ಲವ್: ಪ್ರೇಮ, ಕಾಮ, ಅಧ್ಯಾತ್ಮ ಪುಸ್ತಕದಿಂದ ಆಯ್ದ ಅಧ್ಯಾಯ ಇಲ್ಲಿದೆ…
ಮತ್ತೊಂದನ್ನು ದ್ವೇಷಿಸದೆ ಅಥವಾ ದೂರವಿಡದ ನಿರ್ಧಿಷ್ಟ ಬಗೆಯ ಪ್ರೀತಿ ಜನಸಾಮಾನ್ಯರ ಕಣ್ಣಲ್ಲಿ ನಂಬಿಕೆಗೆ ಅರ್ಹವಲ್ಲ.
ಮತ್ತು ಈ ಪ್ರೇಮಿಗಳು ತಮ್ಮ ಪ್ರೀತಿಗೆ ಜನರ ಅಪ್ರೂವಲ್ ಬಯಸುತ್ತಾರೆ. ಆದ್ದರಿಂದ ಅವರು ಮತ್ತೊಂದನ್ನು ದೂರವಿಟ್ಟು ಪ್ರೀತಿಸುವುದು ಅನಿವಾರ್ಯವಾಗುತ್ತದೆ.ಇದು ಸಮುದಾಯ ಪ್ರೇಮ, ಅಧ್ಯಾತ್ಮ ಪ್ರೇಮವಾಗಲು ಇರುವ ಅಡ್ಡಿ ~ ಚೇತನಾ ತೀರ್ಥಹಳ್ಳಿ
ಮನುಷ್ಯರು ಕೇವಲ ವ್ಯಕ್ತಿಗಳನ್ನಷ್ಟೇ ಪ್ರೇಮಿಸುವುದಿಲ್ಲ, ತಾವು ಸಾಕಿದ ಪೆಟ್ ಗಳನ್ನಷ್ಟೇ ಪ್ರೀತಿಸುವುದಿಲ್ಲ, ದೇಶವನ್ನೂ ಭಾಷೆಯನ್ನೂ ಪರಿಸರವನ್ನೂ ಪ್ರೀತಿಸುತ್ತಾರೆ. ತಮ್ಮ ಈ ಪ್ರೀತಿಗಾಗಿ ಬದುಕನ್ನೆ ಮುಡಿಪಾಗಿಡುತ್ತಾರೆ. ಮನೆಮಾರು ತೊರೆಯುತ್ತಾರೆ, ಕೆಲವೊಮ್ಮೆ ಜೀವವನ್ನೂ.
ಇಂಥವರ ಪ್ರೇಮಕ್ಕೆ ಅತ್ಯುನ್ನತ ಗೌರವ ಸಲ್ಲಬೇಕು. ಅವರ ಪ್ರೇಮ ಮೆಚ್ಚುಗೆಗೆ ಅರ್ಹ, ಅನುಕರಣೀಯ ಅನ್ನುವುದೂ ನಿಜವೇ. ಆದರೂ ಈ ಪ್ರೀತಿ ಆಧ್ಯಾತ್ಮಿಕವಲ್ಲ.
ಸಮುದಾಯದ ಮೇಲೆ, ಲೋಕದ ನಿರ್ದಿಷ್ಟ ಸಂಗತಿಗಳ ಮೇಲೆ ಪ್ರೀತಿ ಇರಿಸಿಕೊಂಡ ಜನರು, ಅದರಿಂದ ಪ್ರತಿಯಾಗಿ ಏನನ್ನೂ ಬಯಸುವುದಿಲ್ಲ. ದೇಶವನ್ನು ಪ್ರೀತಿಸುವವರು ಅಗತ್ಯ ಬಿದ್ದಾಗ ದೇಶಕ್ಕಾಗಿ ಪ್ರಾಣ ಕೊಡಲೂ ಹಿಂದೆಮುಂದೆ ನೋಡುವುದಿಲ್ಲ.
