ಮತ್ತೇನಿಲ್ಲ, “ಸತ್ಯವನ್ನೇ ಆಡು, ಪ್ರಿಯವಾಗಿ ಆಡು” ಅಂದ ಬೀರಬಲ್. ಈ ಪ್ಲಾನ್ ಜ್ಯೋತಿಷಿಗೆ ವರ್ಕ್ ಔಟ್ ಆಯ್ತು. ಕಳೆದ ಸಲ ಕುತ್ತಿಗೆ ಹಿಡಿದು ದಬ್ಬಿಸಿಕೊಂಡಿದ್ದವನು ಈ ಸಲ ಉಡುಗೊರೆ ಹಿಡಿದು ಹೊರಬಂದ! ~ ಚೇತನಾ ತೀರ್ಥಹಳ್ಳಿ
ಬೀರಬಲ್ಲನ ಕಥೆಯೊಂದಿದೆ…
ಒಮ್ಮೆ ಬೀರಬಲ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ, ಅರಳಿಕಟ್ಟೆಯ ಕೆಳಗೆ ಜ್ಯೋತಿಷಿಯೊಬ್ಬ ತಲೆ ಮೇಲೆ ಕೈ ಹೊತ್ತು ಕೂತಿರೋದನ್ನು ನೋಡ್ದ. “ಏನಾಯ್ತು?” ಅಂತ ವಿಚಾರಿಸಿದಾಗ, “ನಾನು ಶ್ರೀಮಂತ ವ್ಯಾಪಾರಿಯೊಬ್ಬನಿಗೆ ಜಾತಕ ನೋಡಿ ಹೇಳಿದೆ. ಅವನು ಸಿಕ್ಕಾಪಟ್ಟೆ ಕೋಪ ಮಾಡಿಕೊಂಡು ನನ್ನ ಮೇಲೇರಿ ಬಂದ. ಅವನ ಆಳುಗಳು ನನ್ ಹತ್ರ ಇದ್ದಿದ್ದೆಲ್ಲ ಕಿತ್ಕೊಂಡು ಹೊರಗೆ ದಬ್ಬಿದ್ರು” ಅಂತ ದುಃಖಿಸಿದ.
“ಅಂಥದ್ದೇನು ಇತ್ತು ಅವನ ಜಾತಕದಲ್ಲಿ? ನೀನೇನು ಹೇಳ್ದೆ?” ವಿಚಾರಿಸಿದ ಬೀರಬಲ್.
“ಜಾತಕದ ಪ್ರಕಾರ ಅವನ ಕಣ್ಣೆದುರೇ ಅವನ ಕುಟುಂಬದವ್ರು. ಆಪ್ತೇಷ್ಟರೆಲ್ಲ ತೀರಿಹೋಗ್ತಾರೆ, ಆತ ಏಕಾಂಗಿಯಾಗಿ ಬದುಕಬೇಕಾಗುತ್ತೆ. ನಾನು ಅದನ್ನೇ ಹೇಳ್ದೆ” ಅಂದ ಜ್ಯೋತಿಷಿ.
ಬೀರಬಲ್ ನಗ್ತಾ “ಅದೇ ವಿಷಯಾನ ಹೀಗೂ ಹೇಳಬಹುದಲ್ಲ!?” ಅಂತ ಜ್ಯೋತಿಷಿಯ ಕಿವಿಯಲ್ಲಿ ಏನೋ ಪಿಸುಗುಟ್ಟಿದ. “ಇದನ್ನ ವೇಷ ಮರೆಸ್ಕೊಂಡು ಹೋಗಿ ಆ ಶ್ರೀಮಂತನಿಗೆ ಹೇಳು. ಉಡುಗೊರೆ ಕೊಟ್ಟು ನಿನ್ನನ್ನ ಸತ್ಕರಿಸ್ದೆ ಹೋದ್ರೆ ಮತ್ತೆ ಹೇಳು!” ಅಂದ.
