ವಿಠ್ಠಲ ಚಿಂತನೆಗಳ ‘ಅವಿಭಕ್ತ : ಅರಳಿಮರ Book rack

ಬೇಂದ್ರೆಯವರ ವಿಠ್ಠಲ ಚಿಂತನೆಯ ಮಹತ್ವದ ಕೃತಿ ‘ಅವಿಭಕ್ತ’. ಬೇಂದ್ರೆಯವರು ಮರಾಠಿಯಲ್ಲಿ ಮಾಡಿದ ಭಾಷಣಗಳ ಕನ್ನಡಾನುವಾದ ಈ ಪುಸ್ತಕದಲ್ಲಿದೆ. ಆನಂದ ಝುಂಜಡವಾಡರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕಕ್ಕೆ ಅವರೇ ಬರೆದ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ.

ವಿಠ್ಠಲ ಅನ್ನೋ ಒಂದು ದೈವಿಕ ಸಂಕೇತದ ಹಲವು ಬಗೆಯ ಪರಿಶೀಲನೆಗಳು ಈ ಎರಡೂ ವ್ಯಾಖ್ಯಾನಗಳ ತುಂಬ ತುಂಬಿಕೊಂಡಿವೆ. ಪುಣೆದ ವ್ಯಾಖ್ಯಾನವನ್ನು ಎದುರಿಟ್ಟುಕೊಂಡು, ಬೇಂದ್ರೆಯವರು ಇಲ್ಲಿ ಯಾವ ಬಗೆಯ ಚಿಂತನ ದಾರಿಯನ್ನು, ಎಷ್ಟೊಂದು ಹೊರಳುಗಳನ್ನು ಎದುರಿಸುತ್ತ ದಾಟಿದ್ದಾರೆ ಅನ್ನೋದನ್ನ ನಾನು ತುಸು ವಿವರಿಸಬೇಕು ಎಂದುಕೊಂಡಿದ್ದೇನೆ. ಪುಣೆಯ ಅವರ ವ್ಯಾಖ್ಯಾನದ ವಿಷಯ “ಸಂತ ಮಹಂತರ ಪೂರ್ಣ ಶಂಭೂ ವಿಠ್ಠಲ” ಎಂದಿದೆ. ನಾನು ಅದನ್ನು ಇನ್ನೊಂದು ರೀತಿಯಲ್ಲಿ ಓದಿಕೊಳ್ಳಬಯಸುತ್ತೇನೆ. ನಾನು ಆ ಶೀರ್ಷಿಕೆಯನ್ನು “ಸಂತ ಮಹಂತರ ಪೂರ್ಣ ಶಂಭೂ ಶ್ರೀ ವಿಠ್ಠಲ” ಎಂದು ಓದಿಕೊಳ್ಳುವಂತೆ ನನಗೆ ಈ ಇಡೀ ವ್ಯಾಖ್ಯಾನವೇ ಒತ್ತಾಯಿಸಿತು. ‘ವಿಠ್ಠಲ-ಚಿಂತನೆ’ ಹಾಗೂ “ಶ್ರೀವಿಠ್ಠಲ-ಚಿಂತನೆ” ಗಳ ನಡುವಿನ ನಾನು ಕಂಡುಕೊಂಡ ಆಲೋಚನಾ ಕ್ರಮದ ಭಿನ್ನತೆಯನ್ನು ಮೊದಲು ತಿಳಿಸುವೆ.

ವಿಠ್ಠಲ ಚಿಂತನೆ ಅನ್ನೋದು ಏನೇ ಇದ್ದರೂ ಪುರಾಣ ಹಾಗೂ ಚರಿತ್ರೆಯ ಇಮ್ಮುಖ ತಪಶೀಲುಗಳಿಂದಲೇ ನಡೆಯಬೇಕಾದ ಒಂದು ಕ್ರಿಯೆ. ಪಾರಾಯಣದ ಹಂಗಿಲ್ಲದೆ ಕೇವಲ ಅಧ್ಯಯನ ಅನ್ನುವ ವಿಭಿನ್ನ ಬೌದ್ಧಿಕ  ಶಸ್ತ್ರಕ್ರಿಯೆಯ  ಮೂಲಕ  ನಡೆಯುವ  ಸೀಳು ಕಾರ್ಯವಿದು.

