ಅರಳಿ ಬಳಗದ ಚಿದಂಬರ ನರೇಂದ್ರ ಅವರು ಮೂಲತಃ ಕವಿ. ಇವರ ಚುಕ್ಕಿ ತೋರಿಸ್ತಾವ ಚಾಚಿ ಬೆರಳ, ಹೂಬಾಣ (ಕಾವ್ಯಾನುವಾದಗಳು) ಸಂಕಲನಗಳ ಜೊತೆಗೇ ಸ್ವರಚನೆಯ ಗಾಳಿ ಕೆನಿ ಕವನ ಸಂಕಲನ ಕೂಡ ಪ್ರಕಟವಾಗಿವೆ. ಇವರ ಅಪ್ರಕಟಿತ ‘ಆನಂದಿ ಕಲರ್ ಪದ್ಯಗಳು’ ಸಂಕಲನದಿಂದ ಆಯ್ದ 6 ಪದ್ಯಗಳು ಇಲ್ಲಿವೆ…

ಲೋಕ, ನಶೆಗಾಗಿ ವೈನ್ ನ ಮೊರೆ ಹೊಕ್ಕರೆ,
ವೈನ್, ಮುಳುಗುತ್ತದೆ ನಶೆಗಾಗಿ
‘ಕವಿತೆ’ಯಲ್ಲಿ.
ಜಗತ್ತು, ಖುಶಿಯಲ್ಲಿ ಪ್ರೇಮಕ್ಕಾಗಿ ಹಾತೊರೆದರೆ,
ಪ್ರೇಮಕ್ಕೆ, ಖುಶಿಯಾದಾಗ ಅಪ್ಪಿಕೊಳ್ಳುತ್ತದೆ
‘ಕವಿತೆ’ ಯನ್ನು
ಬ್ರಹ್ಮಾಂಡ, ದುಡಿದು ಸುಸ್ತಾದಾಗ ವಿಶ್ರಾಂತಿಗೆ ಒಪ್ಪಿಸಿಕೊಂಡರೆ,
ವಿಶ್ರಾಂತಿ, ದಣಿದು ಬಸವಳಿದಾಗ ಜಾರುವುದು
‘ಕವಿತೆ’ ಯೊಳಗೆ.
ಸತ್ಯಗಳ ಹುಡುಕಾಡುವವರು ಧ್ಯಾನದ ಮೊರೆ ಹೋದರೆ,
ಧ್ಯಾನ ಹುಡುಕಾಡುತ್ತಿದೆ ತನ್ನ ಸತ್ಯವನ್ನ
‘ಕವಿತೆ’ ಯಲ್ಲಿ.
ಕವಿತೆಯ ಜಾಗದಲ್ಲಿ ‘ತಾನು’ ಎನ್ನುತ್ತಾಳೆ ಅವಳು,
ಅವಳ ಜಾಗದಲ್ಲಿ ‘ಕವಿತೆ’ ಎನ್ನುವುದು
ನನ್ನ ರಾಜಕಾರಣ.

ಪ್ರೇಮ ಇರುವುದು
ಪ್ರೇಮ ಇರುವ ಕಾರಣಕ್ಕಾಗಿಯೇ ಹೊರತು
ದ್ವೇಷ ಇಲ್ಲದಿರುವ ಕಾರಣಕ್ಕಾಗಿ ಅಲ್ಲ.
ಹಾಗೆಯೇ
ದ್ವೇಷ ಇರುವುದು
ದ್ವೇಷ ಇರುವ ಕಾರಣಕ್ಕಾಗಿಯೇ ಹೊರತು
ಪ್ರೀತಿ ಇಲ್ಲದಿರುವ ಕಾರಣಕ್ಕಾಗಿ ಅಲ್ಲ.
ಖುಶಿ ಇರುವುದು
ಖುಶಿ ಇರುವ ಕಾರಣಕ್ಕಾಗಿಯೇ ಹೊರತು
ದುಃಖ ಇಲ್ಲದಿರುವ ಕಾರಣಕ್ಕಾಗಿ ಅಲ್ಲ.
ಹಾಗೆಯೇ
ದುಃಖ ಇರುವುದು
ದುಃಖ ಇರುವ ಕಾರಣಕ್ಕಾಗಿಯೇ ಹೊರತು
ಖುಶಿ ಇಲ್ಲದಿರುವ ಕಾರಣಕ್ಕಾಗಿ ಅಲ್ಲ.
ಮತ್ತು
ಸತ್ಯ ಇರುವುದು
ಸತ್ಯ ಇರುವ ಕಾರಣಕ್ಕಾಗಿಯೇ ಹೊರತು
ಮಿಥ್ಯೆ ಇಲ್ಲದಿರುವ ಕಾರಣಕ್ಕಾಗಿ ಅಲ್ಲ.
ಆದರೆ…..
ನಾನು ಇರುವುದು
ಅವಳು ಇರುವ ಕಾರಣಕ್ಕಾಗಿಯೇ ಹೊರತು
ನಾನು ಇರುವ ಕಾರಣಕ್ಕಾಗಿ ಅಲ್ಲ.

