ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಅವಳನ್ನು ನನ್ನ ಗೆಳೆಯನಿಗೆ ತೋರುತ್ತಾ ʻಅಗೋ ಅವನ ತೋಳಿನ ಮೇಲೆ ಒರಗಿದ್ದಾಳಲ್ಲಾ, ಅವಳನ್ನು ನೋಡು. ನಿನ್ನೆ ಅವಳು ಹೀಗೇ ನನ್ನ ತೋಳಿಗೆ ಒರಗಿದ್ದಳು,ʼ ಅಂದೆ.
ʻನಾಳೆ ನನ್ನ ತೋಳಿನ ಮೇಲೆ ಒರಗುತ್ತಾಳೆ,ʼ ಅಂದ ಗೆಳೆ
ʻಅವನ ಪಕ್ಕದಲ್ಲಿ ಒತ್ತಿಕೊಂಡು ಕೂತಿದಾಳೆ ನೋಡು. ನಿನ್ನೆ ನನ್ನ ಜೊತೆ ಹಾಗೇ ಕೂತಿದ್ದಳು,ʼ ಅಂದೆ.
ʻನಾಳೆ ಅದೇ ಥರ ನನ್ನ ಜೊತೆ ಕೂರುತ್ತಾಳೆ,ʼ ಅಂದ ಗೆಳೆಯ.
ʻನೋಡು, ನೋಡು, ಅವನ ಬಟ್ಟಲಿನಿಂದ ವೈನ್ ಹೀರುತ್ತಿದ್ದಾಳೆ. ನಿನ್ನೆ ನನ್ನ ಬಟ್ಟಲಿನ ಮದ್ಯ ಕುಡಿದಿದ್ದಳು,ʼ ಅಂದೆ.
ʻನಾಳೆ ನನ್ನ ಬಟ್ಟಲಿನ ವೈನ್ ಕುಡಿಯುತ್ತಾಳೆ,ʼ ಅಂದ ಗೆಳೆಯ.
ʻಹೇಗೆ ಅವನ ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಯಿಂದ ನೋಡುತ್ತಿದ್ದಾಳೆ. ಅವನಿಗೆ ಶರಣಾಗುತ್ತಿದ್ದಾಳೆ. ನಿನ್ನೆ ನನ್ನ ಜೊತೆ ಹೀಗೇ ಇದ್ದಳು,ʼ ಅಂದೆ.
ʻನಾಳೆ ಅವಳು ನನ್ನನ್ನೂ ಹಾಗೇ ನೋಡುತ್ತಾಳೆ,ʼ ಅಂದ ಗೆಳೆಯ.
ʻಅವನ ಕಿವಿಯಲ್ಲಿ ಪ್ರೇಮದ ಗೀತೆ ಉಲಿಯುತ್ತಿದ್ದಾಳಲ್ಲಾ, ನನ್ನ ಕಿವಿಯಲ್ಲೂ ನಿನ್ನೆ ಇದೇ ಹಾಡು ಹೇಳಿದ್ದಳು, ಅಂದೆ.
ʻನಾಳೆ ನನ್ನ ಕಿವಿಯಲ್ಲೂ ಅದೇ ಹಾಡು ಉಸುರುತ್ತಾಳೆ,ʼ ಅಂದ ಗೆಳೆಯ.
ʻಅಯ್ಯೋ, ಅವನನ್ನು ಅಪ್ಪುತ್ತಿದ್ದಾಳೆ. ನಿನ್ನೆ, ನಿನ್ನೆಯಷ್ಟೇ ನನ್ನನ್ನು ಅಪ್ಪಿ ಮುದ್ದಾಡಿದ್ದಳು,ʼ ಅಂದೆ.
ʻನಾಳೆ ನನ್ನನ್ನು ಅಪ್ಪುತ್ತಾಳೆ,ʼ ಅಂದ ಗೆಳೆಯ.
ʻಎಂಥಾ ವಿಚಿತ್ರ ಹೆಂಗಸು!ʼ ಅಂದೆ.
ʻಅವಳು ಬದುಕಿನ ಹಾಗೆ. ಎಲ್ಲರ ವಶದಲ್ಲೂ ಇರುವವಳು. ಸಾವಿನ ಹಾಗೆ ಎಲ್ಲರನ್ನೂ ಗೆಲ್ಲುವವಳು. ಅನಂತತೆಯ ಹಾಗೆ ಎಲ್ಲರನ್ನೂ ಅಪ್ಪಿ ಆವರಿಸುವವಳು,ʼ ಎಂದ ಗೆಳೆಯ.

