ಖಲೀಲ್ ಗಿಬ್ರಾನನ ಕತೆಗಳು#47: ದೇವ ಮತ್ತು ಅನೇಕ ದೇವರು

ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ

ಕಿಲಾಫಿಗಳ ನಗರದ ದೇಗುಲದ ಮೆಟ್ಟಿಲ ಮೇಲೆ ನಿಂತು ತರ್ಕ ಪಂಡಿತನೊಬ್ಬ ನಿಂತು ದೇವರು ಅನೇಕರಿದ್ದಾರೆ ಎಂದು ಬೋಧನೆ ಮಾಡುತ್ತಿದ್ದ. ಅದನ್ನು ಕೇಳಿದ ಜನ, ʻಅದು ನಮಗೂ ಗೊತ್ತು. ಆ ದೇವರುಗಳೆಲ್ಲ ನಮ್ಮ ಜೊತೆಯಲ್ಲಿ ಇರುತ್ತಾರೋ, ನಾವು ಹೋದಲ್ಲಿಗೆಲ್ಲ ಬರುತ್ತಾರೋʼ ಅಂತ ಕೇಳಿಕೊಂಡರು.

ಮುಂದೆ ಕೆಲವೇ ದಿನಗಳಲ್ಲಿ ಇನ್ನೊಬ್ಬ ಮನುಷ್ಯ ಬಂದು ಅಲ್ಲೇ ನಿಂತು ʻದೇವರು ಇಲ್ಲ,ʼ ಎಂದು ಭಾಷಣ ಮಾಡಿದ. ಅವನ ಮಾತು ಕೇಳಿದ ಎಷ್ಟೋ ಜನ ಸಂತೋಷಪಟ್ಟರು. ಯಾಕೆಂದರೆ ದೇವರುಗಳ ಭಯವಿರಲಿಲ್ಲ ಅವರ ಮನಸಿನಲ್ಲಿ.

ಇನ್ನಷ್ಟು ದಿನ ಕಳೆದ ಮೇಲೆ ಒಬ್ಬ ಪ್ರಚಂಡ ವಾಗ್ಮಿ ಬಂದ. ʻಇರುವವನು ಒಬ್ಬನೇ ದೇವ,ʼ ಎಂದು ಹೇಳಿದ. ಜನರ ಮನಸಿನಲ್ಲಿ ಭಯ ಹುಟ್ಟಿತು. ಅನೇಕ ದೇವರು ಇರುವುದಕ್ಕಿಂತ ಇರುವ ಒಬ್ಬನೇ ದೇವರು ತಮ್ಮ ಮೇಲೆ ಯಾವ ಥರದ ತೀರ್ಮಾನ ಮಾಡುತ್ತಾನೋ ಎಂದು ಅಂಜಿದರು. 

ಆಮೇಲೆ ಕೆಲವು ತಿಂಗಳು ಕಳೆದ ಮೇಲೆ ಇನ್ನೊಬ್ಬ ಬಂದ. ʻನೋಡಿ ಮಹಾಜನಗಳೇ, ಮೂವರು ದೇವರಿದ್ದಾರೆ. ಮೂವರೂ ಒಂದೇ ಆಗಿ ಗಾಳಿಯಲ್ಲೇ ಬದುಕುತ್ತಾರೆ. ಅವರಿಗೊಬ್ಬ ತಾಯಿ ಇದ್ದಾಳೆ. ಅವಳು ಆ ಮೂವರು ದೇವರ ಸಂಗಾತಿಯೂ ಹೌದು, ಸಹೋದರಿಯೂ ಹೌದು,ʼ ಎಂದು ಹೇಳಿದ.

ಅದನ್ನು ಕೇಳಿದ ಜನಕ್ಕೆ ಸಮಾಧಾನವಾಯಿತು. ʻಒಬ್ಬ ದೇವರಲ್ಲೇ ಮೂವರು ದೇವರು. ಅಂದರೆ ಅವರವರಲ್ಲೇ ಭಿನ್ನ ಅಭಿಪ್ರಾಯ ಇರುತ್ತವೆ. ನಾವು ತಪ್ಪು ಮಾಡಿದೆವೋ ಇಲ್ಲವೋ ಅನ್ನುವುದನ್ನು ಎಲ್ಲರೂ ಒಪ್ಪುವುದೇ ಇಲ್ಲ. ಅಕಸ್ಮಾತ್‌ ಒಪ್ಪಿದರೂ ಅವರೆಲ್ಲರ ತಾಯಿ ದೇವರು ನಮ್ಮಂಥ ಬಡಪಾಯಿಗಳ ತಪ್ಪನ್ನು ಗಮನಿಸಬಾರದು ಎಂದು ಅವರಿಗೆಲ್ಲ ಹೇಳುತ್ತಾಳೆ,ʼ ಅಂತ ಮನಸಿನಲ್ಲೇ ಅಂದುಕೊಂಡರು. 

ಆದರೂ ಆ ಕಿಲಾಫಿಗಳ ಊರಿನಲ್ಲಿ ಜಗಳ ನಡೆದೇ ಇದೆ. ಅನೇಕ ದೇವರು ಇದ್ದಾರೋ, ಒಬ್ಬನೇ ದೇವರೋ, ಅಥವಾ ಒಬ್ಬನಲ್ಲೇ ಮೂವರು ಇದ್ದಾರೋ, ದೇವರ ಕರುಣಾಮಯಿ ತಾಯಿ ಇದ್ದಾಳೋ, ದೇವರಿಲ್ಲವೋ ಅನ್ನುವ ಬಗ್ಗೆ ತಾವು ಹೇಳಿದ್ದೇ ನಿಜವೆಂದು ಗುಂಪು ಜಗಳ ನಡೆದೇ ಇದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.