ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಒಬ್ಬ ಸಾಹುಕಾರನಿದ್ದ. ಅವನಿಗೆ ಕಿರಿಯ ವಯಸಿನ ಹೆಂಡತಿ ಇದ್ದಳು. ಅವಳಿಗೆ ಕಿವಿ ಪೂರಾ ಕೇಳುತ್ತಿರಲಿಲ್ಲ.
ಅವತ್ತು ಹಬ್ಬದ ದಿನ. ಅವಳು ಗಂಡನ ಹತ್ತಿರ ಬಂದು, ʻನಿನ್ನೆ ನಾನು ಪೇಟೆ ಬೀದಿಗೆ ಹೋಗಿದ್ದೆ. ಡಮಾಸ್ಕಸ್ ರೇಶಿಮೆ, ಇಂಡಿಯಾದ ಮಸ್ಲಿನ್, ಪರ್ಶಿಯಾದ ಕಂಠೀಹಾರ, ಯಮನ್‌ನ ಕಡಗ ಬಂದಿದ್ದವು. ಒಂಟೆಗಳ ಮೇಲೆ ಬಂದ ವ್ಯಾಪಾರಿಗಳು ಅವನ್ನೆಲ್ಲ ತಂದಿದ್ದರು. ನನ್ನ ಬಟ್ಟೆಯೆಲ್ಲಾ ಹಳೆಯದಾಗಿವೆ. ನಾನು ನಿನ್ನಂಥ ಶ್ರೀಮಂತನ ಹೆಂಡತಿ. ನನಗೆ ಆ ಸುಂದರವಾದ ವಡವೆ, ವಸ್ತ್ರ ಬೇಕು,ʼ ಅಂದಳು.
ಗಂಡ ಇನ್ನೂ ಬೆಳಗಿನ ಕಾಫಿ ಹೀರುತ್ತಿದ್ದ,ʻಪ್ರಿಯೇ, ಪೇಟೆಗೆ ಹೋಗಿ ನಿನಗೆ ಬೇಕಾದ್ದನ್ನು ಖರೀದಿ ಮಾಡಲು ಯೋಚನೆ ಮಾಡಬೇಕಾಗಿಲ್ಲ,ʼ ಅಂದ.
ಹೆಂಡತಿಗೆ ʻಬೇಕಾಗಿಲ್ಲʼ ಅನ್ನುವುದು ಮಾತ್ರ ಸ್ವಲ್ಪ ಕೇಳಿಸಿತ್ತು. ʻಬೇಕಾಗಿಲ್ಲವಾ! ನನ್ನ ಸ್ನೇಹಿತೆಯರ ಎದುರಿಗೆ ಹಳೇ ಬಟ್ಟೆ ತೊಟ್ಟು ಓಡಾಡಲಾ? ನೀನು ಸಾಹುಕಾರ ಅನ್ನೋ ಮಾತಿಗೇ ಅವಮಾನ ಆಗಲ್ಲವಾ?ʼ ಅಂದಳು.
ʻಖರೀದಿ ಮಾಡೋದು ಬೇಕಾಗಿಲ್ಲ ಅನ್ನಲಿಲ್ಲ. ಹೋಗು, ನಿನಗೆ ಇಷ್ಟವಾದದ್ದು ಖರೀದಿ ಮಾಡು. ಸುಂದರವಾದ ವಡವೆ, ವಸ್ತ್ರ ಯಾವುದೂ ಬಿಡಬೇಡ,ʼ ಅಂದ.
