ಇನ್ನೊಬ್ಬರನ್ನು ಟ್ರಾನ್ಸಫಾರ್ಮ್ ಮಾಡುವುದೆಂದರೆ ನೀವು ನಿಮ್ಮ ಕೈಯಲ್ಲಿ ಸುತ್ತಿಗೆಯನ್ನು ಹಿಡಿಯಬೇಕಾಗುತ್ತದೆ. ಏಕೆಂದರೆ, ಆ ವ್ಯಕ್ತಿಯ ಹಲವಾರು ಭಾಗಗಳನ್ನ ಹೊಡೆದು ಬದಲಾಯಿಸುವುದಿರುತ್ತದೆ. ವ್ಯಕ್ತಿ ಎಂಥ ಅವ್ಯವಸ್ಥೆಯ ಮನುಷ್ಯನೆಂದರೆ ಅವನ ಕುರಿತಾದ ಬಹುತೇಕವು ತಪ್ಪಾಗಿರುತ್ತದೆ ಮತ್ತು ಈ ಎಲ್ಲವನ್ನೂ ಬದಲಾಯಿಸಬೇಕಾಗಿರುತ್ತದೆ… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಕೇವಲ ಒಂದು ಆಯಾಮ ಹೊಂದಿರುವ ವ್ಯಕ್ತಿಗಳು ಸುಂದರ ಹೂವಿನಂತೆ ಆದರೆ ಅವರಿಂದ ಯಾವ ಪ್ರಯೋಜನವಿಲ್ಲ. ಸುಮಾರು ೪೦ ವರ್ಷಗಳಿಂದ ಕೃಷ್ಣಮೂರ್ತಿ ಮಾತನಾಡುತ್ತಿದ್ದಾರೆ ಮತ್ತು ಜನ ಅವರ ಮಾತುಗಳನ್ನ ಆಸಕ್ತಿಯಿಂದ ಕೇಳುತ್ತಿದ್ದಾರೆ. ಇಷ್ಟು ವರ್ಷಗಳಿಂದ ಜನ ಅವರ ಮಾತುಗಳನ್ನ ಕೇಳುತ್ತಿದ್ದರೂ ಅವರ ಕೇಳುಗರ ಪ್ರಜ್ಞೆಯಲ್ಲಿ ಯಾವ ವ್ಯತ್ಯಾಸವೂ ಕಂಡುಬರುವುದಿಲ್ಲ.
ಖಂಡಿತವಾಗಿ ಅವರ ಮಾತುಗಳನ್ನ ಕೇಳುತ್ತ ಬಂದಿರುವ ಜನ ನಾಲೇಜೇಬಲ್ ಆಗಿದ್ದಾರೆ, ವಾದ ಪ್ರೀಯರಾಗಿದ್ದಾರೆ, ಲಾಜಿಕಲ್ ಆಗಿದ್ದಾರೆ. ಅವರ ಜೊತೆ ಯಾವ ವಿಷಯವನ್ನು ಚರ್ಚೆ ಮಾಡಿದರೂ ಬಹಳ ಸೂಕ್ಷ್ಮವಾಗಿ, ಅಚ್ಚುಕಟ್ಟಾಗಿ, ನಾಜೂಕಾಗಿ ಪದ ಬಳಕೆ ಮಾಡುತ್ತ ನಮ್ಮನ್ನು ಒಪ್ಪಿಸುತ್ತಾರೆ . ಅರಿವು, ಪ್ರಜ್ಞೆ, ಧ್ಯಾನ ಅವರು ಯಾವುದೇ ವಿಷಯನ್ನು ಆಳವಾಗಿ ವಿಶ್ಲೇಷಣೆ ಮಾಡಬಲ್ಲವರಾಗಿದ್ದಾರೆ. ಅವರು ತುಂಬ ಎಫೀಷಿಯೆಂಟ್ ಆಗಿದ್ದಾರೆ, ಬಹಳ ಜಾಣತನದ ಮಾತುಗಳನ್ನಾಡುತ್ತಾರೆ. ಆದರೆ ಅವರು ಎಷ್ಟು ಸಾಧ್ಯವೋ ಅಷ್ಟು ಮಿಡೀಯೋಕರ್ ಆಗಿ, ಪೆದ್ದರಾಗಿ ಉಳಿದುಕೊಂಡಿದ್ದಾರೆ. ಆದರೆ ಒಂದೇ ವ್ಯತ್ಯಾಸವೆಂದರೆ ಅವರ ಪೆದ್ದುತನ, ಮಿಡಿಯೋಕ್ರಿಟಿ ಎಲ್ಲವೂ ಕೃಷ್ಣಮೂರ್ತಿಯವರ ಪ್ರಖರ ಮಾತುಗಳ ಹಿಂದೆ ತಲೆ ಮರೆಸಿಕೊಂಡು ಬಿಡುತ್ತವೆ.