ವಿಠ್ಠಲ ಚಿಂತನೆಯಲ್ಲಿ ಅದೊಂದು ಶುದ್ಧಾಂಗವಾದ ಚಾರಿತ್ರಿಕ ದಾಖಲೆಗಳ ಆಧಾರದಲ್ಲಿ ನಡೆಯುವ ಶೋಧನೆ. ಅಲ್ಲಿ ವಿಠ್ಠಲನ ಬಗೆಗೆ ಯಾವುದೇ ಭಕ್ತಿ, ಶ್ರದ್ಧೆ ಇತ್ಯಾದಿಗಳ ಅಂಟುಗುಣ ಇಲ್ಲ. ಮರಾಠಿಯಲ್ಲಿ ರಾ. ಚಿ. ಢೇರೆಯಂತಹ ಅನೇಕ ಲೇಖಕರು ಈ ಬಗೆಯ ವಿಠ್ಠಲ ಚಿಂತನೆಗಳನ್ನು ಶೋಧಿಸಿ ಪ್ರಕಟಿಸಿದ್ದಾರೆ.

ಮರಾಠಿಯ ಆದ್ಯಕವಿ ಚಕ್ರಧರರ “ಲೀಳಾ ಚರಿತ್ರವು” ಕೊಡುವ ವಿಠ್ಠಲನ ಕುರಿತಾದ ಮಾಹಿತಿಗಳಂತೂ ಶ್ರದ್ಧೆಯ ಹಿನ್ನೆಲೆಯ ಚಿಂತನೆಗೆ ಸ್ಫೋಟಕವಾಗಿ ಕೇಳಿಸುವಂತೆ ಇವೆ. ವಿಠ್ಠಲ ಎನ್ನುವವ ಒಬ್ಬ ದರೋಡೆಕೋರ, ದಾರಿಯಲ್ಲಿ ಹೋಗುವವರನ್ನೆಲ್ಲ ಪೀಡಿಸಿ ಕೊಲ್ಲುವ ಹಿಂಸ್ರಕ ಮನುಷ್ಯನಾಗಿದ್ದ. ಒಂದು ಸಲ ಆತ ಒಂದು ಇದೇ ಬಗೆಯ ಸಂಘರ್ಷದಲ್ಲಿ ಸತ್ತುಹೋದ. ಅವನ ಮಕ್ಕಳು ಅವನ ನೆನಪಿಗೆ ಒಂದು ಕಂಬವನ್ನು ನೆಟ್ಟರು. ಈ ಕಂಬದ ನೆಲೆಗಳೇ ಮುಂದೆ ವಿಠ್ಠಲನ ದೇವ ಸಂಕೇತವಾಗಿ ಬೆಳೆದವು, ಅನ್ನೋದು ಒಂದು ನೋಟವಾಗಿದೆ. ಇದಕ್ಕೆ ಪ್ರತಿಯಾಗಿ ಇನ್ನೊಂದು- ವಾರಕರಿ ಪ್ರಣೀತ ವಿದ್ವಾಂಸರ-ಹೇಳಿಕೆ ಬೇರೆ ಇದೆ. ಮೂಲತಃ ವಿಠ್ಠಲ ಅನ್ನೋವವ ಆಕಳು ಕಾಯುವ ಒಬ್ಬ ಹಳ್ಳಿಗನಾಗಿದ್ದ. ಒಂದು ದಿನ ಇವನ ಆಕಳುಗಳನ್ನು ಓಡಿಸಿಕೊಂಡು ಹೋಗಲು ಬಂದವರ ಜೊತೆ ಹೋರಾಡಿ ಆತ ಸತ್ತ. ಅವನ ಹೆಂಡತಿ, ಮಕ್ಕಳು ಅವನ ನೆನಪಿಗೆ ಒಂದು ಕಲ್ಲು ನೆಟ್ಟರು. ಅದೇ ಇಂದಿನ ವಿಠ್ಠಲ ಸಂಸ್ಕೃತಿಯ ಮೂಲ ಅನ್ನೋದು ಆ ಪಕ್ಷದ ವಾದವಾಗಿದೆ.

