ತಮ್ಮನ್ನು ಜಾವೇದ್ ಅಖ್ತರ್ ಎಂದು ತಿಳಿದುಕೊಂಡು ಅಭಿಮಾನ ತೋರಿಸಿದ ಹುಡುಗಿಯ ಬಗ್ಗೆ ಗುಲ್ಜಾರ್ ಬರೆದ ಪದ್ಯ ಇದು! । ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ನಾನೂ ಭೇಟಿ ಮಾಡಿದ್ದೆ
ಒಬ್ಬ ಹುಡುಗಿಯನ್ನು ,
ಪ್ರಾಣ ಬಿಡುತ್ತಿದ್ದಳು ಅವಳು ನಾನೆಂದರೆ
ನನ್ನ ಪರಮ ಅಭಿಮಾನಿಯಾಗಿದ್ದವಳು
ನನ್ನ ಕವಿತೆಗಳ ಚೆಲುವನ್ನು ಗುರುತಿಸುತ್ತಿದ್ದವಳು
ಸೂಕ್ಷ್ಮಗಳನ್ನು ಹಾಡುತ್ತಿದ್ದವಳು.
ಹಿಂಡಿ ಹಿಪ್ಪೆ ಮಾಡುತ್ತಿದ್ದವಂತೆ ಅವಳನ್ನು
ಸದಾ ನನ್ನ ಸಾಲುಗಳು
ನನ್ನ ನೋಡಿದ ಕೂಡಲೇ ಉನ್ಮತ್ತಳಾಗಿಬಿಟ್ಟಳು
ಅಂದು ಯಾಕೋ ಅವಳು
“ನನ್ನ ಹೆಸರನ್ನೇ ಮರೆತುಬಿಡಬಹುದು ನಾನು”
ಎನ್ನುತ್ತ ಆಕೆ ನಕ್ಕಾಗ
ಆಕೆಯನ್ನು ಇನ್ನಷ್ಟು ಸುಂದರಿಯನ್ನಾಗಿಸಿತ್ತು
ಅವಳ ನರ್ವಸ್ ನೆಸ್
ಗಡಿಬಿಡಿಯಲ್ಲಿ ಫೋನ್ ಹೊರತೆಗೆದು
ನನ್ನ ಜೊತೆ ಸೆಲ್ಫಿ ತೆಗೆದುಕೊಂಡು ಹೊರಟೇಬಿಟ್ಟಳು ಆಕೆ
ನನ್ನ ಹೆಸರು ಹೇಳಿ ……. ಥ್ಯಾಂಕ್ಸ್ ಎನ್ನುತ್ತ.
ಆದರೆ ಆ ಹೆಸರು ನನ್ನದಾಗಿರಲಿಲ್ಲ.
ಈ ಜಾವೇದ್
ನನಗಿಂತಲೂ ಒಳ್ಳೆಯ ಕವಿ
ಎನ್ನುವ ಸಂಶಯ ಇತ್ತು ನನಗೆ
ಮೊದಲಿನಿಂದಲೂ.

