ನಾವೆಲ್ಲರೂ ಅಷ್ಟೇ. ಸೊನ್ನೆಯಿಂದ ಒಂದೋ ಸದ್ಗುಣದ ಕಡೆ, ಇಲ್ಲಾ ದುರ್ಗುಣದ ಕಡೆ ನಡೀತಾ ಇರೋರು. ನಾವು ಮನುಷ್ಯರು ಉಳಿದ ಜಡ / ಚೇತನಗಳಂತಲ್ಲ. ಎರಡು ಕ್ಯಟಗರಿಯಲ್ಲಿ ಯಾವುದನ್ನು ಅಳವಡಿಸಿಕೊಳ್ಬೇಕು ಅಂತ ಆಯ್ದುಕೊಳ್ಳುವ ಅವಕಾಶ ನಮಗಿದೆ… । ಚೇತನಾ ತೀರ್ಥಹಳ್ಳಿ
ಇದೊಂದು ಈಸೋಪನ ಕತೆ.
ಕಾಡಲ್ಲೊಂದು ಚಿಕ್ಕ ಕೊಳ ಇರತ್ತೆ. ಆ ಚಿಕ್ ಕೊಳ, ಚೇಳು ಮತ್ತೆ ಕಪ್ಪೆ ಥರದವಕ್ಕೆ ದೊಡ್ದೇ. ಒಂದಿನ ಒಂದ್ ಚೇಳಿಗೆ ಕೊಳದ ಆಚೆ ಬದಿಗೆ ಹೋಗ್ಬೇಕಾಗಿರತ್ತೆ. ಏನ್ ಮಾಡೋದು ಅಂತ ಯೋಚ್ನೆ ಮಾಡ್ತಿರುವಾಗ ಅಲ್ಲೊಂದ್ ದೊಡ್ಡ ಕಪ್ಪೆ ಬರತ್ತೆ.
“ಕಪ್ಪೆ ಅಣ್ಣ, ನಂಗ್ ಸ್ವಲ್ಪ ಆಚೆ ದಡಕ್ಕೆ ಡ್ರಾಪ್ ಕೊಡ್ತೀಯಾ?” ಅಂತ ಕೇಳುತ್ತೆ ಚೇಳು.
“ನಾನೇನೋ ಕೊಡ್ತೀನಿ, ಆದ್ರೆ ನೀನ್ ನಂಗೆ ಕುಟುಕಲ್ಲ ಅಂತ ಏನ್ ಗ್ಯಾರಂಟಿ?” ಅಂತ ಕೇಳತ್ತೆ ಕಪ್ಪೆ.
“ನಾನ್ ನಿಂಗೆ ಕಚ್ಚಿದ್ರೆ ನಿನ್ ಜೊತೆ ನಾನೂ ಮುಳುಗೋಗ್ತೀನಲ್ಲ… ನಂಗೇನ್ ಅಷ್ಟೂ ಬುದ್ಧಿ ಇಲ್ಲ ಅಂದ್ಕೊಂಡ್ಯಾ?” ಅಂತ ನಗುತ್ತೆ ಚೇಳು.
ಸರಿ ಅಂತ ಕಪ್ಪೆ ಚೇಳನ್ನ ಬೆನ್ನ ಮೇಲೆ ಹತ್ತಿಸ್ಕೊಂಡು ಉದ್ದುದ್ದನೆ ಹಿಂಗಾಲನ್ನ ತಳ್ಳಿ ತಳ್ಳಿ ಈಜ್ತಾ ಹೋಗ್ತಿರುವಾಗ…
ಚಿಂಗ್ ಅಂತ ಏನೋ ಚುಚ್ಚಿದಂಗಾಗಿ ಇಡೀ ಮೈ ಜುಮುಗುಡುತ್ತೆ. ಏನಪ್ಪಾ ನೋಡಿದ್ರೆ ಚೇಳು ಕುಟುಕೇ ಬಿಟ್ಟಿದೆ! ಕಾಲರ್ಧ ದಾರಿ ಹೋಗೋವರೆಗೂ ಸುಮ್ನಿದ್ದ ಚೇಳಿಗೆ ಇನ್ನು ತಡ್ಕೊಳಕ್ಕಾಗ್ದೆ ಕುಟುಕಿಬಿಟ್ಟಿದೆ!