ಆದರೆ ಇಲ್ಲೆಲ್ಲೂ ವಿಠ್ಠಲನ ಪೌರಾಣಿಕ ತಿಳಿವುಗಳೆಂದು ಇಂದು ಚಾಲ್ತಿಯಲ್ಲಿರುವ, ಆತ ವಿಷ್ಣುವಿನ ಅವತಾರ, ಕೃಷ್ಣನ ಬಾಲರೂಪದ ಕಾಂತಿಯುಳ್ಳವ, ಶಿರಸ್ಸಿನಲ್ಲಿ ಲಿಂಗಾಕಾರವನ್ನು ಧರಿಸಿ ಹರಿಹರ ಸಾಮರಸ್ಯಕ್ಕೆ ಸಂಕೇತವಾದವ, ಈ ಯಾವ ಶ್ರದ್ಧೆಯ ಸಂಪನ್ಮೂಲಗಳ ಆವಾಹನೆಯೂ ಇಲ್ಲಿಲ್ಲ, ಈ ಬಗೆಯ ಚಿಂತನೆಯನ್ನು ನಾನು ವಿಠ್ಠಲ-ಚಿಂತನೆ ಎಂದು ಗ್ರಹಿಸಿದ್ದೇನೆ. ಈ ಬಗೆಯ ಚಿಂತನೆಗಳಲ್ಲಿ ಚರಿತ್ರೆಯ ಸತ್ಯವನ್ನು ಹುಡುಕುವ ಹಟವು ಒಮ್ಮೊಮ್ಮೆ ಸಂಶೋಧನೆ ಹಾಗೂ ತನಿಖೆ ಇವುಗಳ ನಡುವಿನ ಅಂತರವನ್ನೇ ಅಳಿಸಿಹಾಕುವ ಒಂದು ಶಾಠ್ಯವನ್ನು ಕೂಡ, ಸಂಶೋಧಕನಿಗೂ ಅರಿವಾಗದಂತೆ ಅವನ ಒಳಗೆ ತಂದುಬಿಡಬಹುದು.

