ಸಹಜತೆ, ಸ್ವಾಭಾವಿಕತೆ ( Spontaneity): ಓಶೋ 365 Day#19

ನೀವು ಏನೇ ಮಾಡಿದರೂ ಅದರಲ್ಲಿ ಪೂರ್ಣವಾಗಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ನಿಮಗೆ ವಾಕಿಂಗ್ ಮಾಡುವುದು ಖುಶಿ ಎನಿಸಿದರೆ ಒಳ್ಳೆಯದು, ಹಾಗೇ ಮಾಡಿ. ಆದರೆ ಯಾವ ಕ್ಷಣದಲ್ಲಿಯಾದರೂ ನಿಮಗೆ ವಾಕ್ ಮಾಡುವ ಇಚ್ಛೆ ಇಲ್ಲದೇ ಹೋದರೆ, ತಕ್ಷಣ ವಾಕ್ ಮಾಡುವುದನ್ನು ನಿಲ್ಲಿಸಿಬಿಡಿ ; ಒಂದೇ ಒಂದು ಹೆಜ್ಜೆಯನ್ನು ನಿಮ್ಮ ಇಚ್ಛೆಗೆ ವಿರುದ್ಧವಾಗಿ ಮುಂದೆ ಇಡಬೇಡಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

    ನಿಮ್ಮ ಬದುಕಿನಲ್ಲಿ ಏನೇ ಸಂಭವಿಸಿದರೂ ಅದನ್ನು ಸ್ವೀಕರಿಸಿ, ಆನಂದಿಸಿ ; ಯಾವುದಕ್ಕೂ ಒತ್ತಾಯ ಮಾಡಬೇಡಿ, ಯಾವುದನ್ನೂ ನಿಮ್ಮ ಮೇಲೆ ಹೇರಿಕೊಳ್ಳಬೇಡಿ. ನಿಮಗೆ ಮಾತನಾಡಬೇಕೆನಿಸಿದರೆ ಮಾತನಾಡಿ. ನಿಮಗೆ ಸುಮ್ಮನಿರಬೇಕೆನಿಸಿದರೆ ಮೌನವಾಗಿ ಇದ್ದುಬಿಡಿ, ನಿಮ್ಮ ಭಾವನೆಗಳ ಮಾತು ಕೇಳಿ. ಯಾವುದನ್ನೂ ನಿಮ್ಮ ಮೇಲೆ ಹೇರಿಕೊಳ್ಳಬೇಡಿ, ಒಂದೇ ಒಂದು ಕ್ಷಣ ಕೂಡ ಒತ್ತಡವನ್ನು ಅನುಭವಿಸಬೇಡಿ. ಏಕೆಂದರೆ, ನೀವು ಒತ್ತಡವನ್ನು ಅನುಭವಿಸುತ್ತಿದ್ದೀರಾದರೆ, ನೀವು ಎರಡಾಗಿ ಒಡೆದು ಹೋಗಿದ್ದೀರಿ ಮತ್ತು ಈ ವಿಭಜನೆ ಸಮಸ್ಯೆಯೊಂದನ್ನು ಹುಟ್ಟುಹಾಕಿದೆ. ಆಗ ನಿಮ್ಮ ಇಡೀ ಬದುಕು ವಿಭಜಿತವಾಗಿದೆ.

