ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಹೂವರಳಿ ನಳನಳಿಸುತ್ತಿದ್ದ ಕೊಂಬೆ ತನ್ನ ಪಕ್ಕದ ಕೊಂಬೆಯ ಜೊತೆ ಮಾತಾಡುತ್ತಾ, ʻಎಂಥಾ ಖಾಲಿ ಖಾಲೀ ದಿನ ಅಲ್ಲವಾ, ಬೋರು,ʼ ಅಂದಿತು. ʻಹೌದಪ್ಪಾ ಹೌದು,ʼ ಅನ್ನುತ್ತ ಇನ್ನೊಂದು ಕೊಂಬೆ ಒಪ್ಪಿ ತೂಗಿತು.
ಆ ಹೊತ್ತಿಗೆ ಗುಬ್ಬಚ್ಚಿಯೊಂದು ಹಾರಿ ಬಂದು ಕೊಂಬೆಯ ಮೇಲೆ ಕೂತಿತು. ಒಂದೆರಡು ಕ್ಷಣ ಕಳೆಯುವಷ್ಟರಲ್ಲಿ ಇನ್ನೊಂದು ಗುಬ್ಬಚ್ಚಿ ಹಾರಿ ಬಂದು ಇನ್ನೊಂದು ಕೊಂಬೆಯ ಮೇಲೆ ಕೂತಿತು.
ʻನನ್ನ ಜೊತೆಗಾರ ನನ್ನ ಬಿಟ್ಟು ಹೋದ,ʼ ಅಂದಿತು ಒಂದು ಗುಬ್ಬಚ್ಚಿ.
ʻನನ್ನ ಜೊತೆಗಾತಿಯೂ ಹೋದಳು. ಹೋದರೆ ಹೋದಳು, ನನಗೇನೂ ನಿನ್ನ ಥರ ಚಿಂತೆ ಇಲ್ಲ,ʼ ಅಂದಿತು ಇನ್ನೊಂದು ಗುಬ್ಬಚ್ಚಿ.
ಎರಡೂ ಹಕ್ಕಿ ಚಿಲಿಪಿಲಿ, ಆಮೇಲೆ ಬೈಗುಳ, ಆಮೇಲೆ ಒಂದರ ಮೇಲೊಂದು ಎರಗಿ ಜಗಳ, ಸದ್ದು ಶುರುವಾದವು.
ಇದ್ದಕಿದ್ದ ಹಾಗೇ ಇನ್ನೆರಡು ಗುಬ್ಬಚ್ಚಿ ಆಕಾಶದಿಂದ ಹಾರಿ ಬಂದು ಚಡಪಡಿಸುತ್ತಿದ್ದ ಈ ಎರಡು ಗುಬ್ಬಿಗಳ ಅಕ್ಕ ಪಕ್ಕದಲ್ಲಿ ಕೂತವು. ತಟ್ಟನೆ ಸದ್ದಡಗಿತು, ಶಾಂತಿ ನೆಲೆಸಿತು.
ಆಮೇಲೆ ಎರಡೆರಡು ಹಕ್ಕಿ ಜೋಡಿಯಾಗಿ ಹಾರಿ ಹೋದವು.
ʻಎಷ್ಟೊಂದು ಜಗಳ, ಗಲಾಟೆ ಇತ್ತಲ್ಲಾ!ʼ ಮರದ ಕೊಂಬೆ ತನ್ನ ಜೊತೆಗಾರ ಕೊಂಬೆಗೆ ಹೇಳಿತು.
ʻಏನು ಬೇಕಾದರೂ ಹೇಳು, ಈಗ ಶಾಂತಿ ಇದೆ, ಮರದ ಮೇಲಿನ ಜಾಗ ವಿಶಾಲವಾಗಿದೆ. ಶಾಂತಿ ಆಕಾಶದಿಂದ ಇಳಿದು ಬಂದರೆ ನೆಲದ ಮೇಲಿರುವವರೂ ಶಾಂತವಾಗಿ ಇರತಾರೆ. ಗಾಳಿಯಲ್ಲಿ ಸ್ವಲ್ಪ ಬೀಸಾಡುತ್ತಾ ನನಗೆ ಚೂರು ಹತ್ತಿರ ಬರಬಾರದಾ ನೀನು?ʼ ಜೊತೆಗಾರ ಕೊಂಬೆ ಹೇಳಿತು.
ʻಈ ವಸಂತ ಮುಗಿಯುವುದರೊಳಗೆ ಶಾಂತಿ ನೆಲೆಸಲಿ,ʼ ಅನ್ನುತ್ತಾ ಬೀಸುವ ಗಾಳಿಯಲ್ಲಿ ಜೊತೆಗಾರ ಕೊಂಬೆಯತ್ತ ವಾಲಿತು.

