ಸಾಕ್ರೆಟೀಸನಿಗೆ ಮಾತು ಕಲಿಸಿದ ನಗರವಧು, ‘ಪಂಡಿತೆ’ ಅಸ್ಪೇಸಿಯಾ

ಪ್ರತಿಷ್ಠಿತ ನಗರವಧುವಾಗಿ ಕೋಠಿ ನಡೆಸುತ್ತಿದ್ದ ಅಸ್ಪೇಸಿಯಾಳ ಆವಾಸದಲ್ಲಿ ಸದಾ ಪಂಡಿತರ ದಂಡು ನೆರೆದಿರುತ್ತಿತ್ತಂತೆ. ಬಂದವರೆಲ್ಲ ಅವಳ ಜೊತೆ ತರ್ಕ ನಡೆಸುವವರೇ, ವಾದ – ವಾಗ್ವಾದ ಹೂಡುವವರೇ. ಅವಳ ಖ್ಯಾತಿ ಅವಳ ಸೌಂದರ್ಯ ಮತ್ತು ಸೆಳೆತದ ಕಾರಣದಷ್ಟೇ ಅಥವಾ ಅದಕ್ಕಿಂತ ಹೆಚ್ಚು ಅವಳ ಬುದ್ಧಿವಂತಿಕೆಯ ಕುರಿತಾಗಿತ್ತು. ಅತ್ಯಂತ ಸಂಯಮಿ, ಅತ್ಯುತ್ತಮ ವಿಶ್ಲೇಷಕಿ ಮತ್ತು ಅಪ್ರತಿಮ ಮಾತುಗಾತಿ ಅನ್ನುವ ಗುರುತು ಅವಳದಾಗಿತ್ತು… । ಚೇತನಾ ತೀರ್ಥಹಳ್ಳಿ

ಏಷ್ಯಾ ಮೈನರ್ ಪ್ರದೇಶದಲ್ಲಿ ಹುಟ್ಟಿ ಬಾಲ್ಯ ಕಳೆದ ಸಾಧಾರಣ ಹೆಣ್ಣೊಬ್ಬಳು ಗ್ರೀಕ್ ಆಳರಸನ ಸಂಗಾತಿಯಾಗಿ, ಸಲಹೆಗಾತಿಯಾಗಿ, ಚಿಂತಕರ ಮಾರ್ಗದರ್ಶಿಯಾಗಿ, ತತ್ವಜ್ಞಾನಿಗಳ ಕಣ್ಮಣಿಯಾಗಿ ಬೆಳೆದ ಕತೆ…
ಕೇಳಿ ತಿಳಿದವರು ಬಹಳ ಕಡಿಮೆ. ಏಕೆಂದರೆ, ಆಕೆಯ ಕಾಲದಲ್ಲೇ ಆಕೆಯ ಹೆಸರಿಗೆ ಕಳಂಕ ಮೆತ್ತುವ, ಆಕೆಯ ಮಹತ್ವ ಕಡಿಮೆಗೊಳಿಸುವ ಹುನ್ನಾರ ದೊಡ್ಡ ಮಟ್ಟದಲ್ಲಿ ನಡೆದಿತ್ತು; ನಂತರ ಅನಾಯಾಸವಾಗಿ ಮುಂದುವರೆದು ಬಹುತೇಕ ಯಶಸ್ವಿಯಾಯಿತು ಕೂಡ.

ಆ ಹೆಣ್ಣಿನ ಹೆಸರು ಅಸ್ಪೇಸಿಯಾ. ಕ್ರಿ.ಪೂ.450ರ ಸುಮಾರಿಗೆ ಮಿಲೆಟಸ್ ಪ್ರಾಂತ್ಯದಿಂದ ಅಥೆನ್ಸಿಗೆ ವಲಸೆ ಹೋಗಿ, ಹೊರಗಿನವಳಾದ ಕಾರಣಕ್ಕೆ ಅಥೆನ್ಸಿನ ಗಂಡನ್ನು  ಮದುವೆಯಾಗುವ ಹಕ್ಕು ದೊರೆಯದೆ ನಗರವಧುವಾಗಿ, ಕೊನೆಗೆ ತನ್ನ ಅಸಾಧಾರಣ ಬುದ್ಧಿಮತ್ತೆ ಹಾಗೂ ನಡತೆಯಿಂದ, ಸೌಂದರ್ಯದಿಂದಲೂ ಕೂಡ – ರಾಜ ಪೆರುಕ್ಲೀಜ್’ನ ಮನ ಸೆಳೆದು ಗೌರವದ ಸ್ಥಾನ ಗಳಿಸಿಕೊಂಡ ದಿಟ್ಟೆ ಈಕೆ.

