ನಮ್ಮ ನಿಜದ ಮನೆಯನ್ನು ಕಂಡುಕೊಳ್ಳುವ ತನಕ ನಾವು ಪ್ರಯಾಣ ಮಾಡುತ್ತಲೇ ಇರಬೇಕಾಗುತ್ತದೆ, ಹುಡುಕಾಡುತ್ತಲೇ ಇರಬೇಕಾಗುತ್ತದೆ. ಆದರೆ ಆಶ್ಚರ್ಯಕರ ಸಂಗತಿ ಎಂದರೆ ನಮ್ಮ ನಿಜದ ಮನೆ ನಮ್ಮಿಂದ ಬಹಳ ದೂರವೇನಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ನನ್ನ ಮನೆ ಹೇಳಿತು.
“ಬಿಟ್ಟು ಹೋಗಬೇಡ ನನ್ನ
ನನ್ನೊಳಗೆ ನಿನ್ನ ಪರಂಪರೆಯೇ ಅಡಗಿದೆ.”
ರಸ್ತೆ ಹೇಳುತ್ತದೆ
“ಬಾ, ನನ್ನ ಹಿಂಬಾಲಿಸು
ನಾನು ನಿನ್ನ ಭವಿಷ್ಯ”
ಮನೆ ಮತ್ತು ರಸ್ತೆಗೆ
ಏನು ಗೊತ್ತು?
ನನಗೆ ಇತಿಹಾಸದ ಪರಿವಿಲ್ಲ
ಭವಿಷ್ಯದ ಭಯವಿಲ್ಲವೆಂದು.
ಇರುವಿಕೆಯಲ್ಲಿಯೂ
ನಾನು ಜಂಗಮ
ಹೋಗುವಿಕೆಯಲ್ಲಿಯೂ
ಸ್ಥಾವರ.
ಪ್ರೀತಿ ಮತ್ತು ಸಾವು
ಮಾತ್ರ
ಇದನ್ನು ಬದಲಾಯಿಸಬಲ್ಲದು.
~ ಖಲೀಲ್ ಜಿಬ್ರಾನ್
ಬಹಳಷ್ಟು ಮನೆಗಳನ್ನು ಕಟ್ಟಿಕೊಳ್ಳುತ್ತೇವಾದರೂ, ನಮ್ಮ ನಿಜದ ಮನೆಯತ್ತ ನಾವು ಕಣ್ಣೆತ್ತಿಯೂ ನೋಡುವುದಿಲ್ಲ. ನಾವು ಕಟ್ಟಿಕೊಳ್ಳುವ ಮನೆಗಳು ಸ್ವೇಚ್ಛಾನುಸಾರ ಕಟ್ಟಿಕೊಂಡಿದ್ದು ; ಅವು ಮರಳಿನ ಕೋಟೆಗಳು ಅಥವಾ ಇಸ್ಪೇಟಿನ ಕಾರ್ಡುಗಳಿಂದ ಕಟ್ಟಿದ ಅರಮನೆಗಳು : ಕೇವಲ ಆಟಕ್ಕೆ ಮಾತ್ರ ಉಪಯೋಗಕ್ಕೆ ಬರುವಂಥವು. ಅವು ನಿಜದ ಮನೆಗಳಲ್ಲ, ಏಕೆಂದರೆ ಸಾವು ಈ ಎಲ್ಲವನ್ನೂ ನಾಶ ಮಾಡಿಬಿಡುತ್ತದೆ.
ನಿಜದ ಮನೆಯ ಅರ್ಥ ಏನೆಂದರೆ ಇದು ಶಾಶ್ವತವಾದದ್ದು. ಕೇವಲ ದೇವರು ಮಾತ್ರ ಶಾಶ್ವತ, ಬಾಕಿ ಎಲ್ಲವೂ ತಾತ್ಕಾಲಿಕ. ಈ ದೇಹ ತಾತ್ಕಾಲಿಕ, ನಮ್ಮ ಬುದ್ಧಿ-ಮನಸ್ಸು ತಾತ್ಕಾಲಿಕ, ಹಣ, ಅಧಿಕಾರ, ಪ್ರತಿಷ್ಠೆ ಎಲ್ಲವೂ ತಾತ್ಕಾಲಿಕ. ಇವುಗಳಿಂದ ನಿಮ್ಮ ಮನೆಯನ್ನು ಕಟ್ಚಿಕೊಳ್ಳಬೇಡಿ. ನಾನು ಅವುಗಳ ವಿರೋಧಿಯಲ್ಲ. ಇವನ್ನು ಬಳಕೆ ಮಾಡಿ, ಆದರೆ ನಿಮಗೆ ನೆನಪಿರಲಿ, ಇವು ತಾತ್ಕಾಲಿಕ, overnight stay ಗೆ ಮಾತ್ರ ಸೂಕ್ತ, ಮತ್ತೆ ಮುಂಜಾನೆ ನಾವು ಗಂಟುಮೂಟೆ ಕಟ್ಟಲೇ ಬೇಕು.
ನಾವು ನಮ್ಮ ನಿಜದ ಮನೆಯಿಂದ ತಪ್ಪಿಸಿಕೊಳ್ಳುತ್ತಿದ್ದೇವೆ ಏಕೆಂದರೆ ಅದು ನಮಗೆ ಬಹಳ ಹತ್ತಿರದಲ್ಲಿದೆ, ಅದು ನಮ್ಮೊಳಗೇ ಇದೆ ಆದರೆ, ನಾವು ಬೇರೆಲ್ಲೋ ಹುಡುಕಾಡುತ್ತಿದ್ದೇವೆ. ನಿಮ್ಮ ನಿಜದ ಮನೆಗಾಗಿ ನಿಮ್ಮೊಳಗೇ ಹುಡುಕಾಡಿ, ಹೀಗೆ ಪ್ರಯತ್ನ ಮಾಡಿದವರೆಲ್ಲ ಖಂಡಿತವಾಗಿಯೂ ಯಶಸ್ವಿಗಳಾಗಿದ್ದಾರೆ.
ಒಮ್ಮೆ ಒಬ್ಬ ಪ್ರವಾಸಿ, ಝೆನ್ ಮಾಸ್ಟರ್’ ನ ಮನೆಗೆ ಬಂದ. ಅಲ್ಲಿ ಕೇವಲ ಒಂದು ಟೇಬಲ್ ಮತ್ತು ಒಂದು ಖುರ್ಚಿ ನೋಡಿದ ಪ್ರವಾಸಿಗೆ ಆಶ್ಚರ್ಯವಾಯಿತು.
ಪ್ರವಾಸಿ : ಬೇರೆ ಫರ್ನೀಚರ್ ಎಲ್ಲ ಎಲ್ಲಿ ಮಾಸ್ಟರ್ ?
ಮಾಸ್ಟರ್ : ಯಾಕೆ? ನಿನ್ನ ಫರ್ನೀಚರ್ ಎಲ್ಲಿ?
ಪ್ರವಾಸಿ : ನನ್ನ ಫರ್ನೀಚರ್ ? ನಾನು ಪ್ರವಾಸಿ, ಸುಮ್ಮನೇ ಇಲ್ಲಿಂದ ಹಾಯ್ದು ಹೋಗುತ್ತಿದ್ದೆ.
ಮಾಸ್ಟರ್ : ನಾನೂ ಅಷ್ಟೇ.

