ಜನರ ಕಿವುಡು ಹರಿಯುವವರೆಗೂ …

ಪ್ರತಿಯೊಂದು ವಾಟ್ಸಪ್ ಫಾರ್ವರ್ಡಿಗೂ ಒಂದು ನೋಟಿನ ತಪ್ಪು ಕಾಣಿಕೆ. ಆಸ್ತಿಕರ ಸುಳ್ಳುಗಳಿಗೆ ಮನೆ ದೇವರ ಮೈತುಂಬ ಮುಳ್ಳು. ಚಿತ್ರಗುಪ್ತ ಲೆಕ್ಕ ತಪ್ಪುವನೇ? ಕಾಗೆಗಿಟ್ಟ ಪಿಂಡ, ಹಸುವಿನ ಬಾಲಗಳು ನಮ್ಮನ್ನು ವೈತರಣಿ ದಾಟಿಸುವುದಿಲ್ಲ. ರಕ್ತದ ನದಿ ದಾಟಿಸುವುದು; ಅಸಿಪತ್ರ ವನದಲ್ಲಿ ನಮ್ಮ ತಲೆ ಕಾಯುವುದು, ಪಾದದಡಿ ರಕ್ಷೆಯಾಗುವುದು ನಮ್ಮ ನಮ್ಮ ನಿಜಾಯಿತಿಯಷ್ಟೇ ~ ಚೇತನಾ ತೀರ್ಥಹಳ್ಳಿ । ಅರಳಿಮರ

ಋತಸ್ಯ ಹಿ ಶುರುಧಃಸನ್ತಿ
ಪೂರ್ವೀಋತಸ್ಯ ಧೀತಿಃ ವೃಜಿನಾನಿ ಹನ್ತಿ ।
ಋತಸ್ಯ ಶ್ಲೋಕೋ ಬಧಿರಾ ತತರ್ದ
ಕರ್ಣಾ ಬುಧಾನಃ ಶುಚಮಾನ ಆಯೋಃ ॥

~ ಜನರ ಕಿವುಡು ಹರಿಯುವವರೆಗೂ ಸತ್ಯವನ್ನು ಪ್ರಚಾರ ಮಾಡಿ ಅನ್ನುತ್ತೆ ಋಗ್ವೇದ.

ಸತ್ಯಕ್ಕೆ ಹಲವು ಧಾರೆಗಳು. ಅವೆಲ್ಲವೂ (ಸುಳ್ಳುಗಳ) ಪಾಪವನ್ನು ತೊಳೆಯುವವು. ಸತ್ಯವನ್ನು ಮೇಲಿಂದ ಮೇಲೆ ಪ್ರಚಾರ ಮಾಡುವುದರಿಂದ ಜನರ (ಒಳಗಿವಿಯ) ಕಿವುಡು ಹರಿದು ಸುಳ್ಳು ಅಳಿಯುವುದು – ಇದು ಇಡೀ ಶ್ಲೋಕದ ತಾತ್ಪರ್ಯ.

ಯುಧಿಷ್ಠಿರ ಹೇಳಿದ ಪೂರ್ಣ ಸತ್ಯ ಕೇಳಿಸದಂತೆ ಕೃಷ್ಣ ಶಂಖ ಊದಿದ. ಕರ್ಮ ಫಲ, ಅವನ ಇಡೀ ಕುಲ ಕ್ಷುಲ್ಲಕವಾಗಿ ಹೊಡೆದಾಡಿಕೊಂಡು ಸತ್ತಿತು. ಪೂರ್ಣ ಸತ್ಯ ತಿಳಿಸದಿರುವುದೇ ಇಷ್ಟು ಪಾಪವಾದರೆ, ಸುಳ್ಳು ಹೇಳುವುದು ಇನ್ನೆಷ್ಟು ದೊಡ್ಡ ಪಾಪ!?

