ನಿಮ್ಮ ತಂದೆ ತಾಯಿಯನ್ನು ಕ್ಷಮಿಸುವುದು ಅತ್ಯಂತ ಕಠಿಣವಾದ ಸಂಗತಿ, ಏಕೆಂದರೆ ಅವರು ನಿಮ್ಮ ಜನ್ಮದಾತರು – ಅವರನ್ನು ಹೇಗೆ ನೀವು ಕ್ಷಮಿಸುತ್ತೀರ? ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಮ್ಮನ್ನು ನೀವು ಪ್ರೀತಿಸಲು ಶುರು ಮಾಡುವ ತನಕ, ನಿಮ್ಮ ಇರುವಿಕೆಗೆ ನೀವೇ ಬೆರಗಾಗುವ ಸ್ಥಿತಿಯನ್ನು ತಲುಪುವ ತನಕ, ನಿಮ್ಮ ತಂದೆ ತಾಯಿಯರಿಗೆ ಹೇಗೆ ಧನ್ಯವಾದ ಹೇಳುತ್ತೀರಿ? ಇದು ಅಸಾಧ್ಯ. ಅವರು ನಿಮ್ಮನ್ನು ಹೆತ್ತಿದ್ದಕ್ಕಾಗಿ ನಿಮಗೆ ಅವರ ಮೇಲೆ ಕೋಪ ಇದೆ, ಮತ್ತು ನಿಮ್ಮನ್ನು ಹೆರಲು ಅವರು ನಿಮ್ಮ ಒಪ್ಪಿಗೆಯನ್ನೂ ಕೇಳಲಿಲ್ಲ. ಅವರು ನೀವು ಈಗ ಇರುವ ಈ ಭಯಂಕರ ಮನುಷ್ಯನನ್ನು ಸೃಷ್ಟಿ ಮಾಡಿದ್ದಾರೆ. ಅವರಿಗೆ ಮಗು ಬೇಕಾಗಿದ್ದ ಕಾರಣಕ್ಕಾಗಿ ನೀವು ಯಾಕೆ ಕಷ್ಟಪಡಬೇಕು? ಅವರ ಈ ವ್ಯವಹಾರಕ್ಕೆ ನೀವು ಬಾಧ್ಯರಲ್ಲ. ಈ ಜಗತ್ತಿನೊಳಗೆ ನಿಮ್ಮನ್ನು ಯಾಕೆ ಎಳೆದುಕೊಂಡು ಬರಲಾಯಿತು? ನಿಮ್ಮ ಕೋಪ ಈ ಕಾರಣಕ್ಕಾಗಿ.
ನಿಮ್ಮನ್ನು ನೀವು ಪ್ರೀತಿಸುವ ಸ್ಥಿತಿಗೆ ತಲುಪಿದಿರಾದರೆ, ನಿಮ್ಮ ಇರುವಿಕೆಯನ್ನು ನೀವು ಅತ್ಯಾನಂದದಿಂದ ಅನುಭವಿಸುತ್ತಿರುವಿರಾದರೆ, ಆಗ ಥಟ್ಟನೆ ನಿಮಗೆ ನಿಮ್ಮ ತಂದೆ ತಾಯಿಯರ ಬಗ್ಗೆ ಪ್ರೀತಿ ಉಕ್ಕಿ ಹರಿಯುವುದು. ಈ ಅಸ್ತಿತ್ವದ ನಿಮ್ಮ ಪ್ರವೇಶಕ್ಕೆ ಅವರು ಬಾಗಿಲಾಗಿದ್ದಾರೆ. ಅವರ ಹೊರತಾಗಿ ನಿಮ್ಮ ಈ ಆನಂದ ಸಾಧ್ಯವೇ ಆಗುತ್ತಿರಲಿಲ್ಲ, ಅವರು ನಿಮ್ಮ ಖುಶಿಯನ್ನು ಸಾಧ್ಯ ಮಾಡಿದ್ದಾರೆ.
ನೀವು ನಿಮ್ಮ ಇರುವಿಕೆಯನ್ನು ಸಂಭ್ರಮಿಸುವಿರಾದರೆ, (ನನ್ನ ಕೆಲಸವೇ ಇದನ್ನು ಸಾಧ್ಯ ಮಾಡುವುದು) ಥಟ್ಟನೇ ನಿಮ್ಮೊಳಗೆ ನಿಮ್ಮ ತಂದೆ ತಾಯಿಯರ ಬಗ್ಗೆ ಗೌರವ ಮೂಡುವುದು, ಅವರ ಅಂತಃಕರಣಕ್ಕೆ, ಅವರ ಪ್ರೀತಿಗೆ. ಆಗ ನೀವು ಅವರಿಗೆ ಕೃತಜ್ಞರಾಗಿರುವಿರಿ ಅಷ್ಟೇ ಅಲ್ಲ ಅವರನ್ನು ನಿಮ್ಮ ಕೋಪದಿಂದ ಬಿಡುಗಡೆ ಕೂಡ ಮಾಡಿಬಿಡುವಿರಿ, ಅವರನ್ನು ಕ್ಷಮಿಸಿ ಬಿಡುವಿರಿ.
ತೀವ್ರ ಕಿವುಡುತನದಿಂದ ಬಳಲುತ್ತಿದ್ದ ನಸ್ರುದ್ದೀನ್ ಗೆ ಪ್ರಸಿದ್ಧ ಕಂಪನಿಯೊಂದು ತಾನು ಹೊಸದಾಗಿ ಕಂಡುಹಿಡಿದಿದ್ದ ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾದ hearing aid ನ್ನು ಟೆಸ್ಟ್ ಮಾಡಲು ಕೊಟ್ಟಿತ್ತು. ಒಂದು ವಾರದ ನಂತರ ನಸ್ರುದ್ದೀನ್ ನನ್ನು ಭೇಟಿಯಾದ ಕಂಪನಿಯ ಇಂಜಿನಿಯರ್ ಪ್ರಶ್ನೆ ಮಾಡಿದ,
“ ಹೊಸ Hearing aid ನ ಅನುಭವ ಹೇಗಿದೆ ನಸ್ರುದ್ದೀನ್ ? ಖುಶಿಯಾಯಿತಾ ?, ಮನೆಯವರಿಗೆ ನೀನು ಇದನ್ನ ಬಳಸುತ್ತಿರುವುದು ಗೊತ್ತಾಯಿತಾ ? “
“ ತುಂಬ ಕಷ್ಟ ಇದು, ಒಂದು ವಾರದಲ್ಲಿ ನಾನು ಮೂರು ಸಲ ನನ್ನ ವಿಲ್ ಬದಲಾಯಿಸಿದೆ “
ನಸ್ರುದ್ದೀನ್, Hearing aid ಕುರಿತಂತೆ ತನ್ನ ಫೀಡ್ ಬ್ಯಾಕ್ ಕೊಟ್ಟ.