ಬೇಂದ್ರೆ ಈ ಬಗೆಯ ಚಿಂತನೆಯ ಮೂಲದಿಂದ ಬಂದವರಲ್ಲ. ಅವರದು ಒಂದು ಬಗೆಯ ಅತೀಂದ್ರಿಯ ಲೋಕದ ಅನುಭವಗಳ ನೆಲೆಗಟ್ಟಿನ ಮೇಲೆ ನಡೆಯುವ ಚಿಂತನೆ. ವಿಠ್ಠಲನನ್ನು ನಮ್ಮ ಉದ್ಧಾರಕ ಶಕ್ತಿಯೆಂದು ತಿಳಿಯುವ ಬೇಂದ್ರೆ ಪ್ರಜ್ಞೆಗೆ ನಾನು “ಶ್ರೀ ವಿಠ್ಠಲ’’ ಚಿಂತನೆ ಎಂದು ಗುರುತಿಸಿದ್ದೇನೆ. ಅವರು ತಮ್ಮ ಇಲ್ಲಿನ ಎರಡೂ ವ್ಯಾಖ್ಯಾನಗಳಲ್ಲಿ ತಮ್ಮ ವ್ಯಾಖ್ಯಾನಗಳನ್ನು [ಇಂಟರ್‌ಪ್ರಿಟೇಷನ್] ಶ್ರೀ ವಿಠ್ಠಲ ಚಿಂತನೆಯ ವ್ಯಾಕರಣದ ದಾರಿಯಲ್ಲೇ ಮಾಡಿಕೊಂಡಿದ್ದಾರೆ. ಆದರೆ ಅವರ ಎದುರು ಕುಳಿತವರು ಎಲ್ಲರೂ ಇದೇ ಬಗೆಯ ಚಿಂತಕರೇನು ಆಗಿರಲಿಕ್ಕಿಲ್ಲ. ಹೀಗಾಗಿ ಬೇಂದ್ರೆಯವರು, ತಮಗೆ ವಿಠ್ಠಲನ ಕುರಿತಾದ, ಮಹಾರಾಷ್ಟçದಲ್ಲಿ ನಡೆದ, ನಡೀತಾ ಇದ್ದ ಶುದ್ಧಾಂಗವಾದ ವಿಠ್ಠಲ ಚಿಂತನೆಗಳ, ವಿಠ್ಠಲನ ಕುರಿತಾಗಿ ಆಡಿದ ಆ ಬಗೆಯ ಮಾತುಗಳ ಪರಿಚಯ ತಮಗೂ ಇದೆ ಅನ್ನೋದನ್ನ ಸೂಚಿಸಲೋ ಎಂಬAತೆ, ಒಂದು ಮಾತಿನಲ್ಲಿ ಆ ಕುರಿತು ಆಗೀಗ ಪ್ರಸ್ತಾಪವನ್ನು ಮಾಡಿ ಮತ್ತೆ ಮುಂದೆ ಹೋಗುತ್ತಾರೆ.

ಇನ್ನೂ ಮುಂದೆಹೋಗಿ ಹೇಳುವದಾದರೆ ಬೇಂದ್ರೆ, ಪಶ್ಚಿಮ ಪ್ರಣೀತ ಸ್ಕಾಲರ್ ಅಲ್ಲ. ಭಾರತೀಯ ಪೂರ್ವಮತವಾದಿಗಳಾದ ಪಂಡಿತರೂ ಅಲ್ಲ. ಅವರು ಕವಿಗಣ್ಣಿನ, ಕಾರುಣಿಕ ದೃಷ್ಟಿಯ ಪರಿಮಿತಿಗಳನ್ನು ಅರಿತೂ ಇಹ-ಪರಗಳ  ಸಮ್ಮಿಶ್ರ  ಆಡಳಿತವನ್ನು  ಒಪ್ಪುವವರು.  ಲೋಕವೆಲ್ಲವೂಸುಖವಾಗಿರಲಿ ಅನ್ನೋ ಅವರ ಈ ಬಗೆಯ ದೃಷ್ಟಿಕೋನದ ಮೂಲ ಸಮಸ್ಯೆ ಎಂದರೆ, ಅದು ಬಹಳಸಲ ಸರಾಸರಿ-ಸಜ್ಜನರಿಗೆ [ಎವರೇಜ್ ಜಂಟಲ್‌ಮನ್] ಬಹಳ ಇಂಪಾಗಿ ಕೇಳಿಸುವ ಒಂದು ವಾಕ್-ಪಾಕವಾಗಿ ಬಿಡುತ್ತದೆ. ಎಲ್ಲೋ ತೀರ ಕ್ವಚಿತ್ತಾಗಿ ಒಳಗೂ ಮೀಟಿಕೊಂಡವರೂ ಇದ್ದರೂ ಇದ್ದಾರು. ಆ ತಿಳಿವೂ ಕೂಡ ಬೇಂದ್ರೆಯವರಿಗೆ ಇದೆ.