ಚೇಳಿನ ನಂಜು ಕಪ್ಪೆ ಮೈಯೊಳಗೆಲ್ಲ ಸೇರಿ ಅದ್ರ ಕಾಲು ಸೋತು ಇನ್ನು ಈಜಕ್ಕಾಗ್ದೆ ಮುಳುಗಕ್ಕೆ ಶುರುವಾಗುತ್ತೆ. ಅದ್ರಲ್ಲೂ ಇರೋಬರೋ ಉಸಿರು ಒಗ್ಗೂಡಿಸ್ಕೊಂಡು ಕೇಳತ್ತೆ, “ಯಾ…ಕೆ? ಯಾಕ್ ಹೀ…ಗೆ ಮಾಡ್ದೆ?”
ಕಪ್ಪೆ ಜೊತೆಗೇ ನೀರಲ್ಲಿ ಮುಳುಗ್ತಿದ್ದ ಚೇಳು ಹೇಳುತ್ತೆ, “ನನ್ನನ್ ಕ್ಷಮಿಸ್ಬಿಡು… ಅದು ನನ್ ಗುಣ”
~
ಹುಟ್ಟು ಗುಣ ಸುಟ್ರೂ ಹೋಗಲ್ಲ ಅನ್ನೋ ಗಾದೆಮಾತು ಸುಮ್ನೆ ಬಂದಿದ್ದಲ್ಲ! ಆದ್ರೆ ಅದನ್ನ ನೆಗೆಟಿವ್ ಆಗೇ ಬಳಸ್ಬೇಕು ಅಂತಿಲ್ಲ. ಗುಣ ಅನ್ನೋದು ಯಾವ್ದೇ ಜಡ / ಚೇತನವನ್ನ ಆಯಾ ಜಡ / ಚೇತನವಾಗಿಸೋ ಅಂಶ.
ಹರಿಯೋದು ನದಿಯ ಗುಣ. ಅದು ಹರಿಯೋದು ನಿಂತಕೂಡ್ಲೆ ಕೊಚ್ಚೆಗುಂಡಿಯಾಗುತ್ತೆ. ಆಮೇಲೆ ಅದನ್ನ ಯಾರೂ ನದಿ ಅಂತ ಕರೆಯೋದಿಲ್ಲ. ಇಲ್ಲಿ ಹೇಳ್ತಿರೋದು ಕೊಳಕು ನದಿಗಳ ವಿಷಯ ಅಲ್ಲ. ಕೊಳಕಾದ್ರೂ ಹರಿಯುತ್ತಿರುವಷ್ಟೂ ದಿನವೂ ಅವು ನದಿಗಳೇ. ಹರಿಯೋದು ನಿಂತು ಕೊಳಕಾದ್ರೆ ಅವು ಕೊಚೆಗುಂಡಿಗಳಷ್ಟೇ. ಅಥವಾ ನೀರು ಹೆಪ್ಪುಗಟ್ಟಿ ಹರಿವು ನಿಲ್ಲಿಸಿದ ಕೂಡ್ಲೇ ಮಂಜುಗಡ್ಡೆ ಅನಿಸಿಕೊಳ್ಳುತ್ತೆ ತಾನೆ? ಹೆಪ್ಪುಗಟ್ಟಿದ ನೀರನ್ನ ಯಾರು ನೀರು ಅಂತಾರೆ? ಅದು ತನ್ನ ದ್ರವಿಸುವ ಗುಣ ಕಳೆದುಕೊಂಡ ಕ್ಷಣಾನೇ ಘನವಾಗಿಬಿಡುತ್ತೆ. ಬೇರೇನೇ ವಸ್ತು ಆಗುತ್ತೆ.