ಭಾಷಾಪ್ರೇಮಿಗಳ ಬಗೆಯೂ ಹೀಗೇ. ಅವರೂ ತಮ್ಮ ಭಾಷಿಕ ಸಮುದಾಯದಿಂದ ಯಾವ ಲಾಭದ ನಿರೀಕ್ಷೆ ಇಟ್ಟುಕೊಳ್ಳುವುದಿಲ್ಲ. ತಾವು ಪ್ರೀತಿಸುವ ಭಾಷೆಯನ್ನು ಉಳಿಸುವುದು, ಬಳಸುತ್ತ ಬೆಳೆಸುವುದು ಅವರ ಬದ್ಧತೆ. ಈ ಬದ್ಧತೆಗಾಗಿ ಅವರು ಬೀದಿಗಿಳಿಯಿತ್ತಾರೆ, ಹೋರಾಟ ಮಾಡುತ್ತಾರೆ. ಪೆಟ್ಟು ತಿನ್ನುತ್ತಾರೆ. ಏನೇ ಆದರೂ ತಮ್ಮ ಭಾಷಾಪ್ರೇಮ ಬಿಟ್ಟುಕೊಡುವುದಿಲ್ಲ.
ಪರಿಸರ ಪ್ರೇಮಿಗಳು, ಪ್ರಾಣಿಪ್ರೇಮಿಗಳು – ಇವರೆಲ್ಲರೂ ಒಂದೇ ರೀತಿ. ತಮ್ಮ ಪ್ರೀತಿಗಾಗಿ ತಮ್ಮ ಬದುಕನ್ನೆ ಮುಡಿಪಾಗಿಡುವರು. ಆನೆಗಳ ಮೇಲಿನ ಪ್ರೀತಿಯಿಂದ ಅವುಗಳ ಬಗ್ಗೆ ಅಧ್ಯಯನ ನಡೆಸಲಿಕ್ಕಾಗಿ ನಾಡನ್ನೆ ತೊರೆದು ಕಾಡು ಸೇರಿದವರು ಇದ್ದಾರೆ. ಪಕ್ಷಿಗಳ ಮೇಲಿನ ಪ್ರೀತಿಯಿಂದಲೂ ಕಾಡಿನಲ್ಲೆ ಬದುಕು ಕಟ್ಟಿಕೊಂಡವರು ಇದ್ದಾರೆ.
ಆದರೂ ಈ ಯಾವ ಪ್ರೀತಿಯೂ ಆಧ್ಯಾತ್ಮಿಕವಾಗುವುದಿಲ್ಲ.
ಸ್ವಾರ್ಥವಿಲ್ಲದಿದ್ದರೂ, ನಿರೀಕ್ಷೆ ಇಲ್ಲದಿದ್ದರೂ, ತಮ್ಮ ಪ್ರೀತಿಗಾಗಿ ತ್ಯಾಗವನ್ನೇ ಮಾಡಿದ್ದರೂ ಅವರು ಆಧ್ಯಾತ್ಮಿಕ ಪ್ರೇಮಿಗಳಾಗುವುದಿಲ್ಲ.
ಯಾಕೆಂದರೆ,
ಒಂದನ್ನು ಪ್ರೀತಿಸುವ ಭರದಲ್ಲಿ ಅವರು ಮತ್ತೊಂದರತ್ತ ನಿರಾಕರಣೆ ಬೆಳೆಸಿಕೊಳ್ಳುತ್ತಾರೆ.
ಅದು ಅವರ ತಪ್ಪಲ್ಲ. ಅವರು ಪ್ರೀತಿಸುವ ವಸ್ತು / ಸಂಗತಿಯ ಬೇಡಿಕೆಯೇ ಅಂಥದ್ದು. ಮತ್ತೊಂದನ್ನು ನಿರಾಕರಿಸದೆ ಅವರು ತಮ್ಮ ಪ್ರೀತಿಯನ್ನು ಸಾಬೀತುಪಡಿಸುವ ಅವಕಾಶ ಇರುವುದಿಲ್ಲ. ಇದ್ದರೂ ಹಾಗೊಮ್ಮೆ, ಜನ ಅದನ್ನು ಪರಿಗಣಿಸುವುದಿಲ್ಲ.
ಮತ್ತೊಂದನ್ನು ದ್ವೇಷಿಸದೆ ಅಥವಾ ದೂರವಿಡದ ನಿರ್ಧಿಷ್ಟ ಬಗೆಯ ಪ್ರೀತಿ ಜನಸಾಮಾನ್ಯರ ಕಣ್ಣಲ್ಲಿ ನಂಬಿಕೆಗೆ ಅರ್ಹವಲ್ಲ.