ನಾಸ್ತಿಕರಿಗೆ ಸತ್ಯ ಹೇಳುವುದು ಒಂದು ಬದ್ಧತೆ ಮಾತ್ರ. ಆಸ್ತಿಕರ ಪಾಲಿಗೆ ಅದು ಧರ್ಮ. ಬದ್ಧತೆ ಕೆಟ್ಟರೆ ಕೆಟ್ಟ ಹೆಸರಷ್ಟೇ. ಧರ್ಮಗೇಡಿಯಾದರೆ?
ಅಥವಾ ಸುಳ್ಳು ಹೇಳುವವರು ಧಾರ್ಮಿಕರೇ ಅಲ್ಲ, ಕೇವಲ ಢಾಂಬಿಕರು.
ಹುಸಿಯ ನುಡಿಯಲುಬೇಡ ಅನ್ನುತ್ತಾರೆ ಬಸವಣ್ಣ. ಎಲ್ಲ ಮತ ಧರ್ಮಗಳ ಪ್ರಕಾರವೂ ಸುಳ್ಳಾಡದೆ ಇರುವುದು ಬಹಳ ದೊಡ್ಡ ವರ್ಚ್ಯೂ. ಅದರಲ್ಲೂ ಧಾರ್ಮಿಕರ ಪಾಲಿಗೆ, ಆಸ್ತಿಕರ ಪಾಲಿಗೆ.
ಏಕೆಂದರೆ ಸತ್ಯ, ಅಂದರೆ ಋತ, ಆತ್ಯಂತಿಕ ಅಸ್ತಿತ್ವದ ಮೂಲ ಗುಣ. ವೇದಗಳ ಪ್ರಕಾರವೂ ಪುರಾಣಗಳ ತಿರುಳಿನ ಪ್ರಕಾರವೂ ಜನಪದ ಕತೆಗಳ ಪ್ರಕಾರವೂ ಪರಬ್ರಹ್ಮ ನೆಲೆಸಿರುವುದೇ ಋತದಲ್ಲಿ; ದೇವರು ನೆಲೆಸಿರುವುದೇ ಸತ್ಯದಲ್ಲಿ.
ಸುಳ್ಳಾಡಿದ ಕ್ಷಣವೇ ಆ ವ್ಯಕ್ತಿ ನಾಸ್ತಿಕ. ಸುಳ್ಳಾಡಿದ ಕ್ಷಣವೇ ಆ ವ್ಯಕ್ತಿ ದೈವ ವಿರೋಧಿ. ಸುಳ್ಳಾಡಿದ ಕ್ಷಣವೇ ಆ ವ್ಯಕ್ತಿ ಧರ್ಮ ದ್ರೋಹಿ.

ಸುಳ್ಳಾಡುವುದು ಯುದ್ಧ ನೀತಿಗಳಲ್ಲೊಂದು ಎಂದೆಲ್ಲ ಚಾಣಕ್ಯನ ಹೆಸರಲ್ಲಿ ಕೋಟ್ ಬರೆಯಬಹುದು. ಆದರೆ, ಸುಳ್ಳುಗಳನ್ನೇ ಆಯುಧ ಮಾಡಿಕೊಂಡರೆ, ಅದು ಹಿಡಿದವರ ಕೈಯನ್ನೇ ಕೊಳೆಸುವುದು; ಇಂದಲ್ಲ ನಾಳೆ.
ಅರ್ಧ ಸತ್ಯ ಹೇಳಿದ ಯಾದವನನ್ನೇ ಅದು ಬಿಡಲಿಲ್ಲ ಅಂದ ಮೇಲೆ…!
ಇಷ್ಟಕ್ಕೂ ಸತ್ವ ಇಲ್ಲದವರಷ್ಟೇ, ತಮ್ಮಲ್ಲಿ ಸತ್ಯ ಇಲ್ಲದವರಷ್ಟೇ ಈ ಪರಿ ಸುಳ್ಳಿನ ಮೊರೆ ಹೋಗುವುದು.
ಸುಳ್ಳಾಡುವವರಿಗೆ, ಹರಡುವವರಿಗೆ, ಅದನ್ನು ನಂಬುವವರಿಗೆ ಮತ್ತು ಮೆಚ್ಚುವವರಿಗೆ ತಮ್ಮ ಈ ದೌರ್ಬಲ್ಯ ಚೂರಾದರೂ ನಾಚಿಕೆ ತರಿಸೋದಿಲ್ಲವೆ?
ಪ್ರತಿಯೊಂದು ವಾಟ್ಸಪ್ ಫಾರ್ವರ್ಡಿಗೂ ಒಂದು ನೋಟಿನ ತಪ್ಪು ಕಾಣಿಕೆ.
ಆಸ್ತಿಕರ ಸುಳ್ಳುಗಳಿಗೆ ಮನೆ ದೇವರ ಮೈತುಂಬ ಮುಳ್ಳು.
ಚಿತ್ರಗುಪ್ತ ಲೆಕ್ಕ ತಪ್ಪುವನೇ?

ಋತಸ್ಯ ಶ್ಲೋಕೋ ಬಧಿರಾ ತತರ್ದ…

ಸುಳ್ಳುಗಳ ಪಾಪ ಕಳೆಯಬೇಕೆಂದರೆ ಸತ್ಯವನ್ನು ಪ್ರಚಾರ ಮಾಡಿ. ಸುಳ್ಳರನ್ನು ಕುರುಡಾಗಿ ನಂಬಿ ಕುಳಿತವರ ಕಿವುಡು ಹರಿಯುವವರೆಗೂ ಸತ್ಯವನ್ನು ಕೂಗಿ ಕೂಗಿ ಹೇಳಿ.
ಕಾಗೆಗಿಟ್ಟ ಪಿಂಡ, ಹಸುವಿನ ಬಾಲಗಳು ನಮ್ಮನ್ನು ವೈತರಣಿ ದಾಟಿಸುವುದಿಲ್ಲ.
ರಕ್ತದ ನದಿ ದಾಟಿಸುವುದು; ಅಸಿಪತ್ರ ವನದಲ್ಲಿ ನಮ್ಮ ತಲೆ ಕಾಯುವುದು, ಪಾದದಡಿ ರಕ್ಷೆಯಾಗುವುದು ನಮ್ಮ ನಮ್ಮ ನಿಜಾಯಿತಿಯಷ್ಟೇ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.