ಆ ಚೇಳೂ ಅಷ್ಟೇ. ಈ ಕಪ್ಪೆ – ಚೇಳಿನ ಕತೆಯನ್ನ ಯಾರಾದ್ರೂ ಕೃತಘ್ನ ಚೇಳು ಅಂತ ಕತೆ ಹೇಳಿಯಾರು. ಅದು ಸರಿಯಲ್ಲ. ಆ ಚೇಳಿನ ಗುಣವೇ ಕುಟುಕೋದು. ಕುಟುಕದಿದ್ರೆ ಅದಕ್ಕೆ ತನ್ನ ರಕ್ಷಣೆ ಮಾಡ್ಕೊಳೋಕೆ ಆಗೋದಿಲ್ಲ. ಕುಟಕದಿದ್ರೆ ಅದಕ್ಕೆ ಹುಳು ಹುಪ್ಪಟೆ ತಿನ್ನೋದಕ್ಕೆ ಸಿಗೋದಿಲ್ಲ. ಕುಟುಕದಿದ್ರೆ ಅದು ಬದುಕೋಕೆ ಸಾಧ್ಯಾನೇ ಇಲ್ಲ. ಚೇಳನ್ನ ಚೇಳಾಗಿಸಿರೋದೇ ಅದರ ಕೊಂಡಿ, ಆ ಕೊಂಡಿಯ ಕುಟುಕುತನ.
~
ಒಂದು ಜೆನ್ ಕತೆ ಇದೆ.
ಒಂದೂರಲ್ಲಿ ಇಬ್ರು ಜೆನ್ ಬಿಕ್ಖುಗಳಿರ್ತಾರೆ. ಅವರಿಬ್ರೂ ಒಂದ್ ಸಲ ನದಿ ದಾಟ್ಕೊಂಡು ಈಚೆ ದಡಕ್ಕೆ ಬರ್ತಿರುವಾಗ ಯಥಾಪ್ರಕಾರ ಒಂದ್ ಚೇಳು ಬಂಡೆ ಕಚ್ಕೊಳಕ್ಕೆ ಟ್ರೈ ಮಾಡ್ತಾ, ಅದು ಸಾಧ್ಯವಾಗ್ದೆ ನೀರಲ್ಲಿ ಮುಳುಗ್ತಾ, ಜೀವ ಉಳಿಸ್ಕೊಳೋಖೆ ಪರದಾಡ್ತಾ ಇರತ್ತೆ.
ಆ ಚೇಳಿನ ಕಷ್ಟ ಕಂಡು ಇಬ್ರಲ್ಲೊಬ್ಬ ಬಿಕ್ಖು ಅದನ್ನ ಮೆಲ್ಲನೆ ಎತ್ತಿ ಕೈಲಿ ಹಿಡ್ಕೋತಾನೆ. ದಡ ಮುಟ್ಟಿದಮೇಲೆ ಅದನ್ನ ಕೆಳಗೆ ಬಿಡ್ತಾನೆ. ಕೆಳಗೆ ಇಳಿದಕೂಡ್ಲೆ ಆ ಚೇಳು ಅವನ ಕಾಲಿಗೆ ಕುಟುಕಿ ಓಡೋಗುತ್ತೆ.
ಅದನ್ನ ನೋಡಿ ಮತ್ತೊಬ್ಬ ಬಿಕ್ಖು, “ನೋಡಿದ್ಯಾ, ನೀನೇನೋ ಪಾಪ ಅಂತ ಅದನ್ನ ಎತ್ಕೊಂಡ್ ಬಂದೆ. ಅದು ನಿನ್ಗೇ ಕುಟುಕಿಬಿಡ್ತು. ಅದಕ್ಕೇ ಹೇಳೋದು, ಅಪಾತ್ರರಿಗೆ ಸಹಾಯ ಮಾಡಬಾರ್ದು ಅಂತ” ಅಂದ.
ಆಗ ಮೊದಲನೆಯವ, “ಕಷ್ಟದಲ್ಲಿರೋ ಜೀವಿನ ಕಾಪಾಡೋದು ಮನುಷ್ಯ ಗುಣ. ಒಬ್ಬ ಮನುಷ್ಯನಾಗಿ ನಾನು ಅದನ್ನೇ ಮಾಡಿದೆ. ಕುಟುಕೋದು ಚೇಳಿನ ಗುಣ. ಅದೂ ಅದನ್ನೇ ಮಾಡ್ತು. ಇದ್ರಲ್ಲಿ ಅದರ ತಪ್ಪೇನೂ ಇಲ್ಲ” ಅಂದ.
