ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಯುವಕ ಕವಿ ರಾಜಕುಮಾರಿಯನ್ನು ಕಂಡ. ʻಐ ಲವ್ ಯೂ,ʼ ಅಂದ.
ʻನಾನೂ ನಿನ್ನ ಪ್ರೀತಿಸುತ್ತೇನೆ, ಮಗೂ,ʼ ಅಂದಳು ರಾಜಕುಮಾರಿ.
ʻನಾನು ನಿನ್ನ ಮಗುವಲ್ಲ. ನಾನು ವಯಸಿಗೆ ಬಂದ ಯುವಕ. ಐ ಲವ್ ಯೂ,ʼ ಅಂದ ಕವಿ.
ಆಗ ರಾಜಕುಮಾರಿ, ʻನನಗೆ ಗಂಡು ಮಕ್ಕಳಿದ್ದಾರೆ, ಹೆಣ್ಣು ಮಕ್ಕಳಿದ್ದಾರೆ. ಅವರೂ ಎಷ್ಟೊ ಗಂಡು, ಹೆಣ್ಣು ಮಕ್ಕಳಿಗೆ ಅಪ್ಪ ಅಮ್ಮ ಆಗಿದ್ದಾರೆ. ನನ್ನ ಗಂಡುಮಕ್ಕಳಲ್ಲಿ ಒಬ್ಬನ ಮಗ ನಿನಗಿಂತ ವಯಸಿನಲ್ಲಿ ದೊಡ್ಡವನು,ʼ ಅಂದಳು ರಾಜಕುಮಾರಿ.
ಯುವಕ ಕವಿ, ʻಆದರೂ ಐ ಲವ್ ಯೂ,ʼ ಅಂದ.
ಮುಂದೆ ಸ್ವಲ್ಪ ದಿನದಲ್ಲೇ ರಾಜಕುಮಾರಿ ತೀರಿಕೊಂಡಳು. ಕೊನೆಯುಸಿರು ಎಳೆದುಕೊಂಡು ಮಣ್ಣಿನಲ್ಲಿ ಸೇರುವ ಮುನ್ನ ಅವಳು ಅಂದುಕೊಂಡಳು ಹೀಗೆ—
ʻನನ್ನ ಪ್ರೀತಿಯ ಒಬ್ಬನೇ ಮಗನೇ, ಯುವಕ ಕವಿಯೇ, ಮುಂದೆ ಯಾವತ್ತಾದರೂ ನಾವು ಭೇಟಿ ಆಗಬಹುದು. ಆಗ ನನಗೆ ಎಪ್ಪತ್ತು ಆಗಿರುವುದಿಲ್ಲ.ʼ