ಮತ್ತು ಈ ಪ್ರೇಮಿಗಳು ತಮ್ಮ ಪ್ರೀತಿಗೆ ಜನರ ಅಪ್ರೂವಲ್ ಬಯಸುತ್ತಾರೆ. ಆದ್ದರಿಂದ ಅವರು ಮತ್ತೊಂದನ್ನು ದೂರವಿಟ್ಟು ಪ್ರೀತಿಸುವುದು ಅನಿವಾರ್ಯವಾಗುತ್ತದೆ.
ದೇಶಪ್ರೇಮದ ಕಾರಣದಿಂದ ಸೈನ್ಯಕ್ಕೆ ಸೇರುವ ವ್ಯಕ್ತಿ ಗಡಿಯಾಚೆಯ ದೇಶವನ್ನು ದ್ವೇಷಿಸದೆ, ಕೊನೆಪಕ್ಷ ಅದರ ಬಗ್ಗೆ ಸಿಟ್ಟು ಇರಿಸಿಕೊಳ್ಳದೆ ತನ್ನ ದೇಶಕ್ಕಾಗಿ ಯುದ್ಧ ಮಾಡುವುದು ಸಾಧ್ಯವಿಲ್ಲ.
ಅವರಿಗೆ ತಮ್ಮ ದೇಶಪ್ರೇಮಕ್ಕೆ ಪ್ರತಿಯಾಗಿ ಏನೂ ಬೇಕಿರುವುದಿಲ್ಲ. ಮಿಲಿಟರಿಗೆ ಸೇರುವ ಪ್ರತಿಯೊಬ್ಬರೂ ಅದನ್ನೊಂದು ಉದ್ಯೋಗವೆಂದು ಪರಿಗಣಿಸಿ ಸೇರ್ಪಡೆಯಾಗಿರುವುದಿಲ್ಲ.
ಬಹಳಷ್ಟು ದೇಶಗಳಲ್ಲಿ ಮಿಲಿಟರಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸುವುದು ಕಡ್ಡಾಯ. ಆದ್ದರಿಂದ ಮಿಲಿಟರಿಯಲ್ಲಿರುವವರೆಲ್ಲರೂ ದೇಶಪ್ರೇಮಿಗಳಾಗಿರಲೇಬೇಕೆಂದಿಲ್ಲ.
ಇಲ್ಲಿ ಹೇಳುತ್ತಿರುವುದು, ಕೇವಲ ದೇಶಪ್ರೇಮದ ಕಾರಣದಿಂದ ಮಿಲಿಟರಿಗೆ ಸೇರಿದವರ ಬಗ್ಗೆ.
ಅವರು ಎಷ್ಟೇ ಉದಾರ ಹೃದಯಿಗಳಾದರೂ, ಸಜ್ಜನರಾದರೂ ತನ್ನ ದೇಶದ ಗಡಿಗೆ ಆತಂಕ ಒಡ್ಡುವ ಮತ್ತೊಂದು ದೇಶದ ಬಗ್ಗೆ ನಿರಾಕರಣೆ ತಳೆಯಲೇಬೇಕಾಗುವುದು.
ಭಾಷಾಪ್ರೇಮಿಗಳೂ ಅಷ್ಟೇ. ಅವರಿಗೆ ತನ್ನ ಭಾಷೆಯ ಅಸ್ತಿತ್ವವನ್ನು ನುಂಗುವ ಮತ್ತು ತನ್ನ ಭಾಷಿಕರ ಸಂಖ್ಯೆ ಕಡಿಮೆಯಾಗಲು ಕಾರಣವಾದ ಇತರ ಭಾಷೆಗಳ ಮೇಲೆ ಸಿಟ್ಟು ತಳೆಯದೆ ಬೇರೆ ದಾರಿ ಇಲ್ಲ. ಅದು ಹಿಂಸೆಗೆ ದಾರಿ ಮಾಡಿಕೊಡಬಾರದು; ಆ ಎಚ್ಚರ ಅಗತ್ಯ.