ಜ್ಯೋತಿಷಿ ವೇಷ ಮರೆಸ್ಕೊಂಡು ಶ್ರೀಮಂತನ ಬಳಿ ಹೋದ. ಕವಡೆ ಕುಲುಕಿ ಅವನೆದುರು ಹಾಕಿ, ಬೆರಳುಗಳನ್ನ ಮಡಚುತ್ತಾ ಹೇಳ್ದ, “ಹುಜೂರ್! ನಿಮ್ಮ ಅದೃಷ್ಟವೋ ಅದೃಷ್ಟ! ನಿಮ್ಮ ಆಯಸ್ಸಿನ ಬಲ ಅದ್ಭುತವಾಗಿದೆ!! ನಿಮ್ಮ ಬಂಧು ಬಾಂಧವರು, ಆಪ್ತೇಷ್ಟರು ಎಲ್ಲರಿಗಿಂತ ನೀವು ಬಹುಕಾಲ ಬದುಕ್ತೀರಿ” ಅಂದ.
ಇದನ್ನ ಕೇಳಿ ಶ್ರೀಮಂತನಿಗೆ ತುಂಬಾ ಖುಷಿಯಾಯ್ತು. “ಎಷ್ಟು ಖುಷಿ ಪಡೋ ವಿಷಯ ಇದು! ಮೊನ್ನೆ ಒಬ್ಬ ಹಾಳು ಜ್ಯೋತಿಷಿ ಏನೆಂದ ಗೊತ್ತಾ? ಬೇಡ ಬಿಡು, ಈಗ್ಯಾಕೆ… ” ಅನ್ನುತ್ತಾ ತಲೆ ಕೊಡವಿಕೊಂಡು ಇವನಿಗೆ ಹಣ, ಉಡುಗೊರೆ ಎಲ್ಲಾ ನೀಡಿ ಸತ್ಕಾರ ಮಾಡಿ ಕಳಿಸಿದ.
ಸರಿಯಾಗಿ ಗಮನಿಸಿ. ವಾಸ್ತವದಲ್ಲಿ ಜ್ಯೋತಿಷಿ ಹೇಳಿದ ಎರಡೂ ಮಾತುಗಳ ಅರ್ಥ ಒಂದೇ. ಶ್ರೀಮಂತನ ಆಯಸ್ಸು ಜಾಸ್ತಿ ಮತ್ತು ಆತನ ಕುಟುಂಬದ ಇತರರ ಆಯಸ್ಸು ಕಡಿಮೆ. ದೀರ್ಘಾಯುಗಳು ಅಲ್ಪಾಯುಷಿಗಳ ಸಾವಿನ ನಷ್ಟವನ್ನು ಭರಿಸಲೇಬೇಕಾಗುತ್ತದೆ. ಇದನ್ನೇ ಮೊದಲ ಸಲ ಹೇಳುವಾಗ ಜ್ಯೋತಿಷಿ “ನಿನ್ನ ಕುಟುಂಬದವರೆಲ್ಲ ನಿನ್ನ ಕಣ್ಣೆದುರೇ ಸಾಯುತ್ತಾರೆ” ಅಂದ. ಬೀರಬಲ್ಲನ ಸಲಹೆಯಂತೆ ಎರಡನೇ ಬಾರಿ ಹೇಳುವಾಗ “ನೀನು ನಿನ್ನ ಕುಟುಂಬದವರೆಲ್ಲರಿಗಿಂತ ಹೆಚ್ಚು ಕಾಲ ಬದುಕುತ್ತೀಯ” ಅಂದ. ಮೊದಲನೆ ಹೇಳಿಕೆಯಲ್ಲಿ ನಕಾರಾತ್ಮಕ ಭಾವನೆಗಳನ್ನು ಬಡಿದೆಬ್ಬಿಸುವ ‘ಸಾವು’, ಎರಡನೆ ಹೇಳಿಕೆಯಲ್ಲಿ ಸಕಾರಾತ್ಮಕ ಸಂತಸವನ್ನು ನೀಡುವ ‘ಬದುಕು’ ಅನ್ನುವ ಪದಪ್ರಯೋಗವೇ ಪ್ರಧಾನ. ಅದಕ್ಕೆ ತಕ್ಕಂತೆ ಹೊಮ್ಮಿತ್ತು ಶ್ರೀಮಂತನ ಪ್ರತಿಕ್ರಿಯೆ. ಜ್ಯೋತಿಷಿಯ ಕಿವಿಯಲ್ಲಿ “ಸತ್ಯವನ್ನೇ ಆಡು, ಪ್ರಿಯವಾಗಿ ಆಡು” ಅಂತಷ್ಟೇ ಹೇಳಿದ್ದು ಬೀರಬಲ್. ಈ ಪ್ಲಾನ್ ಜ್ಯೋತಿಷಿಗೆ ವರ್ಕ್ ಔಟ್ ಆಯ್ತು. ಕಳೆದ ಸಲ ಕುತ್ತಿಗೆ ಹಿಡಿದು ದಬ್ಬಿಸಿಕೊಂಡಿದ್ದವನು ಈ ಸಲ ಉಡುಗೊರೆ ಪಡ್ಕೊಂಡು ಹೊರಬಂದ!