~
ಸೃಷ್ಟಿಯಲ್ಲಿ ಪ್ರತಿಯೊಂದು ಜಡ / ಚೇತನಗಳೂ ತಮ್ಮ ಗುಣಕ್ಕೆ ಅನುಗುಣವಾಗೇ ಇರ್ತವೆ. ತಮ್ಮ ಸಹಜತೆಯಲ್ಲೇ ಇರ್ತವೆ. ಆದ್ರೆ ಯಾವುದನ್ನ ಮಾನವ ಗುಣ ಅಂತ ಕರೆಯಲಾಗಿದ್ಯೋ ಅದಕ್ಕೆ ವ್ಯತಿರಿಕ್ತವಾಗಿ ನಡ್ಕೊಳೋದು ಮನುಷ್ಯರು ಮಾತ್ರ.
ಉದಾಹರಣೆಗೆ: ಎಲ್ಲಾ ಮನುಷ್ಯರೂ ಸಾಯ್ತಾ ಇರೋ ಚೇಳನ್ನ ಎತ್ಕೊಂಡು ಬಂದು ಬಿಡೋ ಗೋಜಿಗೆ ಹೋಗೋದಿಲ್ಲ. ಬಿಕ್ಖುವೇನೋ ಅದನ್ನ ಮಾನವ ಗುಣ ಅಂದುಬಿಟ್ಟ. ಆದ್ರೆ, ಅವನ ಜೊತೆಯಲ್ಲಿರೋ ಸಹಮಾನವನಿಗೇ ಆ ಚೇಳಿಗೆ ಸಹಾಯ ಮಾಡ್ಬೇಕು ಅನಿಸಿರ್ಲಿಲ್ಲ. ಅಥವಾ, ಯಾಕಾದ್ರೂ ಅದಕ್ಕೆ ಸಹಾಯ ಮಾಡ್ಬೇಕಿತ್ತು ಅಂದ್ಕೊಳ್ಳೋ ಮೂಲಕ ಭಿನ್ನ ಗುಣ ತೋರಿಸ್ದ. ಹಾಗಾದ್ರೆ ಅವ್ನನ್ನ ಮನುಷ್ಯ ಅಲ್ಲ ಅನ್ನೋಕಾಗುತ್ತಾ?
ಅದು ಅಷ್ಟು ಸರಳ ಅಲ್ಲ. ನಾವು ಆಲೋಚಿಸಬಲ್ಲವರೂ, ಭಾವನೆಗಳನ್ನು ಅನುಭವಿಸಿ – ತೋರಿಸಬಲ್ಲವರೂ ಆಗಿರೋದ್ರಿಂದ ನಮಗೆ ಸದ್ಗುಣ ಮತ್ತು ದುರ್ಗುಣ ಎಂಬ ಎರಡು ಕ್ಯಟಗರಿ ಒದಗಿಸಲಾಗಿದೆ. ಆ ಬಿಕ್ಖುಗಳಲ್ಲಿ ಒಬ್ಬ ಮನುಷ್ಯರ ಸದ್ಗುಣ ಬಿಂಬಿಸಿದ್ರೆ, ಮತ್ತೊಬ್ಬ ಈ ಎರಡು ಕ್ಯಟಗರಿಗೂ ಸೇರದವ. ಆತ ಇನ್ನೂ ಸೊನ್ನೆಯಿಂದ ಸದ್ಗುಣಿಯಾಗುವ ದಾರಿಯಲ್ಲಿ ನಡೆಯುತ್ತಿರುವವ.
