ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಒಬ್ಬಾತ ತೋಟದಲ್ಲಿ ದಾಳಿಂಬರೆ ಗಿಡಗಳನ್ನು ಬೆಳೆಸಿದ್ದ. ಎಲೆ ಉದುರುವ ಕಾಲ ಬಂದಾಗ ದಾಳಿಂಬರೆ ಹಣ್ಣುಗಳನ್ನು ಬಿಡಿಸಿ ತಂದು, ಮನೆಯ ಮುಂದೆ ಬೆಳ್ಳಿಯ ತಟ್ಟೆಯಲ್ಲಿ ಅವನ್ನೆಲ್ಲ ಜೋಡಿಸಿಟ್ಟು, ʻಅಗ್ಯವಿದ್ದವರು ತೆಗೆದುಕೊಳ್ಳಬಹುದು,ʼ ಎಂದು ಗೋಡೆಯ ಮೇಲೆ ಕೈಯಾರೆ ಬರೆಯುತ್ತಿದ್ದ. ಬೀದಿಯಲ್ಲಿ ಓಡಾಡುವ ಜನ ಯಾರೂ ಹಣ್ಣು ಎತ್ತಿಕೊಳ್ಳುತ್ತಲೇ ಇರಲಿಲ್ಲ.
ಹೀಗೇ ಕಾಲ ಕಳೆಯಿತು. ಒಂದು ವರ್ಷ ಅವನಿಗೊಂದು ಯೋಚನೆ ಬಂತು. ಹಣ್ಣುಗಳನ್ನು ಬೆಳ್ಳಿಯ ತಟ್ಟೆಯಲ್ಲಿ ಇರಿಸಿದ. ಆದರೆ ʻನಮ್ಮಲ್ಲಿ ದೇಶದಲ್ಲೇ ಅತ್ಯುತ್ತಮ ದಾಳಿಂಬರೆ ದೊರೆಯುತ್ತದೆ. ಒಂದು ಬೆಳ್ಳಿಯ ನಾಣ್ಯಕ್ಕೆ ಬೇರೆಯವರು ಕೊಡುವುದಕ್ಕಿಂತ ಹೆಚ್ಚು ದಾಳಿಂಬರೆ ಕೊಡುತ್ತೇವೆ,ʼ ಎಂದು ಬರೆದ ಬೋರ್ಡು ಹಾಕಿದ್ದ.
ಗಂಡಸರು, ಹೆಂಗಸರು ಓಡೋಡಿ ಬಂದು ಸಾಲಾಗಿ ನಿಂತು ದಾಳಿಂಬರೆ ಖರೀದಿ ಮಾಡಿದರು.

