ಬೇಂದ್ರೆ ವಿಚಾರಗಳು । ‘ಕವಿದಿನ’ ವಿಶೇಷ

ಬೇಂದ್ರೆ ಬದುಕು ಮತ್ತು ಬರಹಗಳೆರಡೂ ಹಲವು ಪದರಗಳ ನಿಗೂಢ ನಿಕ್ಷೇಪ. ಬಗೆದಷ್ಟೂ ಆಳ, ಶ್ರೀಮಂತ. ಕವಿದಿನದ ಸಂದರ್ಭಕ್ಕೆ ಕೆಲವು ಬೇಂದ್ರೆ ಚಿಂತನೆಗಳು ಇಲ್ಲಿವೆ… । ಸಂಗ್ರಹ : ಚಿದಂಬರ ನರೇಂದ್ರ

ವಿಮರ್ಶೆ ಹಾದಿ ತೋರಿಸ ಬೇಕಾದ ಶಾಸ್ತ್ರವು, ಕೆಲವರಿಗೆ ಹಾದಿ ತಪ್ಪಿಸುತ್ತಿದೆ. ವಿಮರ್ಶೆಗೆ ಮೂಲ ಹೃದಯದ ಅನುಭವ, ಬರೀ ಶಾಸ್ತ್ರದ ನಿಯಮವಲ್ಲ. ಕೆಲವರ ವಿಮರ್ಶೆಯಲ್ಲಿ ಶಾಸ್ತ್ರೀಯ ಭ್ರಮೆ ತೋರಿ ಬರುವದು. ಒಂದು ಕವನ ಕೇಳಿ ಆನಂದವಾದರೂ, ಆ ಕವನವು ಒಂದು ರೀತಿಯಲ್ಲಿ ಛಂದೋಬದ್ಧವಾಗಿಲ್ಲ ಎಂಬ ಮಾತು ತಿಳಿದೊಡನೆ ‘ಇದೇನು ಛಂದ?’ ಎನ್ನುವದಿರಲಿ, ತಮಗೆ ಆನಂದವಾಗಿಲ್ಲವೆಂದು ಭ್ರಮಿಸಿಕೊಳ್ಳುವ ರಸಿಕರಿದ್ದಾರೆ. ಔಷಧ ತೆಗೆದುಕೊಳ್ಳದೇ ನಿದ್ರೆ ಬಾರದ ಒಬ್ಬ ಪ್ರಾಣಿಗೆ ಎಷ್ಟೋ ದಿವಸದ ಮೇಲೆ ತಪ್ಪಿ ಖಡುವಿನ ಪುಡಿ ಕೊಟ್ಟರೂ ನಿದ್ದೆ ಬಂದಿತಂತೆ. ಆದರೆ ಅದು ಔಷಧ ಆಗಿರಲಿಲ್ಲ ಎಂದು ತಿಳಿದಾಗ, ಆ ಪ್ರಾಣಿ ತಾನು ಮೂರ್ಛೆ ಹೋಗಿರಬೇಕು, ಅಥವಾ ತನಗೆ ಗ್ಲಾನಿ ಬಂದಿರಬೇಕೆಂದು ತಿಳಿದುಕೊಂಡನಂತೆ. ತಾನು ಅನುಭವಿಸಿದ ನಿದ್ದೆಯಲ್ಲಿಯೂ ಸಂಶಯ ಉಂಟಾಯಿತು ಅವನಿಗೆ. ಶಾಸ್ತ್ರದಲ್ಲಿ ಮೋಸವಿದ್ದರೆ ಹೃದಯಾನುಭವದಿಂದ ತಿದ್ದಬಹುದು. ಹೃದಯದಲ್ಲೇ ಮೋಸವೆನಸಿದರೆ ಶಾಸ್ತ್ರವೇನು ಮಾಡಬಲ್ಲದು? ಹೃದಯವನ್ನು ಶಂಕಿಸಬಾರದು. ಅದರ ಅನುಭವವು ಸ್ವಯಂ ಪ್ರಮಾಣವಾದ ಸತ್ಯವು. ಶಾಸ್ತ್ರದ ದಾಕ್ಷಿಣ್ಯಕ್ಕಾಗಿ ಆದ ಅನುಭವವು ಆಗೇ ಇಲ್ಲ ಎನ್ನುವುದು ಮಿಥ್ಯಾಚಾರಕ್ಕೆ ಸೇರುವುದು. ಅನಾಚಾರವನ್ನು ತಿದ್ದಬಹುದು ಮಿಥ್ಯಾಚಾರವನ್ನಲ್ಲ. ಕಾವ್ಯಕ್ಕೆ ಹೃದಯದಲ್ಲಿ ನಂಬಿಕೆ ಬೇಕು, ಅದಿಲ್ಲದೇ ಸಹೃದಯತೆಯಿಲ್ಲ, ರಸಿಕತೆಯಿಲ್ಲ, ಕವಿತ್ವವಿಲ್ಲ, ಮಹಾಕವಿತ್ವವೂ ಇಲ್ಲ.


