ಎಲ್ಲಿಯೂ ಸುರಕ್ಷತೆ ಎನ್ನುವುದಿಲ್ಲ. ಬದುಕು ಅಸುರಕ್ಷಿತ ಮತ್ತು ಇದಕ್ಕೆ ಆಧಾರವಾಗಿ ಏನೂ ಇಲ್ಲ, ಇದು ಆಧಾರವಿಲ್ಲದೇ ಇರುವಂಥದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರೇಮಕ್ಕೆ ತನ್ನ ಖ್ಯಾತಿಯ ಬಗ್ಗೆ
ಅಂಥ ಕಾಳಜಿ ಏನಿಲ್ಲ,
ಬರುವಾಗ ಹರಿತ ಚೂರಿಯೊಂದಿಗೆ
ಬರುತ್ತದೆಯೇ ಹೊರತು
ಸಂಕೋಚದ ಪ್ರಶ್ನೆಗಳ ಜೊತೆಗಲ್ಲ.
ಈ ಮಾತುಗಳನ್ನ ಹೇಳಿ
ನಿಮ್ಮನ್ನು ಬೆಚ್ಚಿ ಬೀಳಿಸಬೇಕು ಎನ್ನುವ
ಯಾವ ಆಸಕ್ತಿಯೂ ನನಗಿಲ್ಲ,
ದಯವಿಟ್ಟು ಅಂತಃಕರಣದಿಂದ
ಒಪ್ಪಿಸಿಕೊಳ್ಳಿ.
ಬೆತ್ತಲಾಗಿ, ವಿಷ ಕುಡಿದು,
ಈಗ ತಣ್ಣಗೆ ಸರ್ವನಾಶಕ್ಕೆ ಸಿದ್ಧವಾಗಿ,
ತನ್ನ ಹುಚ್ಚು ಯೋಜನೆಗಳನ್ನು
ಕಾರ್ಯರೂಪಕ್ಕೆ ತರಲು
ಎಲ್ಲ ತಂತ್ರಗಳನ್ನೂ ಬಳಸುತ್ತಿದೆ
ಚಾಣಾಕ್ಷ ಉನ್ಮಾದಿ ಪ್ರೇಮ.
ಪುಟ್ಟ ಜೇಡ
ಭಯಂಕರ ಚೇಳನ್ನು ಕಟ್ಟಿ ಹಾಕುತ್ತದೆ.
ಪ್ರವಾದಿ ಮಲಗಿದ ಗುಹೆಯ ಸುತ್ತ ಹೆಣೆಯಲಾದ
ಜೇಡರ ಬಲೆಯನ್ನು ನೆನಪಿಸಿಕೊಳ್ಳಿ.
ಪ್ರೇಮದಲ್ಲಿ ಹೇಗೆ
ಮುದ ನೀಡುವ ಕಥೆಗಳಿವೆಯೋ
ಹಾಗೆಯೇ ಗುರುತು ಕೂಡ ಇರದಂತೆ
ಒರೆಸಿ ಹಾಕುವ ಅನಾಹುತಗಳೂ ಉಂಟು.
ಒದ್ದೆಯಾಗಬಾರದೆಂದು
ಧರಿಸಿದ ಅರಿವೆಗಳನ್ನು
ಮೊಣ ಕಾಲವರೆಗೆ ಎತ್ತಿಕೊಂಡು
ಸಮುದ್ರದ ತೀರದಲ್ಲಿ ಪ್ರಯಾಣ ಮಾಡುತ್ತಿದ್ದೀರಿ.
ಆಳಕ್ಕೆ ಧುಮುಕಬೇಕು ನೀವು
ಸಾವಿರ ಪಟ್ಟು ಆಳಕ್ಕೆ.
