ಖಲೀಲ್ ಗಿಬ್ರಾನನ ಕತೆಗಳು#38: ಕಪ್ಪೆಗಳು

ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ

ಬೇಸಗೆಯ ಕಾಲ. ಕಪ್ಪೆ ತನ್ನ ಜೊತೆಗಾರನಿಗೆ ಹೇಳಿತು. ʻನೋಡು, ರಾತ್ರಿ ಹೊತ್ತು ನಾವು ಹಾಡುವುದರಿಂದ ಕೊಳದ ದಡದಲ್ಲಿ ಅಗೋ ಅಲ್ಲಿ ಮನೆಯಿದೆಯಲ್ಲ ಅಲ್ಲಿನ ಜನಕ್ಕೆ ನಾವು ತೊಂದರೆ ಕೊಡುತ್ತೇವೆ ಅನಿಸತ್ತೆ.ʼ
ಜೊತೆಗಾರ ಕಪ್ಪೆ, ʻಹಗಲು ಹೊತ್ತಿನಲ್ಲಿ ಕೂಡ ಅವರು ಮಾತಾಡಿ ಮೌನವನ್ನು ಕೆಡಿಸುತ್ತಾರೆ, ಅಲ್ಲವಾ?ʼ ಅಂದಿತು.
ʻನಾವು ಸ್ವಲ್ಪ ದೊಡ್ಡ ಗಂಟಲಲ್ಲಿ ತುಂಬಾ ಹಾಡು ಹಾಡುತ್ತೇವೆ, ಅದನ್ನ ಮರೀಬಾರದು ಅಲ್ಲವಾ?ʼ ಕಪ್ಪೆ ಕೇಳಿತು.
ʻಅವರೂ ಕೂಡ ಬೆಳಗಿನ ಹೊತ್ತಿನಲ್ಲಿ ಸಿಕಾಪಟ್ಟೆ ಮಾತಾಡಿ, ಚೀರಾಡತಾರೆ ಅನ್ನೋದನ್ನ ನಾವು ಮರೀಬಾರದು, ಅಲ್ಲವಾ?ʼ ಅಂದಿತು ಜೊತೆಗಾರ ಕಪ್ಪೆ.
ʻಹಗಲು ಹೊತ್ತಿನಲ್ಲಿ ವಟವಟಾ ವದರುವ ಮಂಡರಗಪ್ಪೆ ಬಗ್ಗೆ ಏನು ಹೇಳುತ್ತೀ?ʼ ಕಪ್ಪೆ ಕೇಳಿತು.
ʻರಾತ್ರಿ ಹೊತ್ತಿನಲ್ಲಿ ಸುತ್ತ ಮುತ್ತ ಎಲ್ಲಾರ ನೆಮ್ಮದಿ ಕೆಡಿಸುವ ಗೂಳಿಕಪ್ಪೆ ಇದೆಯಲ್ಲ, ಅದಕ್ಕೇನು ಹೇಳುತ್ತೀ?ʼ ಜೊತೆಗಾರ ಕಪ್ಪೆ ಕೇಳಿತು.
ʻರಾಜಕಾರಣಿ, ಪಾದ್ರಿ, ವಿಜ್ಞಾನಿ, ಕವಿಗಳೆಲ್ಲ ಈ ಕೊಳದ ಹತ್ತಿರ ಬಂದು ಲಯವಿಲ್ಲದೆ, ರಾಗ ತಾಳವಿಲ್ಲದೆ ಒಂದೇ ಸಮ ಗದ್ದಲ ಎಬ್ಬಿಸತಾರಲ್ಲ, ಅವರ ಬಗ್ಗೆ ಏನು ಹೇಳಬೇಕು?ʼ ಜೊತೆಗಾರ ಕಪ್ಪೆ ಕೇಳಿತು.
ಸ್ವಲ್ಪ ಹೊತ್ತು ಸುಮ್ಮನಿದ್ದ ಕಪ್ಪೆ, ʻನೋಡು, ಈ ಮನುಷ್ಯರಿಗಿಂತ ನಾವು ಎಷ್ಟೋ ಪಾಲು ವಾಸಿ. ರಾತ್ರಿಯ ಹೊತ್ತು ಸುಮ್ಮನೆ ಇರೋಣ. ನಮ್ಮ ಹಾಡು ನಮ್ಮ ಮನಸಿನಲ್ಲೇ ಇಟ್ಟುಕೊಳ್ಳೋಣ. ತಿಂಗಳ ಬೆಳಕು ನಮ್ಮೊಳಗೆ ರಾಗವನ್ನು ಹುಟ್ಟಿಸಿದರೂ ನಕ್ಷತ್ರಗಳ ಪ್ರಾಸ ನಮಗೆ ಹೊಲೆದರೂ ಸುಮ್ಮನಿರೋಣ. ಕೊನೆಯ ಪಕ್ಷ ಒಂದೆರಡು ದಿನ, ಬೇಡ, ಮೂರು ದಿನ ಮೌನವಾಗಿರೋಣʼ ಎಂದು ಹೇಳಿತು.
ಆಗ ಜೊತೆಗಾರ ಕಪ್ಪೆ, ʻಸರಿ, ಒಪ್ಪಿದೆ. ನೋಡೋಣ. ಮೌನವಾಗಿರೋಣ. ನಮ್ಮ ಮನಸಿನಲ್ಲಿ ಎಂಥ ಹಾಡು ಹುಟ್ಟುತ್ತೋ ನೋಡೋಣ,ʼ ಅಂದಿತು.

