ವಿಶೇಷ ಭಯ ( Special Fear )  : ಓಶೋ 365 Day#15

ಅದು ಏನು ಎನ್ನುವುದು ಗೊತ್ತಿರದೇ ಇದ್ದರೆ ಅದು ಒಳ್ಳೆಯ ಭಯ. ಇದು ಏನು ಹೇಳುತ್ತದೆಯೆಂದರೆ ನೀವು ಯಾವುದೋ ಅಜ್ಞಾತದ ಬಾಗಿಲಲ್ಲಿ ಇದ್ದೀರಿ ಎನ್ನುವುದನ್ನ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಯಾವಾಗ ನಿಮ್ಮ ಭಯಕ್ಕೆ ಒಂದು ಕಾರಣವಿರುತ್ತದೆಯೋ ಆಗ ಅದು ಸಾಧಾರಣ ಭಯ. ಒಬ್ಬರಿಗೆ ಸಾವಿನ ಭಯ ಇದೆಯೆಂದರೆ ಅದು ಬಹಳ ಸಾಮಾನ್ಯವಾದ ಭಯದ ಗುರುತು ; ಇದರಲ್ಲಿ ಅಂಥ ವಿಶೇಷವಾದದ್ದು ಏನೂ ಇಲ್ಲ. ಮುಪ್ಪಿನ ಕುರಿತು, ಕಾಯಿಲೆಯ ಕುರಿತು ಭಯ ಇದೆಯಾದರೆ ಇವು ಎಲ್ಲರಿಗೂ ಇರಬಹುದಾದ ಸಾಮಾನ್ಯ ಭಯಗಳು. ವಿಶೇಷ ಭಯ ಯಾವುದೆಂದರೆ, ಈ ಭಯಕ್ಕೆ ಕಾರಣ ನಿಮಗೆ ಗೊತ್ತಿಲ್ಲ, ಇದು ವಿನಾಕಾರಣ ನಿಮ್ಮನ್ನು ಆವರಿಸಿಕೊಂಡಿರುವ ಭಯ. ಇಂಥ ಭಯ ನಿಜವಾಗಿಯೂ ದಿಗಿಲುಗೊಳಿಸುವಂಥದು. ಭಯದ ಕಾರಣ ಗೊತ್ತಿದ್ದರೆ ಮೈಂಡ್ ಗೆ ಸಮಾಧಾನ ಇರುತ್ತದೆ. ಈ ಭಯ ಯಾಕೆ ಎಂದು ನೀವು ಮೈಂಡ್ ಗೆ ವಿವರಿಸಬಲ್ಲಿರಾದರೆ, ಭಾರ ಹಾಕಲು ಏನೋ ಒಂದು ಆಧಾರವಿದೆ ಮೈಂಡ್ ಗೆ. ಈ ವಿವರಣೆಗಳು ಏನೂ ಸಹಾಯ ಮಾಡುವುದಿಲ್ಲವಾದರೂ ನಿಮಗೆ ಸಮಾಧಾನವನ್ನಂತೂ ನೀಡುತ್ತವೆ.

ಸಂಗತಿಗಳನ್ನು ಯಾಕೆ ಎಂದು ಪ್ರಶ್ನೆ ಮಾಡದೇ, ಅವು ಇರುವ ಹಾಗೆ ಗಮನಿಸುವುದು ಒಳ್ಳೆಯದು. ಪ್ರತೀ ಸಾಧಕನನ್ನು ಕಾಡುವಂತೆ ಏನೋ ಒಂದು ಅಜ್ಞಾತ ನಿಮ್ಮ ಸುತ್ತಲೂ ಸುತ್ತುತ್ತಿರುತ್ತದೆ, ಈ ಭಯವನ್ನು ಎಲ್ಲ ಸಾಧಕರು ದಾಟಿ ಹೋಗಲೇ ಬೇಕು. ಈ ಕುರಿತು ಹೆಚ್ಚಿನ ವಿವರಣೆ ನೀಡಲು ಬಯಸದೇ ನಾನು ನಿಮ್ಮನ್ನು ಇದರೊಳಗೆ ತಳ್ಳಲು ಬಯಸುತ್ತೇನೆ. ನಾನು ಮನಶಾಸ್ತ್ರಜ್ಞನಲ್ಲ, ನಾನು ಅಸ್ತಿತ್ವವಾದಿ. ನನ್ನ ಪ್ರಯತ್ನ ಏನೆಂದರೆ, ನೀವು ಸಾಧ್ಯವಾದಷ್ಟು ಅನುಭವಗಳನ್ನು ಹೊಂದುವಂತೆ ಮಾಡುವುದು ; ಪ್ರೇಮ, ಭಯ, ಕೋಪ, ದುರಾಸೆ, ಅಸೂಯೆ, ಹಿಂಸೆ, ಅಂತಃಕರಣ, ಚೆಲುವು ಇತ್ಯಾದಿಯಾಗಿ. ನಿಮಗೆ ಹೆಚ್ಚು ಹೆಚ್ಚು ಈ ಅನುಭವಗಳ ಪರಿಚಯವಾದಂತೆ ನೀವು ಹೆಚ್ಚು ಶ್ರೀಮಂತರಾಗುತ್ತೀರಿ.