ರಾಜ ಪೆರುಕ್ಲೀಜ್ ತನ್ನ ರಾಣಿಗೆ ವಿಚ್ಛೇದನ ನೀಡಿದ ಮೇಲೆ ಅಸ್ಪೇಸಿಯಾಳನ್ನು ತನ್ನ ಹರೇಮಿನ ಯಜಮಾನಿಯಾಗಿ ಮಾಡಿಕೊಂಡ. ಅವಳಿಂದ ಸಂತಾನವನ್ನೂ ಪಡೆದ. ಇದು ನಗಣ್ಯ ವಿವರ. ಇವರ ಸಂಬಂಧದಲ್ಲಿ ಮುಖ್ಯವಾಗೋದು, ಪೆರುಕ್ಲೀಜ್ ಅಸ್ಪೇಸಿಯಾಳನ್ನು ತನ್ನ ಮಂತ್ರಿಯಂತೆ, ಆಪ್ತ ಸಮಾಲೋಚಕಿಯಂತೆ, ಸಲಹೆಗಾತಿಯಂತೆ ನಡೆಸಿಕೊಂಡ ಅನ್ನುವುದು.

ಪ್ರತಿಷ್ಠಿತ ನಗರವಧುವಾಗಿ ಕೋಠಿ ನಡೆಸುತ್ತಿದ್ದ ಅಸ್ಪೇಸಿಯಾಳ ಆವಾಸದಲ್ಲಿ ಸದಾ ಪಂಡಿತರ ದಂಡು ನೆರೆದಿರುತ್ತಿತ್ತಂತೆ. ಬಂದವರೆಲ್ಲ ಅವಳ ಜೊತೆ ತರ್ಕ ನಡೆಸುವವರೇ, ವಾದ – ವಾಗ್ವಾದ ಹೂಡುವವರೇ. ಅವಳ ಖ್ಯಾತಿ ಅವಳ ಸೌಂದರ್ಯ ಮತ್ತು ಸೆಳೆತದ ಕಾರಣದಷ್ಟೇ ಅಥವಾ ಅದಕ್ಕಿಂತ ಹೆಚ್ಚು ಅವಳ ಬುದ್ಧಿವಂತಿಕೆಯ ಕುರಿತಾಗಿತ್ತು. ಅತ್ಯಂತ ಸಂಯಮಿ, ಅತ್ಯುತ್ತಮ ವಿಶ್ಲೇಷಕಿ ಮತ್ತು ಅಪ್ರತಿಮ ಮಾತುಗಾತಿ ಅನ್ನುವ ಗುರುತು ಅವಳದಾಗಿತ್ತು. ಅವಳ ಕಾಲದಲ್ಲೇ ಜೀವಿಸಿದ್ದ ಸಾಕ್ರೆಟೀಸ್, “ಮಾತಾಡುವ ಕಲೆಯನ್ನು ನಾನು ಕಲಿತಿದ್ದೇ ಆಸ್ಪೇಸಿಯಾಳಿಂದ. ಅವಳು ನನ್ನ ಗುರು” ಅಂತ ಹೇಳಿಕೊಂಡಿದ್ದಾನೆ. ಅವಳು ನೇರವಾಗಿ ಏನನ್ನೂ ಬರೆಯದಿದ್ದರೂ ಅವಳ ಸಮಕಾಲೀನರ ಬಹರಗಳಲ್ಲಿ ಅವಳವೆಂದು ಉಲ್ಲೇಖಗೊಂಡ ಸಾಲುಗಳು ಅವಳ ಬುದ್ಧಿವಂತಿಕೆಯ ಮಟ್ಟ ಅಳೆಯಲು ಸಾಕು. (ಅವುಗಳಲ್ಲಿ ಆಯ್ದ 5 ಹೊಳಹನ್ನು ಇಲ್ಲಿ ನೀಡಲಾಗಿದೆ…). ಪೆರುಕ್ಲೀಜನದೆಂದು ಹೇಳಲಾಗುವ ‘ಫನರಲ್ ಒರೇಶನ್’ ವಾಸ್ತವದಲ್ಲಿ ಅಸ್ಪೇಸಿಯಾಳೇ ಬರೆದಿದ್ದೆಂಬ ವಾದಗಳಿವೆ.