ಹೀಗಾಗಿ  ಇಲ್ಲಿನ  ಎರಡೂ  ವ್ಯಾಖ್ಯಾನಗಳ  ವಿಠ್ಠಲ  ಚಿಂತನೆಯ ಸ್ವರೂಪವು ಶ್ರೀ ವಿಠ್ಠಲ ಚಿಂತನೆಯ ಸ್ವರೂಪದ್ದಾಗಿದೆ. ಅದಕ್ಕಾಗಿ ಬೇಂದ್ರೆಯವರು ವಿಠ್ಠಲನ ಸುತ್ತ ಮರಾಠಿಯಲ್ಲಿ ಹಬ್ಬಿದ ಅಭೂತಪೂರ್ವ ವೈಭವದ ಪಠ್ಯಗಳನ್ನು ಬಳಸಿದ್ದಾರೆ. ಜ್ಞಾನೇಶ್ವರಿ, ಅನುಭವಾಮೃತ, ಸಂತರ ಅಭಂಗಗಳು, ಭಗವದ್ಗೀತೆಯ ಉದ್ಧರಣೆಗಳು, ವೇದೋಕ್ತ ಮಂತ್ರಗಳು, ಇವುಗಳಲ್ಲದೆ ಮರಾಠಿಯ ಅಭಿಜಾತ ಹಾಗೂ ದೇಸಿ ಮೂಲದ ಅನೇಕ ಚಿಂತಕರ ಕೃತಿಗಳನ್ನು ಇಲ್ಲಿ ಸಮೃದ್ಧವಾಗಿ ಬಳಸಿದ್ದಾರೆ. ಶಿವಕಲ್ಯಾಣನಾಥರ ‘’ನಿತ್ಯಾನಂದ ದೀಪಿಕಾ’’, ನಿರಂಜನ ರಘುನಾಥರ “ಪದಬೋಧಿನಿ”, ಗುಲಾಬರಾವ ಮಹಾರಾಜರ “ಪಾಂಡುರAಗ ಚೌಸಷ್ಟಿ” ಇತ್ಯಾದಿ ಹತ್ತು ಹಲವು ಕೃತಿಗಳನ್ನು ಅವರು ದಾಖಲಿಸುತ್ತಾರೆ. ನಿರಂಜನ ರಘುನಾಥರ ಅನುಭವಾಮೃತದ ಬಗೆಗಿನ ಕೃತಿ “ಪದ ಬೋಧಿನಿ” ಇದರ ನೆರಳಲ್ಲೇ ತಾವು ಮೂರೂ ದಿನಗಳ ವ್ಯಾಖ್ಯಾನವನ್ನು ವಿಸ್ತರಿಸಿಕೊಳ್ಳುವುದಾಗಿಯೂ ಹೇಳುತ್ತಾರೆ.  ಬಹುಶಃ  ಇವೆಲ್ಲವೂ  ಬೇಂದ್ರೆಯವರ  ಅಭಿನಿವೇಶದ, ಶ್ರೀ ವಿಠ್ಠಲ-ಚಿಂತನೆಯ ದಿಕ್ಕಿನಲ್ಲಿಯೇ ಚಾಚಿಕೊಂಡಿರುವ ಕೃತಿಗಳೇ ಆಗಿರಬೇಕು. ಈ ವ್ಯಾಖ್ಯಾನಗಳನ್ನು ಕನ್ನಡಲ್ಲಿ ಓದಿಕೊಳ್ಳುವಾಗ ಇವುಗಳ ದಾಖಲಿತ ವಿಷಯದ ಸಾರವನ್ನು, ಬೇಂದ್ರೆಯವರು ವಿವರಿಸಿದಷ್ಟು, ವಿವರಿಸಿದ ಬಗೆಯಲ್ಲಿ ನಾವು ತಿಳಿಯಬಹುದು.


ಇದು ಪ್ರಕೃತಿ ಪ್ರಕಾಶನದ ಪ್ರಕಟನೆ. ಬೆಲೆ: ರೂ.225/- । ಪ್ರತಿಗಳಿಗಾಗಿ ಸಂಪರ್ಕಿಸಿ: 91139 02940

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.