ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಒಮ್ಮೆ ತತ್ವಜ್ಞಾನಿಯೊಬ್ಬ ಮೋಚಿಯ ಅಂಗಡಿಗೆ ಬಂದ. ಯಾಕೆಂದರೆ ಅವನ ಚಪ್ಪಲಿ ಹರಿದು ಹೋಗಿದ್ದವು. ʻಇವನ್ನು ಸ್ವಲ್ಪ ರಿಪೇರಿ ಮಾಡಿಕೊಡು,ʼ ಅಂದ.
ಆಗ ಮೋಚಿ, ʻಈಗ ಬೇರೆಯವರ ಶೂ ರಿಪೇರಿ ಮಾಡುತಿದ್ದೇನೆ. ಇದಾದ ಮೇಲೆ ಇನ್ನೂ ನಾಲ್ಕಾರು ರಿಪೇರಿ ಕೆಲಸಗಳು ಇದ್ದಾವೆ. ತಡವಾಗತ್ತೆ. ಈಗ ನಿಮ್ಮ ಚಪ್ಪಲಿ ಇಲ್ಲಿ ಬಿಟ್ಟು ಬೇರೆಯದನ್ನು ಹಾಕಿಕೊಂಡು ಹೋಗಿ. ನಾಳೆ ಬಂದು ಇದನ್ನು ವಾಪಸು ಕೊಟ್ಟು ನಿಮ್ಮದು ತಗೊಂಡು ಹೋಗಿ,ʼ ಅಂದ
ತತ್ವಜ್ಞಾನಿಗೆ ಸಿಟ್ಟು ಬಂತು. ʻನನ್ನದಲ್ಲದ ಪಾದರಕ್ಷೆಗಳನ್ನು ತೊಡುವವನಲ್ಲ ನಾನು,ʼ ಅಂದ.
ʻನಿಜವಾಗಿ ನೀವು ತತ್ವಜ್ಞಾನಿಗಳು. ಬೇರೆಯವರ ಚಪ್ಪಲಿಗೆ ಕಾಲು ತೂರಿಸಲಾರಿರಾ? ಇದೇ ಬೀದಿಯಲ್ಲಿ ಮುಂದೆ ಇನ್ನೊಬ್ಬ ಮೋಚಿ ಇದ್ದಾನೆ. ಅವನಿಗೆ ತತ್ವಶಾಸ್ತ್ರ ಹೇಳುವವರು ನನಗಿಂತ ಚೆನ್ನಾಗಿ ಅರ್ಥ ಆಗುತ್ತಾರೆ. ಹೋಗಿ ಅವನ ಹತ್ತಿರ ರಿಪೇರಿ ಮಾಡಿಸಿಕೊಳ್ಳಿ,ʼ ಅಂದ ಮೋಚಿ.

