ಸಾಧಾರಣ ಗುಣಮಟ್ಟ (Mediocrity) : ಓಶೋ 365 #Day 41

ಯಾವತ್ತೂ mediocrity ( ಸಾಧಾರಣ ಗುಣಮಟ್ಟ) ಯನ್ನು ಒಪ್ಪಿಕೊಳ್ಳಬೇಡಿ ಏಕೆಂದರೆ, ಇದು ಬದುಕಿನ ವಿರುದ್ಧ ನೀವು ಮಾಡುವ  ಪಾಪ. ಬದುಕು ಅಪಾಯದಿಂದ (risk) ಹೊರತಾಗಿರಬೇಕು ಎಂದು ಯಾವಾಗಲೂ ಅಪೇಕ್ಷಿಸಬೇಡಿ, ಯಾವತ್ತೂ ಸುರಕ್ಷತೆಯನ್ನು ನಿರೀಕ್ಷಿಸಬೇಡಿ ಏಕೆಂದರೆ ಅದು ಸಾವನ್ನು ಆಹ್ವಾನಿಸಿದಂತೆ  ~ ಓಶೋ ರಜನೀಶ್ ; ಕನ್ನಡಕ್ಕೆ: ಚಿದಂಬರ ನರೇಂದ್ರ

ಬಹಳಷ್ಟು ಜನರು ತಗ್ಗು ದಿನ್ನೆಗಳಿಲ್ಲದ ಸಮತಟ್ಟಾದ ನೆಲದ ಮೇಲೆ ಯಾವ ರಿಸ್ಕ್ ಗಳನ್ನು ತೆಗೆದುಕೊಳ್ಳದಂತೆ ಸುರಕ್ಷಿತವಾಗಿ ಇರಲು ಬಯಸುತ್ತಾರೆ. ಅವರು ಯಾವತ್ತೂ ಎತ್ತರಗಳನ್ನು ಹತ್ತಬಯಸುವುದಿಲ್ಲ ಆಳಗಳಲ್ಲಿ ಇಳಿಯಬಯಸುವುದಿಲ್ಲ. ಅವರ ಬದುಕು ನಿರಸ, ಯಾವ ಸವಾಲುಗಳಿಲ್ಲದ ಏಕತಾನತೆಯ ವ್ಯವಹಾರ. ಅವರು ಯಾವ ಬಣ್ಣಗಳಿಲ್ಲದ ಗ್ರೇ ಜಗತ್ತಿನಲ್ಲಿರಲು ಬಯಸುತ್ತಾರೆ. ಅವರ ಬದುಕಿನಲ್ಲಿ ಕಾಮನಬಿಲ್ಲು ಇಲ್ಲ. ಮತ್ತು ಈ ಕಾರಣವಾಗಿಯೇ ಅವರು ಸಾಧಾರಣದರ್ಜೆಯ ಬದುಕಿಗೆ ಸೀಮಿತಗೊಳ್ಳುತ್ತಾರೆ.

ದೈವಿಕತೆಯ ಶಿಖರಗಳನ್ನು ಮುಟ್ಟುವ  ಮತ್ತು ನರಕದ ಪಾತಾಳಕ್ಕೆ ಜಾರುವ ಅಪಾಯದಲ್ಲಿ ನೀವು ಭಯವನ್ನು ಕಳೆದುಕೊಳ್ಳುತ್ತೀರ. ಈ ಎರಡರ ನಡುವೆ ಸರಾಗವಾಗಿ ಪಯಣಿಸುವ ನಿರ್ಭಯ ಪ್ರಯಾಣಿಕರಾಗುತ್ತೀರ. ಆಗ ನಿಮಗೆ ಮೀರುವಿಕೆಯ ( transcendence) ಚೆಲುವಿನ ಬಗ್ಗೆ ಅರಿವಾಗುತ್ತದೆ. ಆಗ ನಿಮಗೆ, ನೀವು ಆಳವೂ ಅಲ್ಲ ಎತ್ತರವೂ ಅಲ್ಲ ಎನ್ನುವ ತಿಳುವಳಿಕೆ ಸಾಧ್ಯವಾಗುತ್ತದೆ. ಆಗ ನಿಮಗೆ ಸಾಕ್ಷಿಪ್ರಜ್ಞೆಯ ಗುಣ ಪ್ರಾಪ್ತವಾಗುತ್ತದೆ. ಆಗ ನೀವು ಯಾವ ಜಡ್ಜಮೆಂಟ್ ಗಳಿಗೂ ಮುಂದಾಗದೇ ಕೇವಲ ಸಾಕ್ಷಿಯಾಗಿ ಉಳಿದುಕೊಳ್ಳುತ್ತೀರ.