ಮಾತು ಮುಗಿಸುವ ಮುನ್ನ ಇನ್ನೊಂದು ಹಳೆಯ ಪದ್ಯವನ್ನು ಹೇಳುತ್ತೇನೆ. ಅದರ ಸ್ವಾರಸ್ಯ ಅಷ್ಟಿಷ್ಟಲ್ಲ ಇದನ್ನು ತಾವೇ ಕಾಣಬಹುದು. ಈ ಪದ್ಯವು ಹರಿಹರದ ಶಾಸನದಲ್ಲಿ ಕೊರೆದ ಪದ್ಯ. ಬಂಗಾರದ ತಗಡಿನಲ್ಲಿ ಬರೆದಿಡಬೇಕಾದ ಪದ್ಯ. ಕಲ್ಲಿನಲ್ಲಿ ಕಡೆದಿಟ್ಟರು ನಮ್ಮ ದುಂದು ಕಲೋಪಾಸಕರು.

ನೀರಾಜಜಾತ ವಿಸ್ತರಿಸಿದಂಡಮುಂಮಂ ಮಣಿ ಆಲೆಯಾಗಿ ಬಿ-
ಸ್ತಾರಿಸಿ, ಹಸ್ತದಿಂ ಪಿಡಿದು, ತನ್ನ ಶರಣ್ಭುಗುವರ್ಗೆ ಲೇಸುಮಂ.
ಪ್ರೇರಿಸಲೋಸುಗಂ ಜಪಿಸುತಿರ್ಪಳಿರುಳ್ ಪಗಲಾವಳೋರ್ವಳಾ
ಭಾರತಿ ನಮ್ಮ ಜಿವ್ಹೆಯೊಳನಾಳದಿಂದಿರುತಿರ್ಕೆ ಸಂತತಂ.

ಬ್ರಹ್ಮನು ಬ್ರಹ್ಮಾಂಡಗಳನ್ನು ಪಡೆದು ಅಂತರೀಕ್ಷವನ್ನು ಹೇಗೋ ಸೂರೆ ಮಾಡಿದ್ದಾನೆ. ಸರಸ್ವತಿಯು ಅವುಗಳಿಗೆ ಸೂತ್ರ ಕಲ್ಪಿಸಿ ಮಾಲೆ ಮಾಡಿ ತನ್ನ ಧ್ಯಾನದ ಗತಿಯಲ್ಲಿ ಜಗಚ್ಚಕ್ರವನ್ನು ತಿರುಗಿಸುತ್ತಿದ್ದಾಳೆ. ಅದೇಕೆ?, ತನ್ನ ಶರಣರಲ್ಲಿ ಲೇಸನ್ನು ಪ್ರೇರೇಪಿಸಲು. ಕವಿಗಳು ಸರಸ್ವತಿಯ ಶರಣರು.ಅವರ ಲೇಸಿನ ಪ್ರೇರಣೆಗೂ ಜಗಚ್ಚಕ್ರದ ಗತಿಗೂ ವಿರೋಧವಿಲ್ಲ. ಎರಡು ಒಂದೇ ಧ್ಯಾನದ ಎರಡು ಅಂಗಗಳು. ಕಾವ್ಯವು ಲೇಸನ್ನು ಪಡೆಯುವುದು. ಅದು ಲೇಸಿಗಾಗಿದೆ. ಕಾವ್ಯದಿಂದ ಭಯವಾಗುವ ಕಾರಣವಿಲ್ಲ. ಕನ್ನಡದ ಲೇಸಾಗಲಿ ಕಾವ್ಯದಿಂದ. ಅಂಥ ಕಾವ್ಯ ಬೆಳೆಯುವಂತೆ ಸರಸ್ವತಿಯು ಈ ಕ್ಷೇತ್ರದಲ್ಲಿ ರದವೃಷ್ಟಿಯನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ. (ಸಾಹಿತ್ಯದ ವಿರಾಟ್ ಸ್ವರೂಪ)