ನನ್ನ ನಂಬಿಕೆಯ ತುಟಿಗಳ ಜೊತೆ
ನಿನ್ನ ಸಂಶಯದ ತುಟಿಗಳು
ನಡೆಸಿದ
ದೀರ್ಘ ಸಂಭಾಷಣೆಯ ನಂತರ ;
ಬ್ರಹ್ಮಾಂಡದ ಸಂಶಯಕ್ಕೆ ಮಾತಿನ ಶಾಪ,
ಮತ್ತು
ನಂಬಿಕೆಗೆ ಮೌನದ ವೃತ.
ಬಹುಶಃ ಈ ಕಾರಣವಾಗಿಯೇ ಇರಬಹುದು
ಪ್ರೇಮಿಗಳು
ಸರಸದಲ್ಲಿ ಒಂದೇ ಸವನೆ ಮಾತನಾಡುವುದು
ಮತ್ತು
ಸುಮ್ಮನಾಗಿಬಿಡುವುದು ವಿರಸದಲ್ಲಿ.
ಬಹುಶಃ ಇದೇ ಕಾರಣಕ್ಕೆ ಇರಬಹುದು
ಪ್ರೇಮಕ್ಕೆ ಸನಾತನದ ಸ್ವಭಾವ
ಅಥವಾ
ಸಾಧ್ಯವಾಗಿರಬಹುದು
ಎಲ್ಲವನ್ನೂ ಬಾಳುವ ಅಸಂಭವ.
ಹಾಗು ಖಂಡಿತ ಈ ಕಾರಣವಾಗಿಯೇ
ಪ್ರೇಮಿಗಳಲ್ಲಿ ಅಪಾರ ಹುಂಬತನ.
ಮತ್ತು
ದಿವ್ಯ ಉಡಾಫೆ

ಪ್ರೇಮದಲ್ಲಿ
ಏನಾದರೂ ಗಳಿಸಿದ್ದೇವೆಂದರೆ
ಅದು ಮೊದಲೂ ನಮ್ಮೊಳಗಿತ್ತು.
ಪ್ರೇಮದಲ್ಲಿ
ಏನಾದರೂ ಕಳೆದುಕೊಂಡಿದ್ದೇವೆಂದರೆ
ಅದು ನಮ್ಮೊಳಗಿರಲಿಲ್ಲ ಯಾವತ್ತೂ.
ಗಳಿಸುವುದು ಕಳೆದುಕೊಳ್ಳುವುದು ಎಲ್ಲ
ದಲ್ಲಾಳಿಗಳ ಭಾಷೆ.
ಪ್ರೇಮದ ಮಾರುಕಟ್ಟೆಯಲ್ಲಿ
ಕೊಟ್ಟದ್ದಕ್ಕೆ ರಸೀದಿಯಿಲ್ಲ,
ಪಡೆದುಕೊಂಡದಕ್ಕೆ ಲೆಕ್ಕವಿಲ್ಲ.
ಆದರೂ ಸಪ್ಪೆಯಾದಂತೆಲ್ಲ ಪ್ರೀತಿ
ಇರಿಯುತ್ತಾರೆ ಪ್ರೇಮಿಗಳು
ಒಬ್ಬರನ್ನೊಬ್ಬರು
ಮತ್ತು ಹಾತೊರೆಯುತ್ತಾರೆ
ನೋವಿನ ಚಿತ್ಕಾರದಲ್ಲಿ
ಸಾನುರಾಗ ಕಂಡುಕೊಳ್ಳುವ
ಹುಚ್ಚು ಸಾಹಸಕ್ಕೆ
ಸವಾಲಾಗುತ್ತಾರೆ ಜಗತ್ತಿಗೆ ಮತ್ತು
ಕೊನೆಗೆ ತಮಗೆ ತಾವೇ.

