ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಎಷ್ಟೋ ಶತಮಾನಗಳ ಹಿಂದೆ, ಅಥೆನ್ಸ್ ನಗರಕ್ಕೆ ಹೋಗುವ ದಾರಿಯಲ್ಲಿ ಇಬ್ಬರು ಕವಿಗಳು ಮುಖಾಮುಖಿಯಾದರು. ಅವರ ಸಂಭಾಷಣೆ ಹೀಗೆ ನಡೆಯಿತು.
ʻಇತ್ತೀಚೆಗೆ ಏನು ಬರೆದಿರಿ? ಅದಕ್ಕೆ ಸಂಗೀತ ಸಂಯೋಜನೆ ಆಯಿತೇ?ʼ ಎಂದು ಒಬ್ಬಾತ ಕೇಳಿದ.
ಇನ್ನೊಬ್ಬ ಕವಿಯ ಮಾತಿನಲ್ಲಿ ಹೆಮ್ಮ ಇತ್ತು. ʻಕಳೆದ ವಾರವಷ್ಟೇ ನನ್ನ ಮಹಾಕೃತಿಯನ್ನು ರಚಿಸಿ ಮುಗಿಸಿದೆ. ಗ್ರೀಕ್ ಭಾಷೆಯಲ್ಲೇ ಇಂಥ ಮಹಾನ್ ಕೃತಿ ಬಂದಿರಲಾರದು, ಮುಂದೆ ಬರಲಾರದು. ದೇವಾಧಿದೇವ ಸ್ಯೂಸ್‌ನನ್ನು ಆಹ್ವಾನಿಸುವ ಕವಿತೆ ಅದು,ʼ ಎಂದು ನುಡಿದ. ʻಬಾ, ಈ ಸೈಪ್ರಸ್ ಮರದ ಕೆಳಗೆ ಕೂರೋಣ. ಓದಿ ಹೇಳುತ್ತೇನೆ, ಕೇಳು,ʼ ಅನ್ನುತ್ತಾ ಮರದ ಕೆಳಗೆ ಕೂತ.
ಕವಿತೆ ಓದಿದ. ತುಂಬಾ ದೀರ್ಘವಾಗಿತ್ತು. ಅದನ್ನು ಕೇಳಿದ ಇನ್ನೊಬ್ಬ ಕವಿ ಸೌಜ್ಯನ್ಯಕ್ಕಾಗಿ, ʻಇದು ಮಹಾಕಾವ್ಯ. ಅನೇಕ ಶತಮಾನಗಳ ಕಾಲ ಬದುಕಿರುತ್ತದೆ. ನಿಮಗೆ ಕೀರ್ತಿ ಬರುತ್ತದೆ,ʼ ಅಂದ.
ಮೊದಲನೆಯ ಕವಿ ತಣ್ಣನೆಯ ದನಿಯಲ್ಲಿ ಕೇಳಿದ, ʻನೀವೇನು ಬರೆದಿರಿ ಇತ್ತೀಚೆಗೆ?ʼ
ʻಹೆಚ್ಚೇನೂ ಬರೆದಿಲ್ಲ. ಬರೀ ಎಂಟು ಸಾಲು ಅಷ್ಟೇ ಬರೆಯಲು ಸಾಧ್ಯವಾಗಿದ್ದು. ಉದ್ಯಾನದಲ್ಲಿ ಆಡುತ್ತಿದ್ದ ಮಗುವಿನ ನೆನಪಿಗೆ ಬರೆದದ್ದು,ʼ ಎಂದು ಹೇಳಿ ಎಂಟು ಸಾಲಿನ ಪದ್ಯ ಓದಿದ.
ಮೊದಲನೆ ಕವಿ ʻಪರವಾಗಿಲ್ಲ, ಪರವಾಗಿಲ್ಲ, ಚೆನ್ನಾಗೇ ಇದೆ,ʼ ಅನ್ನುತ್ತ ತಲೆದೂಗಿದ.
ಇಬ್ಬರೂ ಅವರವರ ದಾರಿ ಹಿಡಿದು ಹೊರಟು ಹೋದರು.
ಎರಡು ಸಾವಿರ ವರ್ಷ ಕಳೆದಿವೆ. ಎಂಟು ಸಾಲಿನ ಕವಿತೆಯನ್ನು ಇವತ್ತೂ ಜನ ಹೇಳಿಕೊಳ್ಳುತ್ತಿದ್ದಾರೆ. ಇಷ್ಟಪಡುತ್ತಿದ್ದಾರೆ. ಮಹಾಕಾವ್ಯ ಕೂಡ ಉಳಿದಿದೆ, ಗ್ರಂಥಾಲಯಗಳಲ್ಲಿ, ವಿದ್ವಾಂಸರ ಕಪಾಟುಗಳಲ್ಲಿ. ಅದನ್ನು ಜನ ಇನ್ನೂ ಮರೆತಿಲ್ಲ, ಆದರೆ ಯಾರೂ ಇಷ್ಟಪಡಲ್ಲ, ಓದಲ್ಲ.