ನಾವಾದ್ರೂ ಆ ಶ್ರೀಮಂತನ ಹಾಗೇ ತಾನೆ? ಸತ್ಯ ಕಹಿ ಅಂತ ಅದನ್ನ ದೂರ ತಳ್ಳಿಬಿಡ್ತೀವಿ. ನಷ್ಟ ನಮಗೇನೇ. ಆದ್ರಿಂದಲೇ ತಿಳಿದವರು, ಹಿರಿಯರು ಅದದೇ ಸತ್ಯವನ್ನ ಸಿಹಿಮಾತಿನ ಲೇಪ ಹಚ್ಚಿ ಕೊಟ್ಟಿರೋದು. ತಿರುಳು ಒಂದೇ ಆಗಿದ್ದರೂ ಅದರ ಹೊದಿಕೆಗೆ ತಕ್ಕಂತೆ ನಮ್ಮ ಪ್ರತಿಕ್ರಿಯೆ ಇರುತ್ತೆ. ಶುಗರ್ ಕೋಟೆಡ್ ಮಾತ್ರೆಗಳ ಹಾಗೆ – ಒಳಗೆ ಕಹಿಯೇ ಇದ್ರೂ ಅದರ ಹೊದಿಕೆ ನಾವದನ್ನ ನುಂಗೋಹಾಗೆ ಮಾಡುತ್ತೆ. ಮಾತ್ರೆಯನ್ನಾದ್ರೂ ವಾಸ್ತವ – ಸತ್ಯವನ್ನಾದ್ರೂ ಸಾಧ್ಯವಾದಷ್ಟು ಸಹ್ಯಗೊಳಿಸಿಕೊಂಡರಷ್ಟೆ ನಮಗೆ ನುಂಗಲು ಸಾಧ್ಯ. ಬೀರಬಲ್ ಜ್ಯೋತಿಷಿಗೆ ಗುಟ್ಟಿನಲ್ಲಿ ಹೇಳಿದ್ದೂ ಅದನ್ನೇ. ಇರೋ ವಿಷಯಾನೇ ಹೇಳ್ತಿದ್ರೂ – ಅದು ಒಳ್ಳೆಯದೇ ಆಗಿರಲಿ, ಕೆಟ್ಟದೇ ಆಗಿರಲಿ; ಅದನ್ನ ಹೇಳೋ ಬಗೆ ಪಾಸಿಟಿವ್ ಆಗಿದ್ರೆ ನಮಗೂ ಲಾಭ.