ಯೋಧರು, ಭಾಷಾ ಹೋರಾಟಗಾರರು, ಪರಿಸರ ಪ್ರೇಮಿಗಳು
ಅಥವಾ ಸಮುದಾಯದ ಯಾವುದೇ ವಲಯಕ್ಕೆ ಸಂಬಂಧಪಟ್ಟ ಪ್ರೇಮಿಗಳು
ಮತ್ತೊಂದಕ್ಕೆ ತೊಂದರೆಯಾಗದಂತೆ ತಮ್ಮ ಪ್ರೀತಿ ಸಾಬೀತುಪಡಿಸುವುದು ಅಸಾಧ್ಯ.
ಮತ್ತು,
ಅವರಿಂದ ಅಂಥ ತೊಂದರೆಯಾದ ಕ್ಷಣದಲ್ಲೇ
ಅದೆಷ್ಟು ನಿಸ್ವಾರ್ಥವಾಗಿದ್ದರೂ ಅವರ ಪ್ರೇಮ
ಆಧ್ಯಾತ್ಮಿಕ ಗುರುತಿನಿಂದ ದೂರವಾಗುವುದು.
**
ನಿಸ್ವಾರ್ಥ ಪ್ರೇಮ ಆಧ್ಯಾತ್ಮಿಕ ಪ್ರೇಮವಲ್ಲ,
ಆಧ್ಯಾತ್ಮಿಕ ಪ್ರೇಮ ನಿಸ್ವಾರ್ಥಿ.
ನಿರೀಕ್ಷೆಯಿಲ್ಲದ ಪ್ರೇಮ ಆಧ್ಯಾತ್ಮಿಕ ಪ್ರೇಮವಲ್ಲ,
ಆಧ್ಯಾತ್ಮಿಕ ಪ್ರೇಮದಲ್ಲಿ ನಿರೀಕ್ಷೆ ಇರುವುದಿಲ್ಲ.
ಆಧ್ಯಾತ್ಮಿಕ ಪ್ರೇಮಿಗಳಿಗೆ ಯಾವ ಗುರುತಿನ ಹಂಗೂ ಇರುವುದಿಲ್ಲ. ಅವರ ಪ್ರೀತಿ ಇಡಿಯ ಭೂಮಂಡಲವನ್ನೇ ತಬ್ಬುವಂಥದ್ದು. ಅವರು ತಮ್ಮನ್ನು ಒಂದು ದೇಶ ಅಥವಾ ಭಾಷೆಗೆ ಸೀಮಿತಗೊಳಿಸಿಕೊಂಡು ಬಾಳುವುದಿಲ್ಲ.
ಪ್ರಾಣಿ ಪಕ್ಷಿಗಳ ವಿಷಯದಲ್ಲೂ ಅಷ್ಟೇ.
ಅವರಿಗೆ ಯಾವ ಪ್ರಾಣಿಯೂ ಹೆಚ್ಚಲ್ಲ, ಯಾವ ಪ್ರಾಣಿಯೂ ಕಡಿಮೆಯಲ್ಲ. ಒಬ್ಬ ಮನುಷ್ಯನಿಗೆ ಕೊಡುವಷ್ಟೇ ಪ್ರಾಮುಖ್ಯತೆ ಒಂದು ಸೊಳ್ಳೆಗೂ ಕೊಡುವ, ಸೃಷ್ಟಿಯಲ್ಲಿ ಪ್ರತಿಯೊಂದು ಜೀವಕ್ಕೂ ಅದರದ್ದೇ ಪಾತ್ರವಿದೆ, ಮಹತ್ವವಿದೆ ಅನ್ನುವ ಚಿಂತನೆ ಅವರದ್ದು.
ಹಾಗಾದರೆ ಲೋಕದಲ್ಲಿ ಪ್ರತಿಯೊಬ್ಬರೂ ಹೀಗೇ ಆಲೋಚಿಸಬೇಕೇ?
