ಯಾವತ್ತು ನಿಮ್ಮೊಳಗಿಂದ ಹೊರಹಾಕಲು ಏನೂ ಉಳಿದಿರುವುದಿಲ್ಲವೋ ಅದು ನಿಮ್ಮ ಬದುಕಿನ ಅತ್ಯಂತ ಮಹತ್ವದ ದಿನ ; ಎಲ್ಲವನ್ನೂ ಈಗಾಗಲೇ ಹೊರಹಾಕಲಾಗಿದೆ, ಈಗ ಉಳಿದುಕೊಂಡಿರುವುದು ಶುದ್ಧ ಖಾಲೀತನ. ಈ ಖಾಲೀತನದಲ್ಲಿಯೇ ನೀವು ನಿಮ್ಮನ್ನು ಕಂಡುಕೊಳ್ಳುತ್ತೀರಿ… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಧ್ಯಾನ ಎಂದರೇನೇ ಮೈಂಡ್ ನ ಎಲ್ಲ ಸಂಗತಿಗಳನ್ನ, ವಿಷಯಗಳನ್ನ ಹೊರಹಾಕಿ ಖಾಲೀ ಆಗುವುದು : ನೆನಪುಗಳು, ಕಲ್ಪನೆಗಳು, ವಿಚಾರಗಳು, ಬಯಕೆಗಳು, ನಿರೀಕ್ಷೆಗಳು, ಪ್ರೊಜೆಕ್ಷನ್ ಗಳು, ಮೂಡ್ ಗಳು ಎಲ್ಲವನ್ನೂ…. ಮನುಷ್ಯ ಈ ಸಂಗತಿಗಳನ್ನು ತನ್ನ ಮೈಂಡ್ ನಿಂದ ಹೊರಹಾಕುತ್ತಲೇ ಹೋಗಬೇಕು. ಯಾವತ್ತು ನಿಮ್ಮೊಳಗಿಂದ ಹೊರಹಾಕಲು ಏನೂ ಉಳಿದಿರುವುದಿಲ್ಲವೋ ಅದು ನಿಮ್ಮ ಬದುಕಿನ ಅತ್ಯಂತ ಮಹತ್ವದ ದಿನ ; ಎಲ್ಲವನ್ನೂ ಈಗಾಗಲೇ ಹೊರಹಾಕಲಾಗಿದೆ, ಈಗ ಉಳಿದುಕೊಂಡಿರುವುದು ಶುದ್ಧ ಖಾಲೀತನ. ಈ ಖಾಲೀತನದಲ್ಲಿಯೇ ನೀವು ನಿಮ್ಮನ್ನು ಕಂಡುಕೊಳ್ಳುತ್ತೀರಿ. ಈ ಖಾಲೀತನದಲ್ಲಿಯೇ ನೀವು ನಿಮ್ಮ ಶುದ್ಧ ಪ್ರಜ್ಞೆಯನ್ನು ( pure consciousness) ಕಂಡುಕೊಳ್ಳುತ್ತೀರಿ.
ಈ ಖಾಲೀತನ ಮೈಂಡ್ ಗೆ ಸಂಬಂಧಿಸಿದಂತೆ ಮಾತ್ರ. ಅದರವೈಸ್ ಅದು ತುಂಬಿ ಹರಿಯುತ್ತಿದೆ, ತುಂಬಿಕೊಂಡಿದೆ ತನ್ನ ಇರುವಿಕೆಯಿಂದ. ಮೈಂಡ್ ಖಾಲಿಯಾಗಿದೆಯಾದರೂ ಪ್ರಜ್ಞೆ ತುಂಬಿಕೊಂಡಿದೆ. ಆದ್ದರಿಂದ “ಖಾಲೀತನ” ಎನ್ನುವ ಪದದ ಬಗ್ಗೆ ಅಂಜಿಕೆ ಬೇಡ ; ಇದು ಋಣಾತ್ಮಕ ಅಲ್ಲ. ಈ ಖಾಲೀತನ ಕೇವಲ ಅನವಶ್ಯಕ ಸರಕನ್ನು ನಿರಾಕರಿಸುತ್ತದೆ, ಯಾವುದನ್ನ ನೀವು ತರಬೇತಿ ಕಾರಣವಾಗಿ ಹೊತ್ತುಕೊಂಡಿದ್ದೀರೋ ಮತ್ತು ಯಾವುದರಿಂದ ಯಾವ ಸಹಾಯವೂ ಆಗುವುದಿಲ್ಲವೋ ಅದನ್ನು ಮಾತ್ರ ಹೊರಹಾಕಲಾಗಿದೆ. ಮತ್ತು ಇದರ ಇರುವಿಕೆಯಿಂದ ಆಗುವುದೇನಿದ್ದರೂ ಅದು ಅಡಚಣಿ ಮಾತ್ರ ಮತ್ತು ಇದು ಅನವಶ್ಯಕ ಭಾರ, ಪರ್ವತಸದೃಶ್ಯ ಭಾರ. ಒಮ್ಮೆ ಈ ಭಾರದಿಂದ ಹೊರಬಂದರೆ, ನೀವು ಎಲ್ಲ ಮಿತಿಗಳಿಂದ ಮುಕ್ತರಾಗುತ್ತೀರಿ, ಆಕಾಶದ ಹಾಗೆ ಅನಂತವಾಗಿ ಹರಡಿಕೊಳ್ಳುತ್ತೀರಿ. ಇದು ದೈವಾನುಭವ ಅಥವಾ ಬುದ್ಧತ್ವ ಅಥವಾ ಜನ ಇದನ್ನ ಯಾವ ಹೆಸರಿನಿಂದ ಕರೆಯಬಯಸುತ್ತಾರೋ ಅದು. ಧಮ್ಮ ಎನ್ನಿ, ತಾವೋ ಎನ್ನಿ, ಸತ್ಯ ಎನ್ನಿ, ನಿರ್ವಾಣ ಎನ್ನಿ….. ಎಲ್ಲವೂ ಒಂದೇ.