ಜನರ ಬದುಕುಗಳನ್ನು ನೇರವಾಗಿ ಪ್ರವೇಶ ಮಾಡಲಿಲ್ಲವಾದ್ದರಿಂದ ಕೃಷ್ಣಮೂರ್ತಿಯವರು ನಮ್ಮ ಕಾಲದ ಶ್ರೇಷ್ಠ ಬುದ್ಧಿಜೀವಿಯಾಗಿ ಮಾತ್ರ ಉಳಿದುಬಿಟ್ಟರು. ಜನರ ಬದುಕುಗಳನ್ನು ಪ್ರವೇಶ ಮಾಡುವುದು ಬೆಂಕಿಯೊಡನೆ ಮಾಡುವ ವ್ಯವಹಾರದಂತೆ ಬಹಳ ಅಪಾಯಕಾರಿ.
ಮಹರ್ಷಿ ರಮಣರು ಪರಿಪೂರ್ಣ. ಅವರು ಸುಮ್ಮನೇ ತಮ್ಮ ಆಶ್ರಮದಲ್ಲಿ ಕುಳಿತಿರುತ್ತಾರೆ, ಜನ ಬರುತ್ತಾರೆ, ಬಹಳ ಭಕ್ತಿಯಿಂದ ತಮ್ಮ ಗೌರವ ಸಮರ್ಪಿಸುತ್ತಾರೆ ಆದರೆ ರಮಣರು ಈ ಎಲ್ಲವನ್ನೂ ಸುಮ್ಮನೇ ಗಮನಿಸುತ್ತ ಕುಳಿತಿರುತ್ತಾರೆ. ರಮಣರದು ಅದ್ಭುತ ಗ್ರೇಸ್ ಮತ್ತು ಚೆಲುವು ಆದರೆ ಈ ಎಲ್ಲವೂ ಸಿಂಗಲ್ ಡೈಮೆನ್ಷನ್ ಮಾತ್ರ. ಈ ಯಾವುದೂ ಬದುಕನ್ನು ಅದರ ಪೂರ್ಣತೆಯಲ್ಲಿ ಪ್ರಭಾವಿಸುವುದಿಲ್ಲ. ಬಹಳ ಹೆಚ್ಚೆಂದರೆ ಜನ ಭಾವನಾತ್ಮಕವಾಗಿ ಪ್ರಭಾವಕ್ಕೆ ಒಳಗಾಗಬಹುದು. ಹೇಗೆ ಕೃಷ್ಣಮೂರ್ತಿ ಜನರನ್ನು ಬೌದ್ಧಿಕವಾಗಿ ಪ್ರಭಾವಿಸಬಲ್ಲರೋ ಹಾಗೆಯೇ ರಮಣರು ಜನರನ್ನು ಭಾವನಾತ್ಮಕವಾಗಿ ತಾಕಬಲ್ಲರು.
ರಾಮಕೃಷ್ಣ ಪರಮಹಂಸರದೂ ಇದೇ ಸಮಸ್ಯೆ. ಅವರು ಬಹಳಷ್ಟು ಜನರನ್ನು ಭಾವನಾತ್ಮಕವಾಗಿ ಪ್ರಭಾವಿಸುತ್ತಾರೆ ಮತ್ತು ಜನ ಸಂತೋಷದಿಂದ ಉನ್ಮತ್ತರಾಗಿ ಕಣ್ಣೀರು ಹಾಕುತ್ತಾರೆ. ಆದರೆ ಈ ಕಣ್ಣೀರು ಅವರನ್ನು ಬದಲಾಯಿಸುವುದಿಲ್ಲ. ಈ ಆನಂದ ಭಾಷ್ಪ ಕ್ಷಣಿಕವಾದದ್ದು, ಮನೆಗೆ ಮರಳಿದಾಗ ಮತ್ತೆ ಅವರು ಅದೇ ಹಳೆಯ ಜನರು.