ಅಸ್ಪೇಸಿಯಾ ಪೆರುಕ್ಲೀಜನ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತಿದ್ದುದು ಪುರುಷಾಹಂಕಾರದ ಪಂಡಿತರಿಗೆ ನುಂಗಲಾರದ ತುತ್ತಾಗಿತ್ತು. ಅವಳ ಸಮಕಾಲೀನ ಪಂಡಿತರು ಮತ್ತು ಇತಿಹಾಸಕಾರರಲ್ಲಿ ಅವಳನ್ನು ತೆಗಳಿದವರೇ ಹೆಚ್ಚು.

ನಂತರದವರೂ ಅಷ್ಟೇ. ಪೆರುಕ್ಲೀಜನ ಸಾಧನೆಗಳನ್ನು ಹಾಡಿ ಹೊಗಳುವ ಗ್ರೀಕ್ ಚಿಂತಕ ಪ್ಲುಟಾರ್ಕ್, ಅವನ ತಪ್ಪು ನಿರ್ಧಾರಗಳಿಗೆ ಅಸ್ಪೇಸಿಯಾಳನ್ನು ಹೊಣೆಯಾಗಿಸಿದ್ದ. ಇನ್ನು ಕೆಲವರು ಪೆಲೊಪೊನೇಸಿಯನ್ ಯುದ್ಧಕ್ಕೆ ಅವಳನ್ನೇ ಹೊಣೆಯಾಗಿಸಿ, ಅವಳ ಕೋಠಿಯ ಇಬ್ಬರು ವೇಶ್ಯೆಯರನ್ನು ಹೊತ್ತೊಯ್ದ ಕಾರಣಕ್ಕೆ ಅವಳು ಯುದ್ಧ ಮಾಡಿಸಿದಳು ಅನ್ನುತ್ತಾರೆ. ಅದು ನಿಜವೇ ಆಗಿದ್ದರೂ ಹೆಣ್ಣುಗಳಿಬ್ಬರನ್ನು ಶತ್ರುಗಳ ಕೈಲಿ ನರಳಲು ಬಿಡದೆ ಕರೆಸಿಕೊಳ್ಳುವ ಸಲುವಾಗಿ ಯುದ್ಧದ ಕಿಡಿ ಹೊತ್ತಿಸಿದವಳ ಕೆಚ್ಚೆದೆ ಅಚ್ಚರಿ ಮೂಡಿಸದಿರದು. ಇನ್ನು ಕೆಲವರ ಪ್ರಕಾರ ಇದು ಸುಳ್ಳು ಆರೋಪ. ಅಸ್ಪೇಸಿಯಾಳನ್ನು ಸಂಯಮಿ ಎಂದು ಹೊಗಳಿರುವ ಹಿನ್ನೆಲೆಯಲ್ಲಿ ನೋಡಿದರೆ, ಈ ಆರೋಪದಲ್ಲಿ ಹುರುಳಿಲ್ಲ ಅನಿಸದಿರದು.

