ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಒಮ್ಮೆ ಕುಡಿದು ಮತ್ತರಾಗಿದ್ದಾಗ ಖ್ಯಾತ ನಿರ್ದೇಶಕ ಮಣಿ ಕೌಲ್ ಮತ್ತು ಕವಿ ಜಾವೇದ್ ಅಖ್ತರ್ ನಡುವೆ ಒಂದು ತೀವ್ರ ವಾದ ವಿವಾದ ಶುರುವಾಗುತ್ತದೆ. ಗಾಲೀಬ್ ನಂಥ ಕವಿ ಭಾರತದಲ್ಲಿ ಮಾತ್ರ ಸಾಧ್ಯ ಅಂತ ಮಣಿ ಕೌಲ್ ಅವರ ವಾದವಾದರೆ, ಗಾಲೀಬ್ ಒಬ್ಬ ಜಿನೀಯಸ್ ಕವಿ ಅವ ಯಾವ ದೇಶದಲ್ಲಿ ಹುಟ್ಟಿದ್ದರೂ ಅವನ ಕವಿತ್ವಕ್ಕೆ ಯಾವ ಚ್ಯುತಿ ಬರುತ್ತಿರಲಿಲ್ಲ ಎನ್ನುವುದು ಜಾವೇದ್ ಅವರ ವಾದ.
ಮುಂದೆ ಎಷ್ಟೋ ವರ್ಷಗಳ ನಂತರ ಜಾವೇದ್ ಹೇಳುತ್ತಾರೆ……
ಅವತ್ತು ಮಣಿ ಕೌಲ್ ಹೇಳಿದ್ದು ಸರಿ. ಇವತ್ತು ಏನಾದರೂ ಮಣಿ ಕೌಲ್ ಬದುಕಿದ್ದರೆ ನಾನು ಅವರ ಕ್ಷಮೆ ಕೇಳುತ್ತಿದ್ದೆ. ಸೆಮೆಟಿಕ್ ಮತಗಳಲ್ಲಿ ಸೃಷ್ಚಿ ಮತ್ತು ಸೃಷ್ಟಿಕರ್ತ ಬೇರೆ ಬೇರೆ. ಆದರೆ ಅದ್ವೈತದಲ್ಲಿ ಮಾತ್ರ ಸೃಷ್ಟಿ ಮತ್ತು ಸೃಷ್ಟಿಕರ್ತ ಎರಡೂ ಒಂದೇ. ಇದೇ ಅಹಂ ಬ್ರಹ್ಮಾಸ್ಮಿ . ಇದೇ ಸೂಫಿಗಳ ಅನಲ್ ಹಕ್. ಗಾಲೀಬ್ ನ ಒಂದು ಪದ್ಯ ಇದೆ……
ನ ಥಾ ಕುಛ್ ತೋ ಖುದಾ ಥಾ
ಕುಛ್ ನಾ ಹೋತಾ ತೋ ಖುದಾ ಹೋತಾ
ಡುಬೋಯಾ ಮುಝ್ಕೋ ಹೋನೇ ನೇ
ನ ಹೋತಾ ಮೈ ತೋ ಕ್ಯಾ ಹೋತಾ ?
ಏನೂ ಇಲ್ಲದಿದ್ದಾಗಲೂ ದೇವರಿದ್ದ
ಏನೂ ಇಲ್ಲವಾದರೂ ದೇವರಿರುತ್ತಾನೆ
ಇರುವುದೇ ಮುಳುಗಿಸಿ ಬಿಟ್ಟಿದೆ ನನ್ನನ್ನು
“ನಾನು” ಇರದಿದ್ದರೆ ಏನಾಗಿರುತ್ತಿದ್ದೆ ನಾನು?
ನಾನು ಎನ್ನುವುದು ಇಲ್ಲದಿದ್ದರೆ ನಾನು ಏನಾಗಿರುತ್ತದೆ? ದೇವರಾಗಿರುತ್ತಿದ್ದೆ. ಇದು ಅದ್ವೈತದಲ್ಲಿ ಮಾತ್ರ ಸಾಧ್ಯ, ಭಾರತದಲ್ಲಿ ಮಾತ್ರ ಸಾಧ್ಯ.

