ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಒಂದಾನೊಂದು ಕಾಲದಲ್ಲಿ ಒಬ್ಬ ಸಾಹುಕಾರ ಇದ್ದ. ಅವನ ಮನೆಯಲ್ಲಿ ಬಗೆಬಗೆಯ ವೈನ್ ಗಳ ಸಂಗ್ರಹಕ್ಕೆಂದೇ ದೊಡ್ಡ ನೆಲಮಾಳಿಗೆ ಇತ್ತು. ಅದರ ಬಗ್ಗೆ ಅವನಿಗೆ ತುಂಬ ಹೆಮ್ಮೆಯೂ ಇತ್ತು. ಅಲ್ಲೊಂದು ಜಾಡಿಯಲ್ಲಿ ಬಹಳ ಹಳೆಯ ಕಾಲದ ವೈನ್ ತುಂಬಿಸಿಟ್ಟಿದ್ದರು. ಯಾವ ಸಂದರ್ಭದಲ್ಲಿ ಅದನ್ನು ಬಳಸಬೇಕು ಅನ್ನುವುದು ಸಾಹುಕಾರನಿಗೆ ಮಾತ್ರ ಗೊತ್ತಿತ್ತೋ ಏನೋ.
ದೇಶದ ರಾಜ್ಯಪಾಲ ಅವನ ಮನೆಗೆ ಭೇಟಿ ನೀಡಿದ್ದ. ʻಈಗ ಬಳಸಲೇ ಹಳೆಯ ಮದ್ಯ?ʼ ಸಾಹುಕಾರ ಯೋಚನೆ ಮಾಡಿ, ʻಇವನು ಬರೀ ರಾಜ್ಯಪಾಲ. ಆ ವೈನ್ ಬಳಸಲು ಸೂಕ್ತ ಸಂದರ್ಭವಲ್ಲ,ʼ ವೆಂದು ತೀರ್ಮಾನ ಮಾಡಿದ.
ಆಮೇಲೊಂದು ದಿನ ಇಡೀ ಪ್ರಾಂತದ ಬಿಷಪ್ ಬಂದಿದ್ದ. ʻಇಲ್ಲ, ಈಗಲೂ ಆ ವೈನ್ ಕೊಡುವುದು ಬೇಡ. ಬಿಷಪ್‌ಗೆ ಅದರ ಮೌಲ್ಯ ತಿಳಿದಿಲ್ಲ, ಅದರ ಪರಿಮಳ ಕೂಡ ಅವನನ್ನು ಸೋಕುವುದಿಲ್ಲ,ʼ ಅಂದುಕೊಂಡ.
ಕೆಲವು ತಿಂಗಳ ನಂತರ ರಾಜಕುಮಾರ ಸಾಹುಕಾರನ ಮನೆಗೆ ಬಂದ. ʻಇಂಥ ಅಮೂಲ್ಯ ವೈನ್! ರಾಜಕುಮಾರನ ಅಂತಸ್ತಿಗಿಂತ ತುಂಬ ಮೇಲ್ಮಟ್ಟದ್ದು. ಹಾಗೇ ಇರಲಿ,ʼ ಅಂದುಕೊಂಡ.
ಸಾಹುಕಾರನ ಸೋದರಳಿಯನ ಮದುವೆಯಾಯಿತು. ಆಗ ಕೂಡ, ʻಈ ಅತಿಥಿಗಳಿಗಾಗಿ ಇಂಥ ಅಮೂಲ್ಯ ವೈನ್ ಬಳಸಿ ದಂಡ ಮಾಡುವುದು ಬೇಡ,ʼ ಅಂದ ಸಾಹುಕಾರ.
ವರ್ಷಗಳು ಉರುಳಿದವು. ಸಾಹುಕಾರ ಸತ್ತುಹೋದ. ವಯಸಾಗಿದ್ದ ಬಡಕಲು ಮೈ. ಹೊಲದಲ್ಲಿ ಬೀಜ ಬಿತ್ತುವ ಹಾಗೆ ಅವನ ಮೈಯನ್ನು ಮಣ್ಣಿಗಿಟ್ಟರು.
ಅವನು ಸತ್ತ ನಂತರದ ಕ್ರಿಯಾ ಕರ್ಮಗಳೆಲ್ಲ ಮುಗಿದವು. ಅಕ್ಕಪಕ್ಕದ ರೈತರೆಲ್ಲ ಬಂದಿದ್ದರು. ಎಷ್ಟೋ ವೈನ್ ಜಾಡಿಗಳ ಜೊತೆಗೆ ಈ ಅತೀ ಹಳೆಯ ವೈನ್ ಜಾಡಿಯನ್ನೂ ತಂದು ಎಲ್ಲರಿಗೂ ವೈನ್ ಕೊಟ್ಟರು.
ಆ ವೈನ್ ಎಷ್ಟು ಪ್ರಾಚೀನ, ಎಷ್ಟು ಅಮೂಲ್ಯವೆಂದು ಯಾರಿಗೂ ತಿಳಿಯಲೇ ಇಲ್ಲ.