ನಾವು ಮಾತಾಡುವಾಗ ಸಾಧ್ಯವಾದಷ್ಟೂ ಸೂಕ್ಷ್ಮವಾಗಿರಬೇಕು. ಕೇಳುತ್ತಿರುವವರಲ್ಲಿ ನಕಾರಾತ್ಮಕ ಚಿಂತನೆಗಳನ್ನಾಗಲೀ, ದ್ವೇಷವನ್ನಾಗಲೀ ಬಿತ್ತೋಹಾಗೆ ಇರಬಾರದು. “ನುಡಿದರೆ ಮುತ್ತಿನ ಹಾರದಂತಿರಬೇಕು” ಅಂದಿದಾರಲ್ಲ ಬಸವಣ್ಣ? ಆಡೋ ಮಾತನ್ನೇ ಕೇಳೋರಿಗೆ ಸಹ್ಯವಾಗೋ ಹಾಗೆ, ಸವಿಯಾಗೋ ಹಾಗೆ ಆಡಿದ್ರೆ ನಮ್ಮ ಗಂಟೇನು ಹೋಗೋದು? “ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜನ್ತವಃ / ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ?” ಅನ್ನುವ ಸುಭಾಷಿತ ಕೇಳೋದೂ ಇದನ್ನೇ. ಒಳ್ಳೇ ಮಾತಿಂದ ಎಲ್ಲರಿಗೂ ಖುಷಿಯಾಗೋದಾದ್ರೆ ಅದನ್ನೇ ಆಡೋಣ, ಮಾತಿಗೇನು ಬಡತನ ಅಂತ. ನಮಗೂ ಇವೆಲ್ಲಾ ಗೊತ್ತಿದ್ರೂ ನಮ್ಮ ಅಹಂಕಾರ, ಮತ್ತೊಬ್ರನ್ನ ಕೆರಳಿಸೋ ಹಾಗೆ ಮಾಡಿಬಿಡತ್ತೆ. ಮತ್ತೊಬ್ಬರನ್ನ ಮಾತಲ್ಲೇ ಚುಚ್ಚಿ, ನೋಯಿಸಿ, ಹತಾಶಗೊಳಿಸಿ ನಮ್ಮ ಗರ್ವ ತಣಿಸಿಕೊಳ್ಳೋದು ನಮ್ಮ ಹೆಚ್ಚುಗಾರಿಕೆಯಲ್ಲ, ದೊಡ್ಡ ದೌರ್ಬಲ್ಯ.
ನಾವಾಡೋ ಪ್ರತಿ ಮಾತೂ ಮೂರು ಬಾಗಿಲುಗಳನ್ನ ಹಾದು ಬರಬೇಕು ಅನ್ನುತ್ತೆ ಕುರಾನ್. ಮೊದಲನೇ ಬಾಗಿಲಲ್ಲಿ ನಮ್ಮ ಮನಸ್ಸು ನಾನು ಆಡ್ತಿರೋ ಮಾತು ಸತ್ಯಾನಾ ಅಂತ ಕೇಳಿಕೊಳ್ಬೇಕಂತೆ. ಆಮೇಲೆ ಮುಂದಿನ ಹೆಜ್ಜೆ. ಎರಡನೇ ಬಾಗಿಲಲ್ಲಿ, ಆ ಮಾತು ಸತ್ಯವಾಗಿದ್ರೂ ಅದನ್ನ ಆಡೋ ಅಗತ್ಯ ಇದೆಯಾ ಅಂತ ಕೇಳಿಕೊಳ್ಬೇಕಂತೆ. ಹೌದು ಅಂತಾದ್ರೆ ಮಾತ್ರ ಮತ್ತೊಂದು ಹೆಜ್ಜೆ. ಮೂರನೇ ಬಾಗಿಲಲ್ಲಿ ನಮ್ಮ ಆ ಮಾತು ದಯಾಪೂರ್ಣವಾಗಿದ್ಯಾ? ಅಂತ ಕೇಳಿಕೊಳ್ಬೇಕಂತೆ. ನಮ್ಮ ಮಾತು ಸತ್ಯವೇ ಆಗಿದ್ರೂ ಅಗತ್ಯವೇ ಆಗಿದ್ರೂ ಅದು ಕಂಪಾಶನೇಟ್ ಆಗಿರದಿದ್ರೆ, ಅದು ಕಟುವಾಗಿದ್ರೆ ಅದನ್ನ ಆಡೋದೇ ಬೇಕಾಗಿಲ್ಲ. ಆ ಮಾತು ಕೇಳುಗರಿಗೆ ಸಹ್ಯವಾಗಿದ್ರೆ ಮಾತ್ರ, ಅವರನ್ನ ಘಾಸಿಗೊಳಿಸದಿದ್ರೆ ಮಾತ್ರ ಆಡಬೇಕು ಅನ್ನುತ್ತೆ ಕುರಾನ್.

