ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
42 ಕೆಂಪು ಮಣ್ಣು
ʻನನ್ನ ಬೇರು ಈ ಕೆಂಪು ಮಣ್ಣಿನಲ್ಲಿ ಆಳವಾಗಿ ಊರಿಕೊಂಡಿವೆ. ನಾನು ನಿನಗೆ ಹಣ್ಣು ಕೊಡುತ್ತೇನೆ,ʼ ಅಂದಿತು ಒಂದು ಮರ.
ʻನೀನೂ ನಾನೂ ಒಂದೇ. ನನ್ನ ಬೇರೂ ಕೂಡಾ ಇದೇ ಕೆಂಪು ಮಣ್ಣಿನಲ್ಲಿ ಆಳವಾಗಿ ಊರಿವೆ. ನನಗೆ ಹಣ್ಣು ನೀಡುವ ಶಕ್ತಿಯನ್ನು ಈ ಮಣ್ಣು ನಿನಗೆ ಕೊಟ್ಟಿದೆ, ನೀನು ಕೊಟ್ಟದ್ದನ್ನು ಕೃತಜ್ಞತೆಯಿಂದ ಒಪ್ಪಿಸಿಕೊಳ್ಳಲು ನನಗೆ ಕಲಿಸಿದೆ,ʼ ಎಂದು ನುಡಿದ ಮನುಷ್ಯ.
43 ಪ್ರವಾದಿ ಸಂನ್ಯಾಸಿ
ಒಂದು ಕಾಲದಲ್ಲಿ ಸಂನ್ಯಾಸಿ ಬದುಕು ಸಾಗಿಸುತ್ತಿದ್ದ ಪ್ರವಾದಿಯೊಬ್ಬನಿದ್ದ. ಮೂರು ತಿಂಗಳಿಗೆ ಒಂದು ಸಲ ಅವನು ನಗರಕ್ಕ ಬಂದು, ಪೇಟೆ ಬೀದಿಯಲ್ಲಿ ನಿಂತು ದಾನ ನೀಡುವ ಬಗ್ಗೆ, ಉಣ್ಣುವ ಆಹಾರ ಹಂಚಿಕೊಳ್ಳುವುದರ ಮಹತ್ವದ ಬಗ್ಗೆ ಬೋಧನೆ ಮಾಡುತ್ತಿದ್ದ. ಅವನಾಡುವ ಮಾತು, ಅವನ ಹೆಸರು ಇಡೀ ರಾಜ್ಯದಲ್ಲಿ ಪ್ರಸಿದ್ಧವಾಗಿತ್ತು.
ಒಂದು ದಿನ ಸಂಜೆ ಮೂರು ಜನ ಅವನ ಆಶ್ರಮಕ್ಕೆ ಬಂದರು. ಪ್ರವಾದಿ ಅವರನ್ನು ಕುಳ್ಳಿರಿಸಿ ಮಾತಾಡಿಸಿದ.
ʻನೀವು ದಾನದ ಮಹತ್ವ, ಇರುವುದನ್ನು ಹಂಚಿಕೊಳ್ಳುವುದರ ಮಹತ್ವದ ಬಗ್ಗೆ ಬೋಧನೆ ಮಾಡುತ್ತೀರಿ. ಇಲ್ಲದವರಿಗೆ ನೀಡುವುದು ಮುಖ್ಯವೆಂದು ಹೇಳುತ್ತೀರಿ. ನಿಮಗೆ ದೇಶದಲ್ಲೆಲ್ಲ ಕೀರ್ತಿ ಇದೆ. ಖಂಡಿತವಾಗಲೂ ನಿಮ್ಮ ಬಳಿ ಸಂಪತ್ತು ಇರಲೇಬೇಕು. ದಯವಿಟ್ಟು ನಮಗೆ ಕೊಡಿ, ಬಹಳ ಕಷ್ಟದಲ್ಲಿದ್ದೇವೆ,ʼ ಎಂದು ಕೇಳಿದರು ಅವರು.
ʻಗೆಳೆಯರೇ, ಈ ಚಾಪೆ, ಈ ಹೊದಿಕೆ, ಮತ್ತೆ ಈ ನೀರಿನ ಹೂಜಿ ಬಿಟ್ಟರೆ ನನ್ನ ಬಳಿ ಮತ್ತೇನೂ ಇಲ್ಲ. ನಿಮಗೆ ಅಗತ್ಯವಿದ್ದರೆ ಧಾರಾಳವಾಗಿ ತೆಗೆದುಕೊಳ್ಳಿ. ನನ್ನ ಹತ್ತಿರ ಬೆಳ್ಳಿ, ಬಂಗಾರ ಏನೂ ಇಲ್ಲ, ಅಂದ ಸಂನ್ಯಾಸಿ.
ಬಂದವರು ಅವನತ್ತ ತಿರಸ್ಕಾರದ ನೋಟ ಬೀರಿದರು. ಅಸಹ್ಯದಿಂದ ಮುಖ ತಿರುಗಿಸಿಕೊಂಡರು. ಹೊರಟರು. ಬಾಗಿಲಲ್ಲಿ ತಡೆದು ನಿಂತ ಮೂರನೆಯವನು, ʻಏಯ್ ಸಂನ್ಯಾಸಿ, ನೀನೊಬ್ಬ ಮೋಸಗಾರ. ದಗಾಕೋರ. ನಿನ್ನ ಕೈಯಲ್ಲಿ ಮಾಡಕ್ಕಾಗದೇ ಇರೋದನ್ನೆಲ್ಲ ಜನಕ್ಕೆ ಬೋಧನೆ ಮಾಡುತ್ತೀಯಾ!ʼ ಎಂದು ಹೇಳಿ ಹೊರಟು ಹೋದ.