ಒಮ್ಮೆ, ಒಬ್ಬ ಹೆಣ್ಣುಮಗಳು ತನ್ನ ಮಗನೊಂದಿಗೆ ಮುಲ್ಲಾ ನಸ್ರುದ್ದೀನನ ಹತ್ತಿರ ಬಂದಳು.
“ ಹಿರಿಯರೇ, ಈ ನನ್ನ ಮಗ ತುಂಬಾ ಹಟಮಾರಿಯಾಗುತ್ತಿದ್ದಾನೆ, ಒರಟನಾಗುತ್ತಿದಿದ್ದಾನೆ ಏನಾದರೂ ಮಾಡಿ ಅವನೊಳಗೆ ಸ್ವಲ್ಪ ಹೆದರಿಕೆಯನ್ನು ಹುಟ್ಟಿಸಿ, ಇಲ್ಲವಾದರೆ ಅವನು ನನ್ನ ಕೈಮೀರಿ ಹೋಗುತ್ತಾನೆ “

ಮುಲ್ಲಾ ಕ್ರೂರವಾಗಿ ಆ ಮಗನ ಕಣ್ಣಲ್ಲೊಮ್ಮೆ ದಿಟ್ಟಿಸಿ ನೋಡಿ ಅಮ್ಮನ ಮಾತು ಕೇಳುವಂತೆ ಆದೇಶ ಮಾಡಿದ. ಆಮೇಲೆ ತನ್ನ ಮುಖವನ್ನು ಭಯಂಕರವಾಗಿ ಕಿವಿಚಿ,  ಕಣ್ಣುಗುಡ್ಡೆಗಳನ್ನು ತಿರುಗಿಸುತ್ತ ಆ ಮಗನ ಮುಖವನ್ನೇ ದಿಟ್ಟಿಸಿ ನೋಡತೊಡಗಿದ. ಅವನು ಎಷ್ಟು ಭೀಕರವಾಗಿ ಕಾಣಿಸುತ್ತಿದ್ದನೆಂದರೆ ತಾಯಿ ಹೆದರಿ ಮೂರ್ಛೆ ಹೋಗಿಬಿಟ್ಟಳು. ಮುಲ್ಲಾ ಕೋಣೆಯಿಂದ ಹೊರಗೆ ಓಡಿ ಹೋಗಿಬಿಟ್ಟ.

ತಾಯಿ ಮೂರ್ಛೆಯಿಂದ ಹೊರಗೆ ಬಂದ ಮೇಲೆ ನಸ್ರುದ್ದೀನ್ ನನ್ನು ತರಾಟೆಗೆ ತೆಗೆದುಕೊಂಡಳು, “ ನಿಮಗೆ ನನ್ನ ಮಗನಲ್ಲಿ ಹೆದರಿಕೆ ತುಂಬುವಂತೆ ಕೇಳಿಕೊಂಡಿದ್ದೆ ನನ್ನಲ್ಲಲ್ಲ “

ತಾಯಿಯ ಮಾತಿಗೆ ಮುಲ್ಲಾ ಉತ್ತರಿಸತೊಡಗಿದ “ ಅಮ್ಮಾ ಒಮ್ಮೆ ಭಯವನ್ನು ಹುಟ್ಟಿಸಿದ ಮೇಲೆ ಅದು ಎಲ್ಲರನ್ನೂ ಆವರಿಸಿಕೊಳ್ಳುತ್ತದೆ. ಭಯಕ್ಕೆ ವಿಶೇಷ ಪ್ರೀತಿ ಪಾತ್ರರು ಯಾರೂ ಇಲ್ಲ. ನೀವು ನೋಡಲಿಲ್ಲ ಅನಿಸತ್ತೆ ನಾನೂ ಕೋಣೆ ಬಿಟ್ಟು ಓಡಿ ಹೋಗಿದ್ದೆ “


ನೆನ್ನೆಯ ಸಂಚಿಕೆ ಇಲ್ಲಿದೆ: https://aralimara.com/2025/02/01/osho-457/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.