ನಾವೆಲ್ಲರೂ ಅಷ್ಟೇ. ಸೊನ್ನೆಯಿಂದ ಒಂದೋ ಸದ್ಗುಣದ ಕಡೆ, ಇಲ್ಲಾ ದುರ್ಗುಣದ ಕಡೆ ನಡೀತಾ ಇರೋರು. ನಾವು ಮನುಷ್ಯರು ಉಳಿದ ಜಡ / ಚೇತನಗಳಂತಲ್ಲ. ಎರಡು ಕ್ಯಟಗರಿಯಲ್ಲಿ ಯಾವುದನ್ನು ಅಳವಡಿಸಿಕೊಳ್ಬೇಕು ಅಂತ ಆಯ್ದುಕೊಳ್ಳುವ ಅವಕಾಶ ನಮಗಿದೆ.
ನಮ್ಮಲ್ಲಿ ನದಿ ದಾಟಿಸಿದ ದೋಣಿಯವನ ತಲೆ ಒಡೆದು ಹಣ ಹೊತ್ತೊಯ್ಯುವ ಕೇಡಿಗರಿದ್ದಾರೆ. ಅವರನ್ನು ಚೇಳಿನಂತೆ ಅನ್ನಲಾಗದು. ಅದು ಅವರಿಗೆ ಅನಿವಾರ್ಯ ಅಲ್ಲದ ಗುಣ. ಅದು ಮನುಷ್ಯರಿಗೆ ಸಹಜವಲ್ಲದ ಗುಣ. ಚೇಳಿನ ಹಾಗಲ್ಲದೆ, ಕಳ್ಳತನ ಮಾಡದೆಯೂ ಬದುಕಬಹುದಾದ ಸಾಧ್ಯತೆ ಅವರ ಪಾಲಿಗಿದೆ. ಆ ಕಳ್ಳರ ಗುಣ, ಮನುಷ್ಯರ ದುರ್ಗುಣ. ದುರ್ಗುಣವೂ ಮನುಷ್ಯರ ಗುಣವೇ ಆದರೂ ಅದು ಮನುಷ್ಯರ ಅಸ್ತಿತ್ವಕ್ಕೆ ಅನಿವಾರ್ಯ ಅಲ್ಲದ ಗುಣ. ಮನುಷ್ಯರ ಅಸ್ಮಿತೆಯನ್ನು ದುರ್ಗುಣದಿಂದ ಡಿಫೈನ್ ಮಾಡಲಾಗದು. ಮನುಷ್ಯತ್ವದ ವ್ಯಾಖ್ಯಾನ ಇರುವುದು ಪ್ರೀತಿಯಲ್ಲಿ, ಸಹನೆಯಲ್ಲಿ, ಶಾಂತಿಯಲ್ಲಿ, ತ್ಯಾಗದಲ್ಲಿ ಮತ್ತು ಸಹಜೀವನದಲ್ಲಿ.
ನಾವು ಕೂಗಾಡುತ್ತೇವೆ, ಬೈಯುತ್ತೇವೆ, ಕೈ ಎತ್ತುತ್ತೇವೆ. ಆಮೇಲೆ ಯಾವಾಗಲೋ “ಅಯ್ಯೋ ಅದು ನನ್ನ ಗುಣ” ಅಂದು ತೇಪೆ ಹಚ್ಚಲಾಗದು. ನಮ್ಮ ಆಟಾಟೋಪಕ್ಕೆ ಗುರಿಯಾದವರು ನಮ್ಮನ್ನು ಕ್ಷಮಿಸಬಹುದು. ಅದು ಅವರ ಸದ್ಗುಣ. ಮನುಷ್ಯತ್ವವನ್ನು ಸಹನೀಯವೂ ಸುಂದರವೂ ಆಗಿಸಲು ನಾವೂ ಅಂಥ ಸದ್ಗುಣಿಗಳೇ ಆಗಬೇಕು.
ಎಲ್ಲ ಸಲವೂ ನಮಗೆ ಚೇಳಿನಂತೆ ಎಕ್ಸ್’ಕ್ಯೂಸ್ ದೊರೆಯಲಾರದು. ನಮ್ಮ ದುರ್ಗುಣಕ್ಕೆ ಶಿಕ್ಷೆಗಳೂ ಇವೆ ಅನ್ನೋದನ್ನು ಮರೆಯಬಾರದು!

