ಇಂದು ಅಥವಾ ನಾಳೆ ಖಂಡಿತ ಬಹಿರಂಗದ ಬಡತನ ಮಾಯವಾಗುತ್ತದೆ. ಹೊರಗಿನ ಬಡತನವನ್ನು ಕಾಣೆಯಾಗಿಸಲು ಬೇಕಾಗುವಂಥ ಸಾಕಷ್ಟು ತಂತ್ರಜ್ಞಾನ ಈಗ ಲಭ್ಯವಿದೆ, ಇದು ಹೊಸ ಸಮಸ್ಯೆಯೊಂದರ ಸೃಷ್ಟಿಗೆ ಕಾರಣವಾಗಲಿದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭಗವಂತ,
ಮಂದಿರ, ಮಸಿದಿ, ಚರ್ಚುಗಳಿಗೆ
ಸೀಮಿತನಲ್ಲವಾದ್ದರಿಂದ,
ಬ್ರಹ್ಮಾಂಡದ ಯಾವುದರ ಮುಖಾಂತರವೂ,
ಯಾರ ಮೂಲಕವೂ
ನೀವು ಅವನನ್ನು ತಲುಪಬಹುದು.
ಆದರೂ ನಿಮಗೆ
ಅವನ ಖಾಸಾ ಮನೆಯನ್ನು ಹುಡುಕುವ
ಹುಕಿ ಇದ್ದರೆ,
ನಿಜದ ಪ್ರೇಮಿಯ
ಹೃದಯದ ಬಾಗಿಲನ್ನ ತಟ್ಟಿ.
ಭಗವಂತನ ಮನೆ ಇರುವುದೇ ಅಲ್ಲಿ,
ಪ್ರೇಮ ಇರುವಲ್ಲಿ.
ಭಗವಂತನನ್ನು ಕೇಳುವ ಉಮೇದು ನಿಮಗಿದ್ದರೆ,
ಹೃದಯದಲ್ಲಿ ಪಿಸುಗುಡುತ್ತಿರುವ
ಪ್ರೇಮದ ದನಿಗೆ ಕಿವಿಯಾಗಿ.
~ ಶಮ್ಸ್ ತಬ್ರೀಝಿ
ನಿಜವಾದ ಬಡವರು ಯಾರೆಂದರೆ, ಯಾರು ಪ್ರೀತಿಯಿಂದ ವಂಚಿತರಾಗಿದ್ದಾರೋ ಅವರು. ಮತ್ತು ಇಡೀ ಜಗತ್ತಿನಲ್ಲಿ ಬಹಳಷ್ಟು ಜನ ಪ್ರೀತಿಯ ಅಭಾವದಿಂದಾಗಿ ನರಳುತ್ತಿದ್ದಾರೆ. ಇಂದು ಅಥವಾ ನಾಳೆ ಖಂಡಿತ ಬಹಿರಂಗದ ಬಡತನ ಮಾಯವಾಗುತ್ತದೆ. ಹೊರಗಿನ ಬಡತನವನ್ನು ಕಾಣೆಯಾಗಿಸಲು ಬೇಕಾಗುವಂಥ ಸಾಕಷ್ಟು ತಂತ್ರಜ್ಞಾನ ಈಗ ಲಭ್ಯವಿದೆ, ಇದು ಹೊಸ ಸಮಸ್ಯೆಯೊಂದರ ಸೃಷ್ಟಿಗೆ ಕಾರಣವಾಗಲಿದೆ. ನಿಜವಾದ ಸಮಸ್ಯೆ ಅಂತರಂಗದ ಬಡತನದ್ದು. ಈ ಸಮಸ್ಯೆಯನ್ನು ಬಗೆಹರಿಸುವುದು ಯಾವ ತಂತ್ರಜ್ಞಾನಕ್ಕೂ ಸಾಧ್ಯವಾಗುವುದಿಲ್ಲ. ಜನರ ಹೊಟ್ಟೆಯ ಹಸಿವನ್ನು ನೀಗಿಸುವಷ್ಟು ಶಕ್ತರಾಗಿದ್ದೇವೆ ನಾವು ಆದರೆ, ಆತ್ಮ ಮತ್ತು ಚೇತನಗಳ ಹಸಿವನ್ನು ನೀಗಿಸುವುದು ಹೇಗೆ? ವಿಜ್ಞಾನದಿಂದ ಇದು ಸಾಧ್ಯವಿಲ್ಲ, ಬೇರೆ ಹೊಸದೇನೋ ಒಂದು ಬೇಕು. ಮತ್ತು ಆ ಹೊಸ ವಿಶೇಷವನ್ನೇ ನಾನು ಧರ್ಮ ಎಂದು ಹೇಳುತ್ತೇನೆ. ವಿಜ್ಞಾನ ತನ್ನ ಕೆಲಸ ಮಾಡಿಯಾಗಿದೆ ; ಈಗ ಮಾತ್ರ ಧರ್ಮದ ಪ್ರವೇಶಕ್ಕೆ ಕಾಲ ಪ್ರಶಸ್ತವಾಗಿದೆ.
ಇಲ್ಲಿಯವರೆಗೂ ಧರ್ಮ ಕೇವಲ ಒಂದು ಅಪರೂಪದ ವಿಲಕ್ಷಣ ವಿದ್ಯಮಾನವಾಗಿತ್ತು. ಯಾವಾಗಲೋ ಒಮ್ಮೆ ಬುದ್ಧ, ಜೀಸಸ್, ಕೃಷ್ಣ ಕಾಣಿಸಿಕೊಳ್ಳುತ್ತಿದ್ದರು. ಇವರು ಅಸಾಧಾರಣ ಮನುಷ್ಯರು, ಆದರೆ ಇವರು ಇಡೀ ಮಾನವತೆಯನ್ನು ರಿಪ್ರಸೆಂಟ್ ಮಾಡುವುದಿಲ್ಲ. ಅವರು ಒಂದು ಭವಿಷ್ಯ, ಒಂದು ಸಾಧ್ಯತೆಯ ರಾಯಭಾರಿಗಳು. ಆದರೆ ಭವಿಷ್ಯ ಹತ್ತಿರವಾಗುತ್ತಿದೆ. ಒಮ್ಮೆ ವಿಜ್ಞಾನ, ವಸ್ತು ವಿಶೇಷಗಳ potential ಸಾಮರ್ಥ್ಯವನ್ನು ಅನಾವರಣ ಮಾಡಿದ ಮೇಲೆ, ಮನುಷ್ಯರು, ಅನ್ನ, ಬಟ್ಟೆ, ಮನೆ, ಶಿಕ್ಷಣದಿಂದ ತೃಪ್ತರಾದ ಮೇಲೆ ಅವರು ಹೊಸದೊಂದು ಹಸಿವೆಗೆ ಒಳಗಾಗುತ್ತಾರೆ. ಹೊಸದೊಂದು ಆಹಾರದ ಹುಡುಕಾಟದಲ್ಲಿ ತೊಡಗಿಕೊಳ್ಳುತ್ತಾರೆ. ಆ ಹೊಸ ಆಹಾರವೇ ಪ್ರೀತಿ. ಮತ್ತು ಪ್ರೀತಿಯನ್ನು ಮನುಷ್ಯರಿಗೆ ಒದಗಿಸುವುದು ವಿಜ್ಞಾನಕ್ಕೆ ಸಾಧ್ಯವಿಲ್ಲ. ಧರ್ಮ ಮಾತ್ರ ಮನುಷ್ಯರಿಗೆ ಪ್ರೀತಿಯನ್ನು ಒದಗಿಸಬಲ್ಲದು. ಧರ್ಮವೇ ಪ್ರೀತಿಯ ವಿಜ್ಞಾನ.
*******************************