    ಇಡೀ ಮಾನವತೆ ಬಹುತೇಕ ದ್ವಂದ್ವ ವ್ಯಕ್ತಿತ್ವದ ಕಾಯಿಲೆಯಿಂದ ( schizophrenic) ಬಳಲುತ್ತಿದೆ. ಏಕೆಂದರೆ ಒತ್ತಾಯ ಹೇರುವುದನ್ನು, ಹೊರುವುದನ್ನೂ ನಮಗೆ ಮೊದಲಿನಿಂದ ಹೇಳಿಕೊಡಲಾಗಿದೆ. ಆಗ ನಗಬೇಕು ಎಂದು ಬಯಸುವ ನಿಮ್ಮ ಭಾಗ ಮತ್ತು ನೀವು ನಗುವುದನ್ನು ತಡೆಯಬಯಸುತ್ತಿರುವ ನಿಮ್ಮ ಇನ್ನೊಂದು ಭಾಗ ಎರಡೂ ಸೆಪರೇಟ್ ಆಗುತ್ತವೆ, ಆಗ ನೀವು ಡಿವೈಡ್ ಆಗುತ್ತೀರಿ. ಆಗ ನೀವು ನಿಮ್ಮೊಳಗೆ ಪ್ರಬಲ ಮತ್ತು ದುರ್ಬಲ ಭಾಗಗಳನ್ನು ಹುಟ್ಟುಹಾಕುತ್ತೀರಿ, ಇದು ದ್ವಂದ್ವ. ಈ ಬಿಕ್ಕಟ್ಟು ಸೃಷ್ಟಿ ಮಾಡುವ ಬಿರುಕು ಮುಂದೆ ದೊಡ್ಡದಾಗುತ್ತ ಹೋಗುತ್ತದೆ. ಈಗ ನಮ್ಮ ಮುಂದೆ ಇರುವ ಸವಾಲು ಈ ಬಿರುಕನ್ನು ಹೇಗೆ ಮತ್ತೆ ಕೂಡಿಸಿ ಒಂದು ಮಾಡುವುದು.

    ಝೆನ್ ಲ್ಲಿ ಬಹಳ ಸುಂದರವಾದ ಹೇಳಿಕೆಯೊಂದಿದೆ : Sitting, Just sit. Walking just walk. ಹೀಗೆ ಮಾಡುವುದನ್ನು ಬಿಟ್ಟು ಕೊಂಚವೂ ಅಲುಗಾಡಬೇಡಿ.

    ಮಾಸ್ಟರ್ ಸೆಯೂಂಗ್ ಸಾನ್ ತನ್ನ ಶಿಷ್ಯರಿಗೆ ಪಾಠ ಮಾಡುತ್ತಿದ್ದ.

    ಊಟ ಮಾಡುವಾಗ ಬರೀ ಊಟ ಮಾಡಬೇಕು.
    ಪತ್ರಿಕೆ ಓದುವಾಗ ಬರೀ ಪತ್ರಿಕೆ ಓದಬೇಕು.
    ಮಾಡುತ್ತಿರುವ ಕೆಲಸವನ್ನು ಬಿಟ್ಟು ಬೇರೇನನ್ನೂ ಮಾಡಬಾರದು.

    ಒಂದು ದಿನ ಶಿಷ್ಯನೊಬ್ಬ, ಮಾಸ್ಟರ್ ಪತ್ರಿಕೆ ಓದುತ್ತಾ ಊಟ ಮಾಡುತ್ತಿರುವುದನ್ನು ನೋಡಿದ.

    ಮಾಸ್ಟರ್, ನೀವು ಈಗ ಮಾಡುತ್ತಿರುವುದು, ನೀವು ಹೇಳಿಕೊಟ್ಟ ಪಾಠಕ್ಕೆ ವಿರುದ್ಧವಾಗಿದೆಯಲ್ಲವೆ? ಆಶ್ಚರ್ಯಚಕಿತನಾಗಿ ಕೇಳಿದ.

    ಸೆಯೂಂಗ್ ಸಾನ್ ಉತ್ತರಿಸಿದ,

    ಪತ್ರಿಕೆ ಓದುತ್ತಾ ಊಟಮಾಡುವಾಗ, ಕೇವಲ ಪತ್ರಿಕೆ ಓದುತ್ತಾ ಊಟಮಾಡಬೇಕು.


    ನೆನ್ನೆಯ ಕಂತು ಇಲ್ಲಿದೆ:https://aralimara.com/2025/02/05/osho-461/

    Unknown's avatar

    About ಅರಳಿ ಮರ

    ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