ಎರಡೂ ಧ್ರುವಗಳೂ ನಿಮ್ಮಲ್ಲಿವೆ ಆದರೆ ನೀವು ಈ ಎರಡಕ್ಕೂ ಅಂಟಿಕೊಳ್ಳದೆ ಎರಡನ್ನೂ ಮೀರಿದ ಸಾಕ್ಷಿತನವನ್ನು ನಿಮ್ಮದಾಗಿಸಿಕೊಂಡಿದ್ದೀರ. ಸ್ವರ್ಗ ಮತ್ತು ನರಕ ಎರಡೂ ನಿಮ್ಮೊಳಗಿದ್ದಾಗಲೂ ನೀವು ಈ ಎರಡರಿಂದಲೂ ದೂರವಾಗಿದ್ದೀರ. ಈ ಮಹಾ ಆಟವನ್ನು ನೀವು ಸುಮ್ಮನೇ ಗಮನಿಸುತ್ತಿದ್ದೀರ, ಪ್ರಜ್ಞೆ ಆಡಿಸುತ್ತಿರುವ ಇಡಿಯಾದ ನಾಟಕವನ್ನ.

ತನ್ನನ್ನು ಕಾಣಲು ಬಂದಿದ್ದ ಮೀಡಿಯಾಕರ್  ಯುವ ಕವಿಗೆ ಅವನು ಓದಲು ಕೊಟ್ಟಿದ್ದ ಕವಿತೆಗಳು ಕಟ್ಟು ಹಿಂತಿರುಗಿಸುತ್ತ ಹಿರಿಯ ಕವಿ ನಸ್ರುದ್ದೀನ್ ಸಲಹೆ ನೀಡಿದ,

“ನಿನ್ನ ಕವಿತೆಗಳು ಬಹಳ ಥಂಡಾ ಇವೆ. ಕವಿತೆ ನಿನಗೆ ಸಾಧ್ಯವಾಗುವ ಮಾಧ್ಯಮ ಅಲ್ಲ, ಬೇರೆ ಏನಾದರೂ ನಿನಗೆ ಇಷ್ಟ ಆಗುವ ಕೆಲಸ ಮಾಡು”

ನಸ್ರುದ್ದೀನ್ ನ ಮಾತಿನಿಂದ ಬಹಳ ನಿರಾಶನಾದ ಯುವಕವಿ ಪ್ರಶ್ನೆ ಮಾಡಿದ.

“ ಹಿರಿಯರೇ, ಹಾಗಾದರೆ ನನ್ನ ಕವಿತೆಗಳಲ್ಲಿ ಇನ್ನಷ್ಟು ಫೈರ್ ಸೇರಿಸಲೆ?  “

“ ಕವಿತೆಯಲ್ಲಿ ಫೈರ್ ಸೇರಿಸುವುದು ನಿನಗೆ ಸಾಧ್ಯ ಆಗಲಿಕ್ಕಿಲ್ಲ. ನನ್ನ ಮಾತು ಕೇಳುವ ಹಾಗಿದ್ದರೆ, ನೀನು ರಿವರ್ಸ್ ಮಾಡು “

ನಸ್ರುದ್ದೀನ್ ಉತ್ತರಿಸಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.