ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಬಹಳ ಹಿಂದಿನ ಕಾಲದಲ್ಲಿ ಒಬ್ಬ ಮಹಾನ್ ರಾಜನಿದ್ದ. ಮಹಾನ್ ವಿವೇಕಿ. ತನ್ನ ಪ್ರಜೆಗಳು ಪಾಲಿಸಬೇಕಾದ ಕಾನೂನು ರೂಪಿಸಬೇಕು ಅಂದುಕೊಂಡ.
ರಾಜ್ಯದಲ್ಲಿದ್ದ ಒಂದು ಸಾವಿರ ಕುಲಗಳ ಒಂದು ಸಾವಿರ ವಿವೇಕಿಗಳನ್ನು ರಾಜಧಾನಿಗೆ ಕರೆಸಿ, ʻಜನ ಪಾಲಿಸಬೇಕಾದ ಕಾನೂನು ತಯಾರಿಸಿ, ಅದನ್ನು ಜಾರಿ ಮಾಡುತ್ತೇನೆ,ʼ ಅಂದ.
ಎಲ್ಲರೂ ಸೇರಿ ಒಂದು ಸಾವಿರ ಕಾನೂನು ಬರೆದು ರಾಜನ ಮುಂದಿಟ್ಟರು. ʻಅಯ್ಯೋ, ನನ್ನ ರಾಜ್ಯದಲ್ಲಿ ಒಂದು ಸಾವಿರ ಬಗೆಯ ಅಪರಾಧಗಳಿವೆ, ಗೊತ್ತೇ ಇರಲಿಲ್ಲ ನನಗೆʼ ಎಂದು ಅವನ ಮನಸ್ಸು ಮರುಗಿತು.
ಕರಣಿಕನನ್ನು ಕರೆಸಿದ. ಮುಖದ ತುಂಬ ನಗುವಿಟ್ಟುಕೊಂಡು ತಾನೇ ಕಾನೂನುಗಳನ್ನು ಬರೆಸಿದ. ಅವು ಎಲ್ಲಾ ಸೇರಿ ಏಳು ಮಾತ್ರ ಇದ್ದವು.
ಒಂದು ಸಾವಿರ ವಿವೇಕಿಗಳು ಸಿಟ್ಟುಗೊಂಡು ರಾಜಧಾನಿಯನ್ನು ಬಿಟ್ಟು ತಮ್ಮ ತಮ್ಮ ಕುಲಗಳು ಇದ್ದಲ್ಲಿಗೆ ಹೋದರು. ಹೋಗುವಾಗ ತಾವು ಬರೆದಿದ್ದ ಕಾನೂನು ತೆಗೆದುಕೊಂಡು ಹೋದರು. ಎಲ್ಲ ಕುಲಗಳೂ ಈ ವಿವೇಕಿಗಳು ಬರೆದ ಸಾವಿರ ಕಾನೂನು ಪಾಲಿಸಲು ಶುರು ಮಾಡಿದರು.
ಹಾಗಾಗಿ ನಮ್ಮ ಮಹಾನ್ ದೇಶದಲ್ಲಿ ಸಾವಿರ ಕಾನೂನು ಇವೆ. ಹಾಗಾಗಿ ನಮ್ಮ ದೇಶದಲ್ಲಿ ಸಾವಿರ ಸೆರೆಮನೆಗಳಿವೆ.ಕಾನೂನು ಮುರಿದವರೆಂದು ಒಂದೊಂದು ಸೆರೆಮನೆಯಲ್ಲೂ ಜನರನ್ನು ತುಂಬಿಸಿ ಬಂಧಿಸಿದ್ದೇವೆ.
ನಮ್ಮದು ಮಹಾನ್ ದೇಶ. ಇಲ್ಲಿನ ಜನ ಮಾತ್ರ ಸಾವಿರ ಜನ ರೂಪಿಸಿದ ಕಾನೂನು ರೂಪಿಸಿದ ಕಾನೂನು ಪಾಲಿಸುತ್ತಾ ಹೀಗಾಗಿದ್ದಾರೆ, ಒಬ್ಬನೇ ಒಬ್ಬ ವಿವೇಕಿ ರಾಜ ಕಣ್ಮರೆಯಾಗಿದ್ದಾನೆ.