ಖಂಡಿತವಾಗಿ ಈ ವಿಷಯದಲ್ಲಿ ಗುರ್ಜೇಫ್ ಬಹಳ ದೊಡ್ಡ ಹೆಸರು. ಗುರ್ಜೇಫ್ ನೊಂದಿಗೆ ಅಧ್ಯಾತ್ಮಿಕ ಬದುಕಿನ ಹೊಚ್ಚ ಹೊಸ ಪರಿಕಲ್ಪನೆ ಶುರುವಾಯಿತು. ನನ್ನ ಹಾಗೆಯೇ ಗುರ್ಜೇಫ್ ಕೂಡ ತಮ್ಮ ದಾರಿಯನ್ನ ನಾಲ್ಕನೇಯ ದಾರಿ ಎಂದು ಕರೆಯುತ್ತಾರೆ. ಗುರ್ಜೇಫ್ ಗೆ ಜ್ಞಾನ ಹಂಚುವುದಕ್ಕಿಂತ ಜನರನ್ನು ಸಂತೈಸುವಲ್ಲಿ ಹೆಚ್ಚು ಆಸಕ್ತಿ ಇದ್ದುದರಿಂದ ಬಹುತೇಕ ಅವರನ್ನು ತಪ್ಪು ತಿಳಿಯಲಾಗಿದೆ. ಗುರ್ಜೇಫ್ ಗೆ ಅದ್ಭುತ ಥಿಯರಿಗಳನ್ನ ಮಂಡಿಸುವಲ್ಲಿ, ನಿಮ್ಮ ತಲೆಯಲ್ಲಿ ಸಿದ್ಧಾಂತಗಳನ್ನು ತುಂಬುವಲ್ಲಿ, ನಿಮ್ಮನ್ನು ಭ್ರಮಾತ್ಮಕ ಸ್ಥಿತಿಗೆ ಕರೆದುಕೊಂಡು ಹೋಗುವಲ್ಲಿ ಯಾವ ಮುತುವರ್ಜಿಯೂ ಇಲ್ಲ. ಅವರಿಗೆ ನಿಮ್ಮ ಕಣ್ಣಿರಿನಲ್ಲಿ, ಭಾವನೆಗಳಲ್ಲಿ, ಎಮೋಷನ್ ಗಳಲ್ಲಿ ಯಾವ ರುಚಿ ಇಲ್ಲ.
ಗುರ್ಜೇಫ್ ಗೆ ನಿಮ್ಮಿಂದ ಗೌರವಿಸಲ್ಪಡುವುದರಲ್ಲಿ, ಪೂಜಿಸಲ್ಪಡುವುದರಲ್ಲಿ ಯಾವ ಖುಶಿ ಇಲ್ಲ. ಅವರ ಆಸಕ್ತಿ ಅದು ಏನೇ ಇದ್ದರೂ, ಅದು ನಿಮ್ಮನ್ನು ಟ್ರಾನ್ಸಫಾರ್ಮ್ ಮಾಡುವುದರಲ್ಲಿ ಮಾತ್ರ.
ಇನ್ನೊಬ್ಬರನ್ನು ಟ್ರಾನ್ಸಫಾರ್ಮ್ ಮಾಡುವುದೆಂದರೆ ನೀವು ನಿಮ್ಮ ಕೈಯಲ್ಲಿ ಸುತ್ತಿಗೆಯನ್ನು ಹಿಡಿಯಬೇಕಾಗುತ್ತದೆ. ಏಕೆಂದರೆ, ಆ ವ್ಯಕ್ತಿಯ ಹಲವಾರು ಭಾಗಗಳನ್ನ ಹೊಡೆದು ಬದಲಾಯಿಸುವುದಿರುತ್ತದೆ. ವ್ಯಕ್ತಿ ಎಂಥ ಅವ್ಯವಸ್ಥೆಯ ಮನುಷ್ಯನೆಂದರೆ ಅವನ ಕುರಿತಾದ ಬಹುತೇಕವು ತಪ್ಪಾಗಿರುತ್ತದೆ ಮತ್ತು ಈ ಎಲ್ಲವನ್ನೂ ಬದಲಾಯಿಸಬೇಕಾಗಿರುತ್ತದೆ. ಮನುಷ್ಯ ತನ್ನ ತಪ್ಪು ರೀತಿಗಳಲ್ಲಿ ಎಷ್ಟು ಹೂಡಿಕೆ ಮಾಡಿದ್ದಾನೆಂದರೆ, ಅವನನ್ನು ಬದಲಾಯಿಸ ಬಯಸುವವರು ಕೇವಲ ಪರಿಧಿಯಲ್ಲಿ ಮಾತ್ರ ಅಲ್ಲ ಅವನ ಕೇಂದ್ರದಲ್ಲೂ ಹಸ್ತಕ್ಷೇಪ ಮಾಡಬೇಕಾಗುತ್ತದೆ. ಗುರ್ಜೇಫ್ ನಂಥ ಕೆಲವೇ ಕೆಲವು ಧೈರ್ಯಶಾಲಿಗಳು ಮಾತ್ರ ವ್ಯಕ್ತಿಯ ಕೇಂದ್ರ ಜಗತ್ತನ್ನು ಪ್ರವೇಶಿಸಬಲ್ಲರು.
ಗುರ್ಜೇಫ್ ಗುರು ಅಲ್ಲ, ಮಾಸ್ಟರ್, ಒಂದು ಬಗೆಯ ಸೂಲಗಿತ್ತಿ. ಕೃಷ್ಣಮೂರ್ತಿ ಟೀಚರ್ ಆಗಿಯೇ ಉಳಿದುಬಿಟ್ಟರು. ಹಾಗೆಯೇ ರಮಣರು ಬಹಳ ಸುಂದರ, ಸಾಕ್ಷಾತ್ಕಾರ ಹೊಂದಿದ ಮನುಷ್ಯನಾಗಿ ಉಳಿದು ಬಿಟ್ಟರು, ದೂರದ ನಕ್ಷತ್ರದಂತೆ. ನೀವು ಇದನ್ನು ನೋಡಬಹುದು, ಹೊಗಳಬಹುದು, ಈ ಕುರಿತು ಪದ್ಯ ಬರೆಯಬಹುದು ಆದರೆ ಇಷ್ಟು ಮಾತ್ರ, ಇದಕ್ಕಿಂತ ಹೆಚ್ಚಿನದು ಸಾಧ್ಯವಿಲ್ಲ. ಇದು ಕೇವಲ ದೂರದ ವಿದ್ಯಮಾನವಾಗಿಯೇ ಉಳಿದುಬಿಟ್ಟಿತು. ನೀವು ಅವರನ್ನು ತಲುಪಲಾರಿರಿ, ದೂರ ಅಗಾಧವಾಗಿದೆ. ಮತ್ತು ಅವರು ಕೂಡ ಈ ದೂರವನ್ನು ಕಡಿಮೆ ಮಾಡಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ.
ನೀವು ಏನು ಮಾಡಬಹುದಿತ್ತು? ಆ ದೂರವನ್ನು ಹೇಗೆ ಕಡಿಮೆ ಮಾಡಬಹುದಿತ್ತು? ರಮಣರು ಮತ್ತು ನಿಮ್ಮ ನಡುವಿನ ದೂರವನ್ನು ಬ್ರಿಜ್ ಮಾಡುವ ಸಾಮರ್ಥ್ಯ ಯಾರಿಗಾದರೂ ಇದ್ದರೆ, ಅವರು ರಮಣರ ಬಳಿ ಬರಲೇ ಬೇಕಿರಲಿಲ್ಲ, ಅವರು ತಮ್ಮ ಟ್ರಾನ್ಸಫಾರ್ಮೇಷನ್ ತಾವೇ ಮಾಡಿಕೊಳ್ಳಬಹುದಿತ್ತು. ಅಂಥವರಿಗೆ ಯಾವ ಮಾಸ್ಟರ್ ನ ಅವಶ್ಯಕತೆ ಇರುವುದಿಲ್ಲ. ಈ ಸೇತುವೆಯನ್ನು ಕಟ್ಟಲು ರಮಣರು ತಾವೇ ಪ್ರಯತ್ನಿಸಿದ್ದರೆ ಮಾತ್ರ ಈ ಸೇತುವೆ ಸಾಧ್ಯವಾಗುತ್ತಿತ್ತು.
Osho / Dhammapada: The Way of the Buddha, Volume 2, chapter ;- 2