ಪ್ರತಿಯೊಬ್ಬರೂ ಏಕಕಾಲಕ್ಕೆ ಈ ಆಲೋಚನೆ ತಳೆದರೆ ಅಡ್ಡಿ ಇಲ್ಲ. ಒಬ್ಬರು ಮಾತ್ರ ನಾನು ದೇಶಕ್ಕೆ ಸೀಮಿತಗೊಳ್ಳಲಾರೆ, ಇಡೀ ಜಗತ್ತು ನನ್ನ ಮನೆ ಅಂದರೆ ಬಾಳಲಾದೀತೆ? ಭಾಷಾಪ್ರೇಮಿಯೊಬ್ಬರು ನಾನಿನ್ನು ನನ್ನ ಭಾಷೆಯನ್ನಷ್ಟೆ ಪ್ರೀತಿಸುವ ಸಂಕುಚಿತ ಮನಸ್ಥಿತಿ ತೊರೆಯುತ್ತೇನೆ, ಎಲ್ಲರೂ ನಿಮಗಿಷ್ಟ ಬಂದ ಭಾಷೆ ಬಳಸಿ ಅಂದರೆ ಆ ಭಾಷೆ ಉಳಿದೀತೇ?
ಯಾವ ದೇಶವಾದರೂ ಯಾವ ಭಾಷೆಯಾದರೂ ಯಾಕೆ ಉಳಿಯಬೇಕು? ಎಲ್ಲವೂ ಕಾಲಕಾಲಕ್ಕೆ ಸರಿದು ಮುಗಿದುಹೋಗುವಂಥವೇ – ಅನ್ನುತ್ತ ನಾಗರೀಕ ಜವಾಬ್ದಾರಿಗಳಿಂದ ನಮ್ಮನ್ನು ನಾವು ಕಳಚಿಕೊಳ್ಳುವುದು ಸರಿಯೇ?
ಸಾಧ್ಯವಿಲ್ಲ.
ಆದ್ದರಿಂದಲೇ, ಸಮುದಾಯಪ್ರೇಮಿಗಳು ನಿಸ್ವಾರ್ಥಿಗಳಾಗಿದ್ದರೂ ಅಧ್ಯಾತ್ಮವಾದಿಗಳಾಗಲು ಸಾಧ್ಯವಿಲ್ಲ.
ಅಧ್ಯಾತ್ಮವಾದಿಗಳ ಪ್ರೇಮ ಇಡೀ ವಿಶ್ವವನ್ನೇ ಒಳಗೊಂಡಿರುತ್ತದೆ. ಅವರು ಯಾವುದೇ ಗಡಿ, ಗುಡಿ, ನುಡಿಗಳ ಹಂಗಿಗೆ ಒಳಪಡುವುದಿಲ್ಲ. ಅವರಿಗೆ ತಾವು ಹುಟ್ಟಿದ ನಾಡು, ಆಡುವ ನುಡಿಗಳ ಮೇಲೆ ಪ್ರೀತಿ ಇರುವುದಿಲ್ಲ ಎಂದಲ್ಲ; ಅವರಿಗೆ ತಾವು ಹುಟ್ಟದ ನಾಡು, ಆಡದ ನುಡಿಗಳ ಮೇಲೂ ಅಷ್ಟೇ ಪ್ರೀತಿ ಇರುತ್ತದೆ! ಯಾಕೆಂದರೆ ಆ ನಾಡು, ಆ ನುಡಿ ಇನ್ಯಾರಿಗೋ ಪ್ರಿಯವಾಗಿರುತ್ತದೆ. ಮತ್ತು ಆ ಜನರನ್ನೂ ಇವರು ಪ್ರೀತಿಸುತ್ತಾರೆ.
ಆಧ್ಯಾತ್ಮಿಕ ಪ್ರೀತಿ ಎಂದರೆ ಇದು.
ತಮಗೆ ಯಾವ ರೀತಿಯಲ್ಲೂ ಸಂಬಂಧಪಡದ ಜನರನ್ನು, ಅವರಿಗೆ ಸಂಬಂಧ ಪಟ್ಟ ಸಂಗತಿಗಳನ್ನು ಪ್ರೀತಿಸುವುದು.
ಅಷ್ಟು ಮಾತ್ರವಲ್ಲ, ಅಧ್ಯಾತ್ಮವಾದಿಗಳು ನಿರ್ದಿಷ್ಟ ಧಾರ್ಮಿಕ ಗುರುತಿನಿಂದಲೂ ಹೊರತಾದವರು.
ಅವರ ಬೇಸಿಕ್ ಆಚರಣೆಗಳು ತಾವು ಹುಟ್ಟಿ ಬೆಳೆದ ಧರ್ಮದ ರೀತಿಯಂತೆ ಇರಬಹುದು; ಅವರ ಆಲೋಚನೆ, ನಡವಳಿಕೆ, ಒಳಗೊಳ್ಳುವಿಕೆಗಳು ಎಲ್ಲ ಧರ್ಮಗಳತ್ತಲೂ ಚಾಚಿಕೊಂಡಿರುವವು.
