ಸ್ವರ್ಗ ಎನ್ನುವುದು ನಿಮ್ಮೊಳಗಿನ ದೈವಿಕ ಪ್ರಕೃತಿಯ ಹತ್ತಿರದ ಸ್ಥಿತಿ ; ಮತ್ತು ನರಕ ಎನ್ನುವುದು ಇಂಥದೊಂದು ಸ್ಥಿತಿಯಿಂದ ಬಹಳ ದೂರದಲ್ಲಿ ಇರುವ ಸ್ಥಿತಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನರಕದ ಬಗ್ಗೆ ಚಿಂತೆ,
ಸ್ವರ್ಗದ ಬಗ್ಗೆ ಕನಸು
ಎರಡೂ ತಮಾಷೆಯ ಸಂಗತಿಗಳೇ.
ನರಕ, ಬೇರೆಲ್ಲೂ ಇಲ್ಲ
ನರಕದ ಅಸ್ತಿತ್ವ ಇಲ್ಲೇ, ಈ ಕ್ಷಣದಲ್ಲೆ.
ಹಾಗೆಯೇ ಸ್ವರ್ಗ ಕೂಡ.
ಪ್ರತೀ ಬಾರಿ ನಾವು ಪ್ರೀತಿಸಿದಾಗ
ಸ್ವರ್ಗದ ಅಂಗಳದಲ್ಲಿ ದಾಖಲಾಗುತ್ತೇವೆ
ಮತ್ತು
ದ್ವೇಷ, ಅಸೂಯೆ, ಹಿಂಸೆಯಲ್ಲಿ
ಒಂದಾದಾಗ
ನರಕದ ಕೆನ್ನಾಲಿಗೆಗೆ ಆಹಾರವಾಗುತ್ತೆವೆ.
~ ಶಮ್ಸ್ ತಬ್ರೀಝಿ
ಸ್ವರ್ಗ ಮತ್ತು ನರಕ ಎರಡು ಭೌಗೋಳಿಕ ಜಾಗಗಳಲ್ಲ ಅವು ಎರಡು ಮಾನಸಿಕ ಸ್ಥಿತಿಗಳು. ಆನಂದಮಯ ಸ್ಥಿತಿ ಸ್ವರ್ಗವಾದರೆ, ನರಕ ತಲ್ಲಣದ ಸ್ಥಿತಿ.
ಸ್ವರ್ಗ ಮತ್ತು ನರಕ ಎರಡೂ ಮನುಷ್ಯನ ಒಳಗೆಯೇ ಇರುವಂಥವು ಎನ್ನುವ ಪರಿಕಲ್ಪನೆ ಸೂಚಿಸುವುದೇನೆಂದರೆ
, ಒಬ್ಬರ ಆಂತರ್ಯದ ಸ್ಥಿತಿ ಮತ್ತು ಅವರ ಆಯ್ಕೆಗಳು ಅವರ ಖುಶಿಯ ಮತ್ತು ಸಂಕಟದ ಅನುಭವಗಳನ್ನು ರೂಪಿಸುತ್ತವೆ ಎನ್ನುವುದನ್ನ. ಇದರ ಪ್ರಕಾರ ಒಬ್ಬರ ಮನಸ್ಥಿತಿ, ಕ್ರಿಯೆಗಳು ಮತ್ತು ಅಂತರಂಗದ ಸಮಾಧಾನ ಅವರ ಸ್ವರ್ಗ ನರಕಗಳಗಳ ತಿಳುವಳಿಕೆಯನ್ನು ರೂಪಿಸಲು ಸಾಕಷ್ಟು ಕೊಡುಗೆ ನೀಡುತ್ತದೆ. ಮತ್ತು ಅಧ್ಯಾತ್ಮಿಕ ಪ್ರಯಾಣದಲ್ಲಿ ಅವರ ಸ್ವ ಅರಿವು ಮತ್ತು ವೈಯಕ್ತಿಕ ಬೆಳವಣಿಗೆಯ ಮಹತ್ವವನ್ನು ಒತ್ತಿ ಹೇಳುತ್ತದೆ.
ನೀವು ಪ್ರಜ್ಞಾ ಪೂರ್ವಕವಾಗಿ ಬದುಕುವಿರಾದರೆ, ಮತ್ತು ನೀವು ಭಾಗವಹಿಸುವ ಪ್ರತಿ ಕ್ರಿಯೆಯಲ್ಲೂ ಪ್ರಜ್ಞೆಯಿಂದ ತೊಡಗಿಸಿಕೊಳ್ಳಲು ಪ್ರಯತ್ನಿಸುವಿರಾದರೆ, ನೀವು ಶಾಂತ ಆನಂದಮಯ ಸ್ಥಿತಿಯಲ್ಲಿ ಬದುಕುವಿರಿ, ಪ್ರಶಾಂತತೆಯಲ್ಲಿ, ಪ್ರೇಮದಲ್ಲಿ . ಇದು ಸ್ವರ್ಗ.
