ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಒಂದಾನೊಂದು ಕಾಲದಲ್ಲಿ ಇಬ್ಬರು ಮಧ್ಯವಯಸಿನ ಗಂಡಸರು ಸಲಾಮಿಸ್ ನಗರದತ್ತ ಸಾಗುತ್ತಿದ್ದರು. ಮಧ್ಯಾಹ್ನದ ಹೊತ್ತಿಗೆ ನದಿಯೊಂದು ಅವರ ದಾರಿಗೆ ಅಡ್ಡವಾಗಿ ಬಂದಿತ್ತು. ನದಿಯನ್ನು ದಾಟಲು ಸೇತುವೆ ಇರಲಿಲ್ಲ. ಈಜಿ ನದಿ ದಾಟಬೇಕಾಗಿತ್ತು ಅಥವಾ ತಮಗೆ ಪರಿಚಯವಿಲ್ಲದ ದಾರಿ ಹಿಡಿದು ಸುತ್ತು ಬಳಸಿ ಸಾಗಬೇಕಾಗಿತ್ತು.
ʻನದಿಯೇನೂ ತುಂಬ ದೊಡ್ಡದಲ್ಲ, ಈಜಿ ಬಿಡೋಣ,ʼ ಅಂದ ಒಬ್ಬ. ಇಬ್ಬರೂ ನದಿಗೆ ಧುಮುಕಿದರು.
ನದಿಗಳನ್ನು ಬಲ್ಲವನು ಅರ್ಧ ದೂರ ಈಜುವಷ್ಟರಲ್ಲಿ ದಣಿದ. ಕೈ ಸೋತಿತು. ಪ್ರವಾಹ ಎಳೆದತ್ತ ಹೋಗುವಂತಾಯಿತು.
ಎಂದೂ ನದಿಯಲ್ಲಿ ಈಜದವನು ನೇರವಾಗಿ ಈಜಿ ನದಿಯನ್ನು ದಾಟಿ ಆಚೆಯ ದಡ ತಲುಪಿ ನಿಂತು ನೋಡಿದ. ನದಿಯ ನಡುವೆ ಹೆಣಗಾಡುತ್ತಿರುವ ಜೊತೆಗಾರನನ್ನು ಕಂಡು ಮತ್ತೆ ನದಿಗೆ ಧುಮುಕಿ ಅವನನ್ನೂ ದಡಕ್ಕೆ ಎಳೆದುಕೊಂಡು ಬಂದ.
ಪ್ರವಾಹದಲ್ಲ ಕೊಚ್ಚಿ ಹೋಗುತಿದ್ದ ಮನುಷ್ಯ, ʻಅಲ್ಲಯ್ಯಾ, ನೀನು ನದಿಯಲ್ಲಿ ಯಾವತ್ತೂ ಈಜಿಲ್ಲ ಅಂದೆಯಲ್ಲಾ, ಅದು ಹೇಗೆ ಅಷ್ಟು ಧೈರ್ಯವಾಗಿ, ಸಲೀಸಾಗಿ ಈಜಿದೆ ಈಗ?ʼ ಎಂದು ಕೇಳಿದ.
ಸಲೀಸು ಈಜಿದ್ದವನು, ʻಗೆಳೆಯಾ ನನ್ನ ಸೊಂಟ ಪಟ್ಟಿ ನೋಡಿದೆಯಾ? ಒಂದು ವರ್ಷ ದುಡಿದು ಉಳಿಸಿದ ಹಣದಲ್ಲಿ ಸಂಪಾದಿಸಿದ ಬಂಗಾರದ ನಾಣ್ಯಗಳನ್ನು ಈ ಪಟ್ಟಿಯೊಳಗೆ ಕಟ್ಟಿಕೊಂಡಿದ್ದೇನೆ. ನನ್ನ ಹೆಂಡತಿ ಮಕ್ಕಳನ್ನು ಸಾಕಲೆಂದು ದುಡಿದು ಸಂಪಾದಿಸಿದ್ದು ಇದು. ಈ ಸೊಂಟಪಟ್ಟಿಯ ಭಾರವೇ ನದಿಯನ್ನು ದಾಟಿಸಿ ಹೆಂಡತಿ, ಮಕ್ಕಳನ್ನು ನೋಡಲು ಸಹಾಯ ಮಾಡಿತು. ನಾನು ಈಜುವಾಗ ಹೆಂಡತಿ, ಮಕ್ಕಳು ನನ್ನ ಭುಜದ ಮೇಲೇ ಇದ್ದರು. ಅದಕ್ಕೇ ಪ್ರವಾಹ ನನ್ನ ಕೊಚ್ಚಿಕೊಂಡು ಹೋಗಲಿಲ್ಲ,ʼ ಅಂದ.
ಇಬ್ಬರೂ ಸಲಾಮಿಸ್ ದಾರಿ ಹಿಡಿದು ಮುಂದೆ ಸಾಗಿದರು.