ಒಮ್ಮೆ ಒಬ್ಬ ಝೆನ್ ಮಾಸ್ಟರ್ ಮತ್ತು ಅವನ ಶಿಷ್ಯ ಒಂದು ಪರ್ವತ ಶ್ರೇಣಿಯ ಮೂಲಕ ಹಾಯ್ದು ಮುಂದಿನ ಊರಿಗೆ ಹೋಗುತ್ತಿದ್ದರು.
ದಾರಿಯುದ್ದಕ್ಕೂ ಮಾಸ್ಟರ್ ಮೌನವಾಗಿದ್ದ ಆದರೆ ಅವನ ಶಿಷ್ಯ ಮಾತ್ರ ಝೆನ್ ಬಗ್ಗೆ ಮತ್ತು ಮನಸ್ಸಿನ ಬಗ್ಗೆ ಸತತವಾಗಿ ಮಾತಾನಾಡುತ್ತಲೇ ಇದ್ದ. ಸ್ವಲ್ಪ ದೂರ ಕ್ರಮಿಸಿದ ನಂತರ ಅವರಿಬ್ಬರಿಗೂ ಒಂದು ಭಾರಿ ಬಂಡೆ ಎದುರಾಯಿತು.
ಮಾಸ್ಟರ್ ತನ್ನ ಶಿಷ್ಯನ ತಲೆ ಮೇಲೆ ಕೈಯ್ಯಾಡಿಸುತ್ತ ಕೇಳಿದ, “ ನೋಡು ಆ ಭಾರಿ ಬಂಡೆ ಇದೆಯಲ್ಲಾ, ಅದು ನಿನ್ನ ಮನಸ್ಸಿನ ಒಳಗಿದೆಯೋ ಹೊರಗಿದೆಯೋ?
ಶಿಷ್ಯ ಅತ್ಯಂತ ಆತ್ಮವಿಶ್ವಾಸದಿಂದ ಉತ್ತರಿಸಿದ, “ ಝೆನ್ ನಲ್ಲಿ ಎಲ್ಲವೂ ಮನಸ್ಸಿನ ಆಟ, ಮನಸ್ಸು ನಮ್ಮ ಎಲ್ಲ ಕ್ರಿಯೆಗಳನ್ನು ನಿಯಂತ್ರಿಸುತ್ತದೆ, ಆದ್ದರಿಂದ ಖಂಡಿತವಾಗಿ ಬಂಡೆ ನನ್ನ ಮನಸ್ಸಿನ ಒಳಗಿದೆ.
“ಹಾಗಾದರೆ ಭಾರಿ ಬಂಡೆಯನ್ನು ಹೊತ್ತ ನಿನ್ನ ತಲೆ ತುಂಬ ಭಾರವಾಗಿರಬೇಕಲ್ಲ ? “ ಮಾಸ್ಟರ್ ನಗುತ್ತ ಉತ್ತರಿಸಿದ.
ಮುಂದಿನ ಹಾದಿಯನ್ನು ಇಬ್ಬರೂ ಮಾತಿಲ್ಲದೇ ಸಮಾಧಾನದಿಂದ ಕ್ರಮಿಸಿದರು.
ನೆನ್ನೆಯ ಕಂತು ಇಲ್ಲಿ ಓದಿ: https://aralimara.com/2025/02/16/osho-472/