ಪ್ರೇಮಿ ಕಾರಣವಾಗಿರದಿದ್ದರೂ
ನಿಮಗೆ ಖುಶಿಯಾಗಿದೆಯೆಂದರೆ
ಪ್ರೇಮವೇ ಕಾರಣ,
ಪ್ರೇಮಿ ಕಾರಣವಾಗಿರದಿದ್ದರೂ
ನಿಮಗೆ ನೋವಾಗಿದೆಯೆಂದರೆ
ಪ್ರೇಮವೇ ಕಾರಣ,
ಪ್ರೇಮಿ ತಪ್ಪು ಮಾಡಿದಾಗ ತಿದ್ದುವುದಕ್ಕಿಂತ
ಪ್ರೇಮಿಗೆ ತಪ್ಪು ಮಾಡಲು ಇರುವ ಸ್ವಾತಂತ್ರ್ಯವನ್ನು
ಎತ್ತಿ ಹಿಡಿಯುವಿಲ್ಲಿ ಮಾತ್ರ,
ಪ್ರೇಮಕ್ಕೆ ಆಸಕ್ತಿ.
ಕಾನೂನಿನ ಮತ್ತು
ಧರ್ಮ ಶಾಸ್ತ್ರಗಳ ಪುಸ್ತಕಗಳನ್ನು
ಹರಿದೊಗೆದವರಿಗೆ ಮಾತ್ರ ಗೊತ್ತು
ಪ್ರೇಮದ ಈ
ನಟೋರಿಯಸ್ ಸ್ವಭಾವ
ಸರಿ ತಪ್ಪುಗಳ ವ್ಯಾಖ್ಯಾನಗಳಲ್ಲಿ
ಪ್ರೇಮ ಅಪಮಾನಕ್ಕೊಳಗಾಗುವುದು
ಒಂದೆರಡು ಥರ ಅಲ್ಲ,
ಆದರೆ ಪ್ರೇಮಕ್ಕೆ ಇಲ್ಲ ಯಾವ
ಹಂಗೂ.

ನಾನು ಅವಳನ್ನು ಪ್ರೀತಿಸುವುದು
ಅವಳಿಗೆ ಗೊತ್ತಿದ್ದರೂ, ಅವಳು
ಗೊತ್ತಿಲ್ಲದಿರುವಂತೆ ನಟಿಸುತ್ತಾಳೆ
ಅವಳು ನನ್ನ ಪ್ರೀತಿಸುತ್ತಿರುವುದು
ನನಗೆ ಗೊತ್ತಿಲ್ಲವಾದರೂ, ನಾನು
ಗೊತ್ತಿರುವಂತೆ ನಾಟಕ ಮಾಡುತ್ತೇನೆ.
ಬಿಸಿಲು ಕತ್ತರಿಸುತ್ತ ಯಾರಿಗೂ
ನೆರಳು ಕಾಣಿಸದಂತೆ
ಅವಳು ಸಂಸಾರ ನಡೆಸುತ್ತಿದ್ದರೆ
ನೆರಳುಗಳ ಜೋಡಿಸುತ್ತ
ಗುರುತು ಸಿಗದಂತೆ ಬದುಕುತ್ತಿರುವುದು
ನನ್ನ ರಾಯಭಾರ
ಪ್ರೇಮದ ಕಣ್ಣು ಮುಚ್ಚಾಲೆಯಾಟದಲ್ಲಿ
ಬಚ್ಚಿಟ್ಟುಕೊಳ್ಳುವ ಥ್ರಿಲ್ ಗಿಂತ
ಸಿಕ್ಕಿಹಾಕಿಕೊಳ್ಳುವ ಸುಖಕ್ಕೆ
ಹೆಚ್ಚು ಗೌರವ,
ಈ ಕಾರಣಕ್ಕಾಗಿಯೇ
ಸುಳಿವು ನೀಡುತ್ತ ಹೋಗುತ್ತದೆ
ಪ್ರೇಮ
ಕೆಲವೊಮ್ಮೆ ಪ್ರೇಮಿಗಳೇ ಬೆಚ್ಚಿ ಬಿದ್ದು
ಕಕ್ಕಾವಿಕ್ಕಿಯಾಗುವಂತೆ.
ಸೋಜಿಗ ಪ್ರೇಮಕ್ಕೆ,
ತಾನು ಬರೆದ ನಾಟಕದಲ್ಲಿ ಪ್ರೇಮಿಗಳು
ಹೇಗೆ ಹಿಡಿದು ಕಟ್ಟಿಹಾಕುತ್ತಾರೆ
ರಹಸ್ಯವಾದದ್ದನ್ನು
ಮತ್ತು ಯಾಕೆ ಹುಡುಕುತ್ತಾರೆ
ಮುಖಕ್ಕೆ ರಾಚುವಂಥದ್ದನ್ನು
ಜನ್ಮಾಂತರಗಳಲ್ಲಿ.