ಅಧ್ಯಾತ್ಮವಾದಿಗಳಿಗೆ ಎಲ್ಲ ಧರ್ಮಗಳೂ ಒಂದೇ, ಎಲ್ಲ ದೇವರೂ ಒಂದೇ. ಅವರಿಗೆ ಎಲ್ಲಕ್ಕಿಂತ ಮುಖ್ಯವಾಗೋದು ಪ್ರೀತಿ. ಅದೇ ಅವರ ಪಾಲಿನ ಧರ್ಮ.
ಹಾಗೆಂದ ಮಾತ್ರಕ್ಕೆ ಸಮುದಾಯ ಪ್ರೇಮಿಗಳ ಪ್ರೇಮಕ್ಕೆ ಬೆಲೆ ಇಲ್ಲವೆ ಅವರೂ ಲೌಕಿಕರಂತೆ ಸಾಮಾನ್ಯರೇ?
ಖಂಡಿತಾ ಬೆಲೆ ಇದೆ ಮತ್ತು ಅವರು ಸಾಮಾನ್ಯರಲ್ಲ.
ಸಮುದಾಯ ಪ್ರೇಮ, ಲೌಕಿಕದ ವೈಯಕ್ತಿಕ ಪ್ರೇಮಕ್ಕಿಂತ ಎತ್ತರದ್ದು. ಆದರೆ ಇದನ್ನು ಆಧ್ಯಾತ್ಮಿಕ ಪ್ರೇಮಕ್ಕಿಂತ ಕೆಳಗಿನದ್ದು ಅನ್ನಲಾಗುವುದಿಲ್ಲ. ಇದನ್ನು ಯಾವುದರ ಜೊತೆಗೂ ಹೋಲಿಸಲಾಗದು, ಹೋಲಿಸಲೂಬಾರದು.
ಯಾಕೆಂದರೆ, ಈ ಸಮುದಾಯ ಪ್ರೀತಿ ಸಾಮಾಜಿಕ ವ್ಯವಸ್ಥೆ ಕಾಯ್ದಿಡಲು ಅಗತ್ಯ.
ಎಲ್ಲವೂ ಕಾಲಕ್ರಮೇಣ ನಾಶವಾಗುವವು. ಎಲ್ಲವೂ ಬದಲಾಗುತ್ತ ಹೋಗುವವು. ಯಾವುದೂ ಶಾಶ್ವತವಲ್ಲ ಅನ್ನುವ ಆಧ್ಯಾತ್ಮಿಕ ಸತ್ಯ, ದೈನಂದಿನ ಲೌಕಿಕ ಬದುಕಿನಲ್ಲಿ ಬೇಜವಾಬ್ದಾರಿತನಕ್ಕೆ ಕಾರಣವಾಗಬಾರದು. ಇರುವುದನ್ನು ಇರುವಷ್ಟು ದಿನ ಒಳ್ಳೆಯ ಸ್ಥಿತಿಯಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇರಬೇಕು. ಅಂಥ ಪ್ರಯತ್ನಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಡುವ ಸಮುದಾಯಪ್ರೇಮಿಗಳು ಅಧ್ಯಾತ್ಮದ ಕ್ಯಟಗರಿಗೆ ಸೇರದಿದ್ದರೂ ನಷ್ಟವಿಲ್ಲ, ಅವರು ಗೌರವಕ್ಕೆ ಅರ್ಹರು. ಅವರ ಪ್ರೀತಿ ಅತಿರೇಕಕ್ಕೆ ತಿರುಗಿ ವೃಥಾ ಹಾನಿಗೆ ಕಾರಣವಾಗಬಾರದಷ್ಟೇ.