ಅವತ್ತು ರಾತ್ರಿ, ಮರು ದಿನ, ಮೂನೆಯ ರಾತ್ತಿ ಕೂಡ ಕಪ್ಪೆಗಳು ಸುಮ್ಮನಿದ್ದವು.
ವಿಚಿತ್ರ ಏನೆಂದರೆ ಕೊಳದ ದಡದಲ್ಲಿದ್ದ ಮನೆಯ ಬಾಯಿಬಡುಕಿ ಹೆಂಗಸು ನಾಲ್ಕನೆಯ ದಿನ ಬೆಳಗ್ಗೆಯೇ ಮನೆಯಿಂದ ಆಚೆಗೆ ಬಂದು ಗಂಡನನ್ನು ಕರೆದಳು. ʻಎರಡು ದಿನದಿಂದ ನನಗೆ ನಿದ್ದೇನೇ ಬಂದಿಲ್ಲ. ಕಪ್ಪೆಗಳ ವಟವಟ ಸದ್ದು ಕಿವಿಗೆ ಬೀಳುತಿದ್ದರೆ ನೆಮ್ಮದಿ ಇರುತ್ತಿತ್ತು. ಕಪ್ಪೆಗಳಿಗೆ ಏನೋ ಆಗಿರಬೇಕು. ಮೂರು ದಿನದಿಂದ ಕಪ್ಪೆಗಳ ಸದ್ದೇ ಇಲ್ಲ. ಏನೋ ಆಗಿರಬೇಕು. ನಿದ್ದೆ ಇಲ್ಲದೆ ನನಗೆ ಹುಚ್ಚು ಹಿಡಿಯುತ್ತಾ ಇದೆ,ʼ ಎಂದು ಕೂಗಾಡಿದಳು.

ಅವಳು ಹೇಳಿದ್ದು ಕಪ್ಪೆಗೆ ಕೇಳಿಸಿತು. ಜೊತೆಗಾರ ಕಪ್ಪೆಯತ್ತ ತಿರುಗಿ ಕಣ್ಣು ಮಿಟುಕಿಸಿತು. ʻಮೌನವಾಗಿದ್ದು ನಮಗೂ ಹುಚ್ಚು ಹಿಡೀತಿದೆ ಅಲ್ಲವಾ?ʼ ಅಂತ ಕೇಳಿತು.
ʻಹೌದು. ರಾತ್ರಿಯ ಮೌನಕ್ಕೆ ಭಾರ ಹೆಚ್ಚು. ನಾವು ಸುಮ್ಮನೆ ಇರಬೇಕಾದ ಅಗತ್ಯವೇ ಇಲ್ಲ. ನಮ್ಮ ಹಾಡು ನಾವು ಹಾಡೋಣ. ಮನುಷ್ಯರು ತಮ್ಮೊಳಗಿನ ಖಾಲಿತನ ತುಂಬಿಕೊಳ್ಳಲು ಬೇಕಾದ ಸದ್ದನ್ನು ಧಾರಾಳವಾಗಿ ಒದಗಿಸೋಣ!ʼ ಎಂದಿತು ಜೊತೆಗಾರ ಕಪ್ಪೆ.
ಅವತ್ತು ರಾತ್ರಿ ಹುಣ್ಣಿಮೆಯ ಬೆಳಕು ಮೂಡಿಸಿದ ರಾಗದಲ್ಲಿ, ನಕ್ಷತ್ರಗಳ ಪ್ರಾಸ ಬಳಸಿಕೊಂಡು ಕಪ್ಪೆಗಳು ಮನದುಂಬಿ ಹಾಡಿದವು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.