ನರಕ ಎನ್ನುವುದು ನಿಮ್ಮ ಪ್ರಜ್ಞಾ ರಹಿತ ಸ್ಥಿತಿಯ ಬದುಕು. ನಿಮ್ಮ ಅಸಂಗತ ಸ್ಥಿತಿಯ ಬದುಕು, ಆಗ ನೀವು ನಿಮಗಾಗಿ ಹೆಚ್ಚು ಹೆಚ್ಚು ನೋವಿನ ಸಂಕಟದ ಸ್ಥಿತಿಗಳನ್ನು ಸೃಷ್ಚಿಮಾಡಿಕೊಳ್ಳುತ್ತ ಹೋಗುವಿರಿ.
ಕೊನೆಯದಾಗಿ ವಿಶ್ಲೇಷಣೆ ಮಾಡಿದಾಗ, ಸ್ವರ್ಗ ಎನ್ನುವುದು ನಿಮ್ಮೊಳಗಿನ ದೈವಿಕ ಪ್ರಕೃತಿಯ ಹತ್ತಿರದ ಸ್ಥಿತಿ ; ಮತ್ತು ನರಕ ಎನ್ನುವುದು ಇಂಥದೊಂದು ಸ್ಥಿತಿಯಿಂದ ಬಹಳ ದೂರದಲ್ಲಿ ಇರುವ ಸ್ಥಿತಿ.
ನಿಮ್ಮ ಅಧ್ಯಾತ್ಮಿಕ ಬೆಳವಣಿಗೆ, ನಿಮ್ಮ ಆಂತರ್ಯದ ಪ್ರಕೃತಿಯ ತೀವ್ರ ತುಡಿತಗಳು ಸೂಚಿಸುವ ಹಾದಿಯ ಮೇಲೆ ನೀವು ಸಾಗುವುದರ ಮೇಲೆ ಅವಲಂಬಿತವಾಗಿದೆ.
ಸ್ವರ್ಗ ಮತ್ತು ನರಕ ಎರಡೂ ನಿಮ್ಮೊಳಗೆಯೇ ಇವೆ, ಎರಡೂ ಬಾಗಿಲುಗಳು ನಿಮ್ಮೊಳಗೆಯೇ ಇವೆ. ಪ್ರಜ್ಞಾರಹಿತರಾಗಿ ವ್ಯವಹರಿಸುವಾಗ ನೀವು ನರಕದ ಬಾಗಿಲಲ್ಲಿ ನಿಂತಿರುವಿರಿ ಮತ್ತು ಪ್ರಜ್ಞಾಪೂರ್ವಕವಾಗಿ ಪೂರ್ಣ ಅರಿವಿನೊಂದಿಗೆ ಕ್ರಿಯೆಯಲ್ಲಿ ಪಾಲ್ಗೊಂಡಾಗ ಸ್ವರ್ಗದ ಬಾಗಿಲಲ್ಲಿ.
ಒಂದು ದಿನ ಹೆಂಡತಿಯ ಮೆಮರಿಯ ಬಗ್ಗೆ ನಸ್ರುದ್ದೀನ್ ಗೆಳೆಯನ ಎದುರು ತನ್ನ ಸಮಸ್ಯೆ ಹೇಳಿಕೊಳ್ಳುತ್ತಿದ್ದ.
“ ಅವಳ ಸಲುವಾಗಿ ಸಾಕಾಗಿ ಹೋಗಿದೆ ನನಗೆ, ಇಷ್ಟು ಕೆಟ್ಟ ನೆನಪಿನ ಶಕ್ತಿ ಇರುವವರನ್ನ ನಾನು ಎಲ್ಲೂ ನೋಡಿಲ್ಲ. “
“ ನಿಜ, ನನ್ನ ಹೆಂಡತಿಯೂ ಹಾಗೆಯೇ, ಒಂದು ಸಂಗತಿಯೂ ನೆನಪಿರುವುದಿಲ್ಲ, ಎಲ್ಲೆಂದರಲ್ಲಿ ಪರ್ಸ್, ಫೋನ್, ಕೀಲಿ ಕೈ ಮರೆತು ಬಂದುಬಿಡುತ್ತಾಳೆ. “
ಗೆಳೆಯ, ನಸ್ರುದ್ದೀನ್ ನ ದುಃಖದಲ್ಲಿ ತಾನೂ ಭಾಗಿಯಾದ.
“ ನನ್ನ ಹೆಂಡತಿ ಏನೂ ಮರೆಯುವುದಿಲ್ಲ, ಅವಳ ನೆನಪಿನ ಶಕ್ತಿಯಿಂದಾಗಿ ನನ್ನ ಬಾಳು ನರಕವಾಗಿದೆ “
ನಸ್ರುದ್ದೀನ್ ತನ್ನ ಸಮಸ್ಯೆಯನ್ನು ಬಿಡಿಸಿ ಹೇಳಿದ.
~ ಓಶೋ
*******************************