ಕ್ರೇಟಿನಸ್, ಯುಪೋಲಿಸ್, ಹರ್ಮಿಪ್ಪಸ್ ಇತ್ಯಾದಿ ಪ್ರಾಚೀನ ಗ್ರೀಕ್ ಚಿಂತಕರ ದೊಡ್ಡ ದಂಡೇ ಅವಳ ಮೇಲೆ ಕೆಂಡ ಕಾರುತ್ತಿತ್ತು. (ಅವರ ಬರಹ ಮತ್ತು ಹೇಳಿಕೆಗಳಲ್ಲಿ ಇದು ಸ್ಪಷ್ಟವಾಗಿದೆ. ಇವರೆಲ್ಲರೂ ನೇರವಾಗಿಯೇ, ಅವಳ ಹೆಸರು ಹಿಡಿದೇ ತಮ್ಮ ವಿಕೃತಿ ತೋಡಿಕೊಂಡಿರೋದು ಕೆಲವು ಆಕರಗಳಲ್ಲಿ ಕಂಡಿತು) ಅಷ್ಟಾದರೂ ಅಸ್ಪೇಸಿಯಾಳ ಕುರಿತು ಸಾಮಾನ್ಯ ಗ್ರೀಕರ ಪ್ರೀತಿ ಕಡಿಮೆಯಾಗಿರಲಿಲ್ಲ. ಇದರಿಂದಲೇ ಅವಳ ನಿಜಸತ್ವ ಅರಿಯಬಹುದು ಅನ್ನಿಸುತ್ತದೆ.

ಅಸ್ಪೇಸಿಯಾಳ ಕಾಲದ ಅದೆಷ್ಟೋ ಶತಮಾನಗಳ ನಂತರ ಅವಳ ನಿಜ ರೂಪ ಅರಿಯುವ ಪ್ರಯತ್ನ ಆರಂಭವಾಯ್ತು. ಹತ್ತನೇ ಶತಮಾನದ ಬೈಜಾಂಟಿಯನ್ ವಿಶ್ವಕೋಶದಲ್ಲಿ ಅವಳನ್ನು ‘ಅಳೆದು ತೂಗಿ ಮಾತನಾಡುವ ಜಾಣ್ಮೆ ಇರುವವಳು’ ಎಂದು ಉಲ್ಲೇಖಿಸಲಾಗಿದೆ. ಹಾಗೂ ಆಕೆಯನ್ನು ಪೆರುಕ್ಲೀಜನ ಮನದನ್ನೆ ಮತ್ತು ಗುರುವೆಂದೂ ಸಮಿಯಾನ್ ಮತ್ತು ಪೆಲೊಪೊನ್ನೇಸಿಯನ್ ಯುದ್ಧಗಳ ಕಾರಣಕರ್ತಳೆಂದೂ ಹೇಳಲಾಗಿದೆ.

ಅದೇನೇ ಇರಲಿ, ಪ್ರಾಚೀನ ಗ್ರೀಸ್’ನ ಪ್ರಮುಖ ತತ್ವಚಿಂತಕರು, ಅದರಲ್ಲೂ ಪ್ಲೇಟೋ ಮತ್ತು ಸಾಕ್ರೆಟೀಸ್’ನಂಥವರೊಡನೆ ಸಂವಾದ ನಡೆಸಿದಂಥವಳು ಅಸ್ಪೇಸಿಯಾ. ವಾಗ್ದೇವಿಯಂತಿದ್ದ ಈಕೆ ನನಗೆ ಮಾತು ಕಲಿಸಿದಳೆಂದು ಖುದ್ದು ಸಾಕ್ರೆಟಿಸ್ ಹೇಳಿಕೊಂಡಿದ್ದಾನೆಂದರೆ, ಇವಳ ಸತ್ವ ಎಷ್ಟು ಗಾಢವಾಗಿದ್ದಿರಬಹುದು, ಊಹಿಸಿ.

ಜಗತ್ತಿನ ಇತಿಹಾಸದಲ್ಲಿ ಇಂಥ ಸಾಧಕಿಯರು, ಚಿಂತಕಿಯರು, ಪಂಡಿತೆಯರು ಅದೆಷ್ಟೋ. ಪುರುಷರು ಬರೆದಿಟ್ಟ ಇತಿಹಾಸದ ಪುಟಗಳಲ್ಲಿ ಹೆಣ್ಣಿಗೆ ಜಾಗದ ಕೊರತೆ. ಆದರೇನು? ಅಸ್ಪೇಸಿಯಾ ಮತ್ತು ಅವಳಂಥವರು ಗಾಳಿಯಲ್ಲೂ ಹೆಸರು ಕೆತ್ತಬಲ್ಲವರು. ಹಾಗೆಂದೇ ಎರಡು ಸಾವಿರ ವರ್ಷಗಳ ನಂತರವೂ ಅವಳು ನೆನಪಲ್ಲಿ ಉಳಿದಿರುವುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.