~ ರೂಮಿ
ಸುರಕ್ಷತೆಯನ್ನು ಬಯಸುವಾಗಲೇ ನೀವು ಸಮಸ್ಯೆಯೊಂದನ್ನು ಸೃಷ್ಟಿ ಮಾಡಿಕೊಂಡುಬಿಟ್ಟಿದ್ದೀರಿ. ಹೆಚ್ಚು ಸುರಕ್ಷತೆಯನ್ನು ಬಯಸಿದಂತೆಲ್ಲ ನೀವು ಹೆಚ್ಚು ಹೆಚ್ಚು ಅಸುರಕ್ಷಿತರಾಗುತ್ತ ಹೋಗುತ್ತೀರಿ ಏಕೆಂದರೆ, ಅಸುರಕ್ಷತೆ ಎನ್ನುವುದು ಬದುಕಿನ ಸಹಜ ಸ್ವಭಾವ. ನೀವು ಸುರಕ್ಷತೆಯನ್ನು ಬಯಸದೇ ಹೋದಾಗಲೆಲ್ಲ ಯಾವ ಅಸುರಕ್ಷತೆಯೂ ನಿಮ್ಮನ್ನು ಕಾಡುವುದಿಲ್ಲ. ಹೇಗೆ ಗಿಡ ಮರಗಳ ಬಣ್ಣ ಹಸಿರೋ ಹಾಗೆಯೇ ಬದುಕು ಅಸುರಕ್ಷಿತ. ನೀವು ಬೀಳಿ ಬಣ್ಣದ ಮರಗಳನ್ನು ಬಯಸುತ್ತಿದ್ದೀರಾದರೆ ಸಮಸ್ಯೆಯೊಂದನ್ನು ಹುಟ್ಟುಹಾಕುತ್ತಿದ್ದೀರಿ. ಸಮಸ್ಯೆಯನ್ನು ಹುಟ್ಟು ಹಾಕಿದ್ದು ನೀವು ಆ ಮರಗಳಲ್ಲ ಏಕೆಂದರೆ, ಅವುಗಳ ಬಣ್ಣ ಯಾವಾಗಲೂ ಹಸಿರು. ನೀವು ಬಯಸಿದಂತೆ ಬಿಳೀ ಮರಗಳಾಗುವುದು ಅವುಗಳಿಗೆ ಸಾಧ್ಯವಿಲ್ಲ.
ಬದುಕು ಅಸುರಕ್ಷಿತ ಹಾಗೆಯೇ ಪ್ರೇಮ ಕೂಡ. ಮತ್ತು ಅದು ಹಾಗಿರುವುದೇ ಬಹಳ ಒಳ್ಳೆಯದು. ನೀವು ಜೀವಂತವಾಗಿ ಇಲ್ಲದಿರುವಾಗ ಮಾತ್ರ ಸುರಕ್ಷಿತರು ; ಆಗ ಎಲ್ಲವೂ ಖಚಿತ. ಬಂಡೆಗೆ ಆಧಾರವಾಗಿ ಇಡೀ ಭೂಮಿಯಿದೆ. ಹೂವಿಗೆ ಆಧಾರವೆನ್ನುವುದು ಏನೂ ಇಲ್ಲ ; ಹೂವು ಅಸುರಕ್ಷಿತ. ಒಂದು ಸಣ್ಣ ಗಾಳಿ ಕೂಡ ಹೂವನ್ನು ಮಾಯವಾಗಿಸಿಬಿಡಬಲ್ಲದು. ಹೂವು ಬದುಕಿರುವುದೇ ಒಂದು ಪವಾಡ. ಬದುಕು ಪವಾಡಸದೃಶ್ಯ ಏಕೆಂದರೆ ಅದಕ್ಕೆ ಇರಲಿಕ್ಕೆ ಯಾವ ಕಾರಣವೂ ಇಲ್ಲ. ಹಾಗೆಯೇ ನೀವು ಇರುವುದು ಕೂಡ ಪವಾಡ ಏಕೆಂದರೆ, ನೀವು ಇರುವುದಕ್ಕೆ ಕೂಡ ಯಾವ ಕಾರಣವಿಲ್ಲ. ಹಾಗೆ ನೋಡಿದರೆ ಪ್ರತಿಯೊಂದು ಕಾರಣವೂ ನೀವು ಇರದಿರುವುದನ್ನು ಬಂಬಲಿಸುತ್ತಿವೆ. ಇದನ್ನು ಒಪ್ಪಿಕೊಂಡಾಗ ಮಾತ್ರ, ಮತ್ತು ಒಪ್ಪಿಕೊಳ್ಳುವುದಷ್ಚೇ ಅಲ್ಲ ಇದನ್ನು ಸಂಭ್ರಮಿಸಿದಾಗ ಮಾತ್ರ ನೀವು ಪ್ರಬುದ್ಧರು.
ಒಂದು ಚೇಳು ನದಿಯ ದಂಡೆಯ ಮೇಲೆ ನಿಂತು, ಅತ್ತಿತ್ತ ನೋಡುತ್ತಿತ್ತು. ಆ ಚೇಳಿಗೆ ನದಿ ದಾಟಿ ಆಚೆಯ ದಂಡೆಗೆ ಹೋಗಬೇಕಿತ್ತು. ಚೇಳಿನ ಅದೃಷ್ಟ, ಕಪ್ಪೆಯೊಂದು ನೀರಿನಲ್ಲಿ ಈಜುತ್ತ ದಂಡೆಗೆ ಬಂತು.
“ ನನಗೊಂದು ಸಹಾಯ ಮಾಡುತ್ತೀಯ?” ಕೇಳಿತು ಚೇಳು. “ ನಾನು ನಿನ್ನ ಬೆನ್ನ ಮೇಲೆ ಕೂತುಕೊಳ್ಳುತ್ತೇನೆ. ನೀನು ನನ್ನನ್ನು ಆಚೆ ದಂಡೆಗೆ ಮುಟ್ಟಿಸು” ಚೇಳು, ಕಪ್ಪೆಯನ್ನು ಕೇಳಿಕೊಂಡಿತು.
“ ನನ್ನ ಹುಚ್ಚ ಅಂದ್ಕೊಡ್ಡಿದ್ದೀಯಾ, ನೀನು ದಾರಿಯಲ್ಲಿ ನನ್ನ ಕಚ್ಚಿದರೆ ನಾನು ಸತ್ತು ಹೋಗುತ್ತೇನೆ “ ಉತ್ತರಿಸಿತು ಕಪ್ಪೆ.
“ ಸ್ವಲ್ಪ ತರ್ಕ ಬದ್ಧವಾಗಿ ವಿಚಾರ ಮಾಡು, ದಾರಿಯಲ್ಲಿ ನೀನು ಸತ್ತರೆ ನಾನೂ ಕೂಡ ನದಿಯಲ್ಲಿ ಮುಳುಗಿ ಸತ್ತು ಹೋಗುತ್ತೇನಲ್ಲವೆ? “ ಚೇಳು, ತನ್ನ ವಿನಂತಿಯನ್ನು ಸಮರ್ಥಿಸಿಕೊಂಡಿತು.
“ ಹೌದಲ್ವಾ, ಬಾ ನನ್ನ ಬೆನ್ನ ಮೇಲೆ ಕೂಡು. ನಿನ್ನನ್ನು ಆಚೆ ದಡಕ್ಕೆ ಮುಟ್ಟಿಸುತ್ತೇನೆ “ ಕಪ್ಪೆ, ಚೇಳನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ನದಿಯಲ್ಲಿ ಈಜತೊಡಗಿತು.
ನದಿಯಲ್ಲಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಕಪ್ಪೆಗೆ ಯಾರೋ ತನ್ನ ಕುತ್ತಿಗೆಯನ್ನು ತೀಕ್ಷ್ಣವಾಗಿ ಕಚ್ಚಿದಂತೆ ಭಾಸವಾಯಿತು, ಕಪ್ಪೆಯ ಕಣ್ಣು ಮಂಜಾಗ ತೊಡಗಿತು. ಆಗ ಕಪ್ಪೆ, ತನ್ನ ಬೆನ್ನ ಮೇಲೆ ಕೂತಿದ್ದ ಚೇಳನ್ನು ಪ್ರಶ್ನೆ ಮಾಡಿತು.
“ ನೀನು ಹೇಳಿದ್ದೆ, ನಾನು ನಿನ್ನನ್ನು ನದಿ ದಾಟಿಸುತ್ತಿರುವಾಗ ನೀನು ಯಾವ ಕಾರಣಕ್ಕೂ ನನ್ನ ಕಚ್ಚಲಾರೆ ಅಂತ. ಹಾಗೇನಾದರೂ ಕಚ್ಚಿದರೆ ಅದು ನಿನ್ನ ಪ್ರಾಣಕ್ಕೇ ಸಂಚುಕಾರ ಅಂತ. ಮತ್ತು ಆ ಕ್ಷಣದಲ್ಲಿ ನನ್ನ ಕಚ್ಚುವುದು ತರ್ಕ ಬದ್ಧ ಕೂಡ ಅಲ್ಲ ಅಂತ. ಮತ್ತೆ ಯಾಕೆ ಕಚ್ಚಿದೆ?”
“ ನನಗೆ ಕಚ್ಚುವುದು ತರ್ಕದ ವಿಷಯ ಅಲ್ಲ , ಅದು ನನ್ನ ಸ್ವಭಾವ “ ಚೇಳು ಉತ್ತರಿಸಿತು.
ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/23/osho-481/

