ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಕಾಯಿಲೆಯಿಂದ ಬಳಲುತ್ತಿದ್ದ ತನ್ನ ತಾಯಿಯನ್ನು ಕರೆದುಕೊಂಡು ಒಬ್ಬ ಯುವಕ ಅಜ್ಮೇರ್ ಶರೀಫ್ ಗೆ ಬರುತ್ತಾನೆ. ತಾಯಿಯ ಆರೋಗ್ಯಕ್ಕಾಗಿ ದರ್ಗಾದಲ್ಲಿ ಚಾದರ್ ಹೊದಿಸುವುದು, ತಾಯಿಗಾಗಿ ಪ್ರಾರ್ಥನೆ ಮಾಡುವುದು ಅವನ ಉದ್ದೇಶವಾಗಿತ್ತು. ಆಗಿನ್ನೂ ನಿರೋದ್ಯೋಗಿಯಾಗಿದ್ದ ಮಗನಿಗೆ ಇಟ್ಟುಕೊಳ್ಳಲು ತಾಯಿ ಅವನಿಗೆ 5000 ರೂಪಾಯಿ ಕೊಟ್ಚಿದ್ದಳು.
ದರ್ಗಾ ಹತ್ತಿರವಾಗುತ್ತಿದ್ದಂತೆಯೇ, ಯುವಕ ತನ್ನ ಜೇಬು ನೋಡಿಕೊಂಡ, ಅವನ ಜೇಬಿನಲ್ಲಿದ್ದ 5000 ರೂಪಾಯಿ ಮಾಯವಾಗಿತ್ತು. ಗಾಬರಿಯಲ್ಲಿ ಯುವಕ ಹಣ ಎಲ್ಲಾದರೂ ಬಿದ್ದಿರಬಹುದೆಂದು ಹುಡುಕುತ್ತ ವಾಪಸ್ ದಾರಿಯಲ್ಲಿ ಬಂದ. ಅವನ ಕಣ್ಣುಗಳಲ್ಲಿನ ಹುಡುಕಾಟ ಕಂಡು ಅಲ್ಲಿದ್ದ ಒಬ್ಬ ಫಕೀರ ಅವನನ್ನು ಪ್ರಶ್ನೆ ಮಾಡಿದ….
ಏನಾದರೂ ಕಳೆದುಕೊಂಡಿದ್ದೀಯಾ?
ಹೌದು
5000 ರೂಪಾಯಿ ಕಳೆದುಕೊಂಡುದ್ದೀಯಾ ?
( ಫಕೀರ ಹೀಗೆ ಕೇಳುತ್ತಿದ್ದಂತೆಯೇ ಆ ಯುವಕನಿಗೆ ಬಹುಶಃ ಇವನಿಗೆ ನನ್ನ 5000 ರೂಪಾಯಿ ಸಿಕ್ಕಿದೆ ಎನ್ನುವ ಅನುಮಾನ ಶುರುವಾಯ್ತು)
“ಹೌದು 5000 ರೂಪಾಯಿ ಕಳೆದು ಹೋಗಿದೆ” ಯುವಕ ಉತ್ತರಿಸಿದ.
“ಹೋಗು 5000 ರೂಪಾಯಿಗಾಗಿ ಚಿಂತೆ ಮಾಡಬೇಡ. ಮುಂದೆ ನಿನಗೆ 500 ಕೋಟಿ ಹಣ ಸಿಗಲಿದೆ. ಅಜ್ಮೇರ್ ಶರೀಫ್ ಗೆ ಖಾಲೀ ಕೈಯಲ್ಲಿ ಬಂದಿದ್ದೀಯ, ಇಲ್ಲಿಂದ ಬಹಳಷ್ಟು ತೆಗೆದುಕೊಂಡು ಹೋಗಲಿದ್ದೀಯ” ಫಕೀರ ಆಶೀರ್ವಾದ ಎಂಬಂತೆ ಹೇಳಿದ.
ಆ ಯುವಕ ಮುಂದೆ ಹೇಳುತ್ತಾನೆ, “ಆ ಫಕೀರ ನ ಮಾತು ನಿಜವಾಯ್ತು. ನಾನು ಓದು ಬರಹ ಕಲಿತ rational ಯುವಕ ಆಗ ಇಂಥದ್ದೆನ್ನೆಲ್ಲ ನಂಬಿರಲಿಲ್ಲ. ಆದರೆ ಈ ಘಟನೆ ನನ್ನ ಬದುಕಿನಲ್ಲಿ ನಡೆದಿದ್ದಂತೂ ನಿಜ” ಹೀಗೆ ತನ್ನ ಬದುಕಿನಲ್ಲಿ ನಡೆದ ಅಪರೂಪದ ಪ್ರಸಂಗವನ್ನು ಹೇಳಿಕೊಂಡ ಯುವಕ ಬೇರಾರೂ ಅಲ್ಲ, ಸ್ವತಃ ಶಾಹರುಖ್ ಖಾನ್!