ಆಧ್ಯಾತ್ಮಿಕ ವಾದಿಗಳ ಪ್ರೇಮ, ಜಗತ್ತಿನ ಜನಸಾಮಾನ್ಯರು ಅತಿರೇಕಿಗಳಾಗದಂತೆ ತಡೆಯುವಲ್ಲಿ ಮುಖ್ಯ ಪಾತ್ರ ವಹಿಸುವುದು. ಅವರ ಪ್ರೇಮದಿಂದ ಹೊಮ್ಮುವ ಕಾಳಜಿಯ ಮಾತುಗಳು, ಅವರು ನೀಡುವ ಮಾರ್ಗದರ್ಶನ, ಜನಸಾಮಾನ್ಯರು ತಮ್ಮ ಪ್ರೀತಿಯ ಕಾರಣದಿಂದ ಸಂಕುಚಿತರಾಗದಂತೆ ತಡೆಯಬಲ್ಲದು.
ಪರಿಣಾಮವಾಗಿ, ಕೇವಲ ತನ್ನ ಕುಟುಂಬದ ಹಿತಕಾಯುವ ಆದ್ಯತೆ ಹೊಂದಿದವರು ನೆರೆಮನೆಯ ಕಷ್ಟಕ್ಕೂ ಕೈನೀಡತೊಡಗುವರು. ತಾನು, ತನ್ನ ಕಣ್ಣಬೊಂಬೆ ಅನ್ನುವ ಮಿತಿಯಿಂದ ಹೊರಬಂದು ಇತರರ ಬಗ್ಗೆ ಸಹನೆ ಬೆಳೆಸಿಕೊಳ್ಳುವರು. ಮತ್ತೊಬ್ಬರಿಗೆ ತೊಂದರೆಯಾಗದಂತೆ ಬಾಳತೊಡಗುವರು.
ಹೀಗೆ ಮತ್ತೊಬ್ಬರ ಕಷ್ಟಕ್ಕೆ ನೆರವಾಗಿ ಬಾಳುವುದು, ಮತ್ತೊಬ್ಬರಿಗೆ ತೊಂದರೆ ಕೊಡದಿರುವುದೆಲ್ಲ ಮನುಷ್ಯ ಸಹಜ ನಡತೆಗಳೇ ಆದರೂ ನಾವು ನಮ್ಮ ದೈನಂದಿನ ಧಾವಂತದಲ್ಲಿ ಅವನ್ನು ಮರೆಯುವುದುಂಟು. ನಮಗೆ ನಮ್ಮ ಆದ್ಯತೆಗಳೇ ಬಹಳವಾಗಿ ಅವುಗಳತ್ತ ಗಮನ ಕೊಡದಿರುವುದಂಟು. ಅಧ್ಯಾತ್ಮವಾದಿಗಳು ಕಾಲಕಾಲಕ್ಕೆ ನಮ್ಮನ್ನು ಎಚ್ಚರಿಸುತ್ತ ನಮ್ಮ ನೋಟ ವಿಸ್ತಾರಗೊಳಿಸುವರು. ಕಣ್ಣಪಟ್ಟಿ ಕಳಚಿ ಬಯಲಿಗೆ ಇಳಿಯುವಂತೆ ಮಾಡುವರು. ಅವರ ಕಾಣ್ಕೆಗಳ ಅರಿವು ಜನಸಾಮಾನ್ಯರ ಎದೆ ಹೊಕ್ಕು, ಹಲವು ಮಿತಿಗಳ ನಡುವಲ್ಲೂ ಪ್ರೀತಿಯ ಸಂತಸದ ಬುಗ್ಗೆ ಚಿಮ್ಮಿಸುವುದು.
ಸೃಷ್ಟಿಯ ಸಮತೋಲನಕ್ಕೆ
ಲೌಕಿಕ ಪ್ರೇಮವೂ ಮುಖ್ಯ, ಆಧ್ಯಾತ್ಮಿಕ ಪ್ರೇಮವೂ ಮುಖ್ಯ.
ಲೌಕಿಕ ಪ್ರೇಮವನ್ನು ಸಹನೀಯಗೊಳಿಸುವುದು
ಆಧ್ಯಾತ್ಮಿಕ ಪ್ರೇಮದ ಹೆಚ್ಚುಗಾರಿಕೆ.
ಸಾವಣ್ಣ ಪ್ರಕಾಶನ । ಪ್ರತಿಗಳಿಗಾಗಿ ಇಲ್ಲಿ ಸಂಪರ್ಕಿಸಿ : https://beetlebookshop.com/products/love ಅಥವಾ https://www.sapnaonline.com/books/love-chetana-thirthahalli-9393224811-9789393224811

