಡುವ ಸಾಧ್ಯತೆ ಇತ್ತು ; ಆದರೆ ಅವರ ಅಂತಃಕರಣದ ಕಾರಣಕ್ಕೆ ಅವರು ನಿಮಗೆ ಹಾನಿ ಮಾಡಲಿಲ್ಲ.
ಒಮ್ಮೆ ನೀವು ಕೃತಜ್ಞತೆಯ ಭಾವವನ್ನು ಅರ್ಥ ಮಾಡಿಕೊಂಡು ನಿಮ್ಮ ಅಂತರಾಳದೊಳಗೆ ಒಂದಾಗಿಸಿಕೊಂಡುಬಿಟ್ಟರೆ, ಎಲ್ಲರಿಗೂ ಎಲ್ಲದಕ್ಕೂ ನೀವು ಕೃತಜ್ಞರಾಗಿರುತ್ತೀರಿ. ಮತ್ತು ನೀವು ಹೆಚ್ಚು ಹೆಚ್ಚು ಕೃತಜ್ಞರಾದಂತೆಲ್ಲ ನಿಮ್ಮ ದೂರುಗಳು, ನಿಮ್ಮ ಕಳವಳಗಳು ಕಡಿಮೆಯಾಗುತ್ತ ಹೋಗುತ್ತವೆ. ಒಮ್ಮೆ ನಿಮ್ಮ ದೂರುಗಳು ಮಾಯವಾದವೆಂದರೆ ನಿಮ್ಮ ದುಗುಡಗಳೂ ಮಾಯವಾಗುತ್ತವೆ. ದೂರುಗಳು ಇದ್ದಾಗ ಮಾತ್ರ ದುಗುಡಗಳ ಅಸ್ತಿತ್ವ. ದುಗುಡಗಳು, ದೂರುಗಳ ಜೊತೆ ಮತ್ತು ದೂರುವ ಮೈಂಡ್ ನ ಜೊತೆ ಅಂಟಿಕೊಂಡುಬಿಟ್ಟಿವೆ. ಎಲ್ಲಿ ಕೃತಜ್ಞತೆ ತುಂಬಿಕೊಂಡಿರುತ್ತದೆಯೋ ಅಲ್ಲಿ ದುಗುಡಗಳಿಗೆ ಜಾಗವೇ ಇರುವುದಿಲ್ಲ. ಇದು ಪ್ರತಿಯೊಬ್ಬರಿಗೂ ಗೊತ್ತಿರಬೇಕಾದ ರಹಸ್ಯ.
ಬದುಕಿನಲ್ಲಿ ಏನೇ ಘಟಿಸಿದರೂ,
ಎಂಥ ಸಂಕಟದ ಸಮಯಗಳು ಎದುರಾದರೂ,
ದಯವಿಟ್ಟು
ಹತಾಶೆಯ ಮನೆ ಇರುವ ವಠಾರಕ್ಕೆ ಕಾಲಿಡಬೇಡ.
ಎಲ್ಲ ಬಾಗಿಲುಗಳು
ಸಂಪೂರ್ಣವಾಗಿ ಮುಚ್ಚಿದ್ದರೂ,
ಭಗವಂತ
ಕೇವಲ ನಿನಗಾಗಿ ಎಂದೇ
ಹೊಸ ದಾರಿಯೊಂದನ್ನು ಹುಟ್ಟು ಹಾಕುತ್ತಾನೆ.
ಅವನ ಅಪಾರ ಕರುಣೆಯನ್ನು ಸ್ಮರಿಸು !
ಎಲ್ಲ ಮನಸ್ಸಿನಂತೆ ನಡೆಯುತ್ತಿರುವಾಗ
ಕೃತಜ್ಞತೆಗಳನ್ನು ಒಪ್ಪಿಸುವುದು ಸುಲಭ ಸಾಧ್ಯ.
ಆದರೆ ತನಗೆ
ಕೊಡಲಾಗಿರುವುದರ ಬಗ್ಗೆ ಮಾತ್ರ ಅಲ್ಲ
ನಿರಾಕರಿಸಿದ್ದರ ಬಗ್ಗೆ ಕೂಡ
ಸೂಫಿ ಕೃತಜ್ಞ.
~ ಶಮ್ಸ್ ತಬ್ರೀಝಿ
ನೆನ್ನೆಯ ಕಂತು ಇಲ್ಲಿ ಓದಿ : https://aralimara.com/2025/01/23/osho-447/


[…] ನೆನ್ನೆಯದು ಇಲ್ಲಿ ಓದಿ : https://aralimara.com/2025/01/24/osho-448/ […]
LikeLike