ನೀವು ವಿಫಲರಾಗುವುದು ಸಾಧ್ಯವಿಲ್ಲ. ಬದುಕು ವಿಫಲತೆಗೆ ಅವಕಾಶ ಮಾಡಿಕೊಡುವುದಿಲ್ಲ. ಹಾಗು ನಿಮಗೆ ಯಾವುದೇ ಗುರಿ ಇಲ್ಲವಾದ್ದರಿಂದ ನೀವು ಹತಾಶರಾಗುವುದೂ ಸಾಧ್ಯವಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಲೌಕಿಕದ ಆಮಿಷ
ನಿನ್ನ ಸೆಳೆಯುತ್ತಿದ್ದರೆ
ನೀನು ಕೇವಲ ಒಬ್ಬ ನೌಕರ.
ಅಲೌಕಿಕದ ತುಡಿತ
ನಿನ್ನ ಜಗ್ಗುತ್ತಿದೆಯಾದರೆ
ನೀನೊಬ್ಬ ಪಕ್ಕಾ ಸುಳ್ಳುಗಾರ.
ಎರಡೂ ಮೂರ್ಖ ಆಸೆಗಳೇ.
ಪ್ರೀತಿ ತಂದಿಡುವ
ಗೊಂದಲಕರ
ಅಮಾಯಕ ಆನಂದವೊಂದೆ
ನಿನ್ನ ಪರಮ ಅಗತ್ಯ.
ನೀನು ಮರೆತದ್ದನ್ನು
ಅವರು ಕ್ಷಮಿಸಿಬಿಡುತ್ತಾರೆ.
- ರೂಮಿ
ನೀವು ಹತಾಶತೆಯನ್ನ ಅನುಭವಿಸುತ್ತೀರೆಂದರೆ ಅದಕ್ಕೆ ಕಾರಣ, ನೀವು ಬದುಕಿನ ಮೇಲೆ ಮಾನಸಿಕ ಗುರಿಯನ್ನು ಹೇರಿಕೊಂಡಿರುವುದು. ನೀವು ಗುರಿಯನ್ನು ಮುಟ್ಟುವ ಹೊತ್ತಿಗೆ, ಬದುಕು ಆ ಗುರಿಯನ್ನು ತ್ಯಜಿಸಿ ಮುಂದಕ್ಕೆ ಹೋಗಿರುತ್ತದೆ. ಕೇವಲ ಐಡಿಯಾಗಳ, ಸಿದ್ಧಾಂತಗಳ ಮೃತ ಅವಶೇಷಗಳು ಮಾತ್ರ ಅಲ್ಲಿ ಉಳಿದುಕೊಂಡಿರುತ್ತದೆ. ಆದ್ದರಿಂದ ನಿಮ್ಮ ಹತಾಶೆ ಇನ್ನಷ್ಟು ತೀವ್ರವಾಗುತ್ತದೆ. ಹಾಗಾಗಿ ಈ ಹತಾಶೆಯನ್ನು ಸೃಷ್ಟಿ ಮಾಡಿಕೊಂಡಿರುವವರು ಸ್ವತಃ ನೀವೇ.
ಬದುಕು ತನ್ನನು ತಾನು ಯಾವುದೇ ಗುರಿಗೆ ಸೀಮಿತಗೊಳಿಸಿಕೊಳ್ಳಲು ಬಯಸುವುದಿಲ್ಲ ಎನ್ನುವುದನ್ನ ನೀವು ಅರ್ಥಮಾಡಿಕೊಂಡಾಗ, ನೀವು ಯಾವ ಹೆದರಿಕೆಯೂ ಇಲ್ಲದೇ ಎಲ್ಲ ದಿಕ್ಕುಗಳಲ್ಲಿಯೂ ಪ್ರವಹಿಸುತ್ತೀರ. ಎಲ್ಲಿ ವೈಫಲ್ಯಕ್ಕೆ ಅವಕಾಶವಿಲ್ಲವೋ ಅಲ್ಲಿ ಗೆಲುವು ಕೂಡ ಸಾಧ್ಯವಿಲ್ಲ. ಆದ್ದರಿಂದಲೇ ನೀವು ಆಗ ಹತಾಶೆಯಿಂದಲೂ ಹೊರತು. ಆಗ ಪ್ರತಿ ಕ್ಷಣ ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ ; ಹಾಗಂತ ಅದು ಏನನ್ನೋ ಸೂಚಿಸುತ್ತಿದೆ ಅಂತಲ್ಲ, ಅದನ್ನ ಯಾವುದೋ ಒಂದು ಗುರಿಗೆ ಒಂದು means ಆಗಿ ಬಳಸಬೇಕು ಅಂತಲ್ಲ, ಅದಕ್ಕೆ ತನ್ನದೇ ಆದ ಅಂತರ್ಗತ ಮೌಲ್ಯವಿದೆ.
ಪ್ರತಿಯೊಂದು ಕ್ಷಣವೂ ವಜ್ರ, ನೀವು ಒಂದು ವಜ್ರದಿಂದ ಇನ್ನೊಂದು ವಜ್ರಕ್ಕೆ ಪ್ರಯಾಣ ಮಾಡುತ್ತೀರ, ಆದರೆ ಯಾವುದಕ್ಕೂ ಕೊನೆಯೆನ್ನುವುದು ಇಲ್ಲ. ಬದುಕು ಜೀವಂತಿಕೆಯಿಂದ ನಳನಳಿಸುತ್ತದೆ…….ಸಾವು ಎನ್ನುವುದು ಇಲ್ಲ. ಕೊನೆ ಎಂದರೆ ಸಾವು , ಗುರಿ ಎಂದರೆ ಸಾವು, ಪರಿಪೂರ್ಣತೆ ಎಂದರೆ ಸಾವು. ಬದುಕಿಗೆ ಸಾವು ಎನ್ನುವುದು ಗೊತ್ತಿಲ್ಲ, ಅದು ತನ್ನ ರೂಪ, ಆಕಾರ ಬದಲಿಸುತ್ತ ಮುಂದುವರೆಯುತ್ತದೆ. ಬದುಕು ಅನಂತ, ಆದರೆ ಅದಕ್ಕೆ ಯಾವ ಗುರಿ, ಯಾವ ಉದ್ದೇಶವೂ ಇಲ್ಲ.