ಹೆಂಡತಿ ಮತ್ತೆ ತಪ್ಪು ತಿಳಿದಳು. ʻಊರಲ್ಲಿರುವ ಎಲ್ಲಾ ಶ್ರೀಮಂತರಲ್ಲಿ ನೀನೇ ಜಿಪುಣ. ನನ್ನ ವಯಸಿನ ಹೆಂಗಸರು ಸಿಂಗಾರ ಬಂಗಾರ ಎಲ್ಲಾ ಮಾಡಿಕೊಂಡು ಉದ್ಯಾನದಲ್ಲಿ ಅಡ್ಡಾಡುತ್ತಾರೆ. ನೀನು ಮಾತ್ರ ಬೇಡ ಅನ್ನುತ್ತೀಯʼ ಅನ್ನುತ್ತ ಅಳಲು ಶುರು ಮಾಡಿದಳು. ದೊಡ್ಡ ದೊಡ್ಡ ಕಂಬನಿ ಕೆನ್ನೆಯ ಮೇಲಿಳಿದು ಅವಳ ಎದೆಯನ್ನು ತೋಯಿಸಿದವು. ʻನಾನು ಏನು ಕೇಳಿದರೂ ಬೇಡಾ ಬೇಡಾ ಅನ್ನೋದೇ ಆಯಿತು,ʼ ಅನ್ನುತ್ತ ಬಿಕ್ಕಿದಳು.
ಗಂಡನ ಮನಸ್ಸು ಕರಗಿತು. ಕೈಚೀಲದಿಂದ ಹಿಡಿಯ ತುಂಬಾ ಬಂಗಾರದ ನಾಣ್ಯ ತೆಗೆದು ಅವಳ ಮುಂದಿಟ್ಟ. ʻಹೋಗು ಪ್ರಿಯೇ, ನಿನಗೆ ಬೇಕಾದುದೆಲ್ಲ ಖರೀದಿ ಮಾಡು,ʼ ಎಂದು ಮರುಕದಿಂದ ಹೇಳಿದ.
ಕಿವಿ ಕೇಳಿಸದ ಹೆಂಡತಿ ಅವತ್ತಿನಿಂದ ತನಗೇನು ಬೇಕಾದರೂ ಕಣ್ಣಿನಲ್ಲಿ ಅಂಜೂರದ ಹಣ್ಣಿನಷ್ಟು ಗಾತ್ರದ ಕಂಬನಿ ತುಂಬಿಕೊಂಡು ಗಂಡನ ಮುಂದೆ ನಿಲ್ಲುತ್ತಿದ್ದಳು. ಗಂಡ ಮರುಮಾತಾಡದೆ ಅವಳ ಕೈಗೆ ಬಂಗಾರದ ನಾಣ್ಯಗಳನ್ನು ಇಡುತ್ತಿದ್ದ.
ಕಾಲ ಕಳೆಯಿತು. ಹೆಂಡತಿಯ ಮನಸ್ಸು ಬದಲಾಯಿತು. ಯುವಕನೊಬ್ಬನ ಮೇಲೆ ಅವಳ ಮನಸಿನಲ್ಲಿ ಪ್ರೀತಿ ಹುಟ್ಟಿತು. ಅವನು ಕೆಲಸದ ಮೇಲೆ ಎಷ್ಟೋ ದಿನ ಊರು ಬಿಟ್ಟು ಹೋಗುತ್ತಿದ್ದ. ಅವನು ಊರಲ್ಲಿ ಇಲ್ಲದಿರುವಾಗೆಲ್ಲ ಅವಳು ಮಹಡಿಯಲ್ಲಿ ಕಿಟಕಿಯ ಮುಂದೆ ಕೂತು ಕಣ್ಣಲ್ಲಿ ನೀರು ಸುರಿಸುತ್ತಿದ್ದಳು.
ಅವಳು ಅಳುವನ್ನು ನೋಡಿದಾಗೆಲ್ಲ ಗಂಡನ ಮನಸ್ಸು, ʻಪೇಟೆಗೆ ಹೊಸ ವ್ಯಾಪಾರಿಗಳು ಏನೋ ಸರಕು ತಂದಿರಬೇಕು,ʼ ಅಂದುಕೊಂಡು ಅವಳ ಮುಂದೆ ಬಂಗಾರದ ನಾಣ್ಯಗಳನ್ನ ಇಟ್ಟು ಹೊರಟು ಹೋಗುತ್ತಿದ್ದ.