ಜಿಬ್ರಾನ್ ಸೌಂದರ್ಯೋಪಸಕ. ಸೌಂದರ್ಯದ ತಿರಸ್ಕಾರದಲ್ಲಿ ವಿರೂಪಾಸುರ ಹುಟ್ಟುತ್ತಾನೆ. ” The divine manifests in the psychic as love, in the mind as knowledge , in the vital as power, in the physical as beauty ” ವಿಚಿತ್ರ ವಿರಕ್ತಿಯಿಂದ ಮೈ ಕೈ ಊನುಮಾಡಿಕೊಳ್ಳುವುದು ಅಸಾಧಾರಣ ಸಾಧನೆ ಎಂಬ ಭ್ರಮೆ ಭಾರತದ ಜನಜೀವನವನ್ನು ವಿದ್ರೂಪಗೊಳಿಸಿದೆ. ಕಲಾಮೂರ್ತಿಗಳನ್ನು ಮುಕ್ಕು ಮಾಡುವ ಬರ್ಬರತೆ, ವಿಜಯಾಂಕಾರ, ಮತ್ತತೆಯ ಭೂಷಣವೆನಿಸಿಕೊಂಡಿದೆ. ‘It has been the ruin of India’ ಎಂದು ಶ್ರೀಮಾತೆಯವರು ಸಾರಿದ್ದಾರೆ. (ಗುರು ಚತುರ್ಮುಖ )


ಮಾತನಾಡದಿರುವುದೇ ಮೌನ ಎಂದು ಜನರು ಸಾಮಾನ್ಯವಾಗಿ ತಿಳಿದುಕೊಂಡರೂ; ಮೌನದ ನೆಲೆಯು ಇನ್ನೂ ಎತ್ತರದಲ್ಲಿದೆ ಎಂಬುದು ಅದರ ಅಭ್ಯಾಸದಿಂದ ತಿಳಿಯುವುದು. ಮೊದಲು ಮಾತಿಗೂ ಮೌನಕ್ಕೂ ವೈರವಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ಮಾತಿನ ನೆಲೆಯಾಚೆಗೆ ಮೌನದ ಮನೆಯಿದೆ – ಹೌದು. ಆದರೂ ಮೌನದ ಗರ್ಭದ ಸಾಹಿತ್ಯವನ್ನು ಮಾತು ಹೊತ್ತು ಹೊರಗೆ ತರುವದು. ಮಾತಿನ ಸಂತೆಯಲ್ಲಿ ಮೌನದ ಸರಕಿನ ವ್ಯಾಪಾರ ನಡೆಯುವದು. ಹೀಗಿದ್ದೂ ಮಾತೇನು, ಮೌನವೇನು, ಎರಡೂ ಹೊದಿಕೆಗಳೇ. ಒಳಗಿನ ತಿರುಳು ಬೆರೆಯೇ ಇದೆ. ಆ ಒಳಗಿನ ತಿರುಳು ಜೀವಭಾವ. ಮೌನ ಭಿತ್ತಿ , ಮಾತು ಚಿತ್ರ. (ಮೌನದ ಜಾಡು )


ಸಾಹಿತ್ಯದ ಕುರುಕ್ಷೇತ್ರವು ಶಾಲೆಯಷ್ಟೇ ಅಲ್ಲ, ಮನೆಯಲ್ಲಿ ಸೇರಿ, ಮಠದಲ್ಲಿ ನುಗ್ಗಿ, ಸಮಾಜವನ್ನು ಕಟ್ಟಿ, ಸರ್ಕಾರದಲ್ಲಿ ಪ್ರತಿಷ್ಠೆ ಹೊಂದಬೇಕು. ಯಾಕೆಂದರೆ, ಜೀವನದ ಒಂದು ಸಿದ್ಧಿ ಸಾಹಿತ್ಯದಲ್ಲಿದ್ದಂತೆ ಸಾಹಿತ್ಯದ ಒಂದು ಸಿದ್ಧಿ ಜೀವನದಲ್ಲಿದೆ. ಎಲ್ಲೆಲ್ಲಿಯೂ ಹಾಗೆ ನೋಡಿದರೆ ಧರ್ಮಯುದ್ಧ, ಹೀಗೆ ನೋಡಿದರೆ ರಾಸಲೀಲೆ ನಡೆಯಬೇಕು. ರುದ್ರನ ತಾಂಡವದೊಂದಿಗೆ ಪಾರ್ವತಿಯ ಲಾಸ್ಯವಾಗಬೇಕು. ಈ ಇಮ್ಮುಖದ ಬಾಳನ್ನು ಒಮ್ಮುಖವಾಗಿ ಹವಣಾಗಿ ಕುಣಿಸುವ ತಂತ್ರವನ್ನು ಸಾಹಿತ್ಯದ ವಿರಾಟ್ ಕಲೆಯೇ ತೋರಿಸೀತು.



ಎದೆ ತೆರೆದು ಕೇಳಿದರೆ ಕಾವ್ಯದ ಸಾಫಲ್ಯ :

ಎದೆ ತೆರೆದು ಯಾವ ಕಾವ್ಯವನ್ನು ಕೇಳಿದರೂ ಇಂಪಿಗೆ ಕಿವಿ ಸೋಲುವುದು, ಬಣ್ಣನೆಗೆ ಕಣ್ಣರಳುವವು, ತಾಳಲಯಕ್ಕೆ ಪ್ರಾಣ ಕುಣಿಯುವುದು, ಅದರ ಕೊಂಕಿಗೆ, ವ್ಯಂಜನೆಗೆ, ಧ್ವನಿಗೆ, ಮೈಮರೆಯುವದು, ಮನವು ಉನ್ಮನವಾಗುವದು. ಹಳೆಯದಿರಲಿ ಹೊಸದಿರಲಿ ಹೀಗೆ ಮಾಡಬಲ್ಲದೇಲ್ಲ ಕಾವ್ಯವೇ. ಸುಗ್ಗಿಗೊಮ್ಮೆ ತಲೆದೋರುವ ತಳಿರಿನಲ್ಲಿ ಹೊಸದು ಹಳೆಯದಿದೆಯೆ? ತಳಿರಿನ ಕೆಂಪು, ತಂಪು, ಇಂಪು ಅದೇ. ಸಂವತ್ಸರ ಬೇರೆಯಾಗಿರಬಹುದು. ‘ ಹೊಸ ಹಳೆ’ ಶಬ್ದಗಳಿಗೆ ರಸಿಕರು ಮೋಸ ಹೋಗಬಾರದು. ಕನ್ನಡದಲ್ಲಿ ಕಾವ್ಯವು ಎಂದಿನಿಂದಲೂ ಸಾಗಿ ಬಂದಿದೆ. ಕಲೆಗಳ ತವರು ಮನೆ ಈ ನಾಡು. ಕಾವ್ಯಕ್ಕೆ ಈಗಲೂ ಜಯವಿರಲಿ. (ಸಾಹಿತ್ಯದ ವಿರಾಟ್ ಸ್ವರೂಪ